ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲೆಯ ಗ್ರಾಮೀಣ ಮತ್ತು ನಗರ ವ್ಯಾಪ್ತಿಯಲ್ಲಿ ಬರುವ ಕೆರೆಗಳಿಗೆ ಪುನರುಜ್ಜೀವನ ಕಾಮಗಾರಿಗಳನ್ನು ಕೈಗೊಂಡು ಅಭಿವೃದ್ಧಿ ಪಡಿಸಬೇಕೆಂದು ಜಿಲ್ಲಾಧಿಕಾರಿ ಸಂಗಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ನಗರಾಭಿವೃದ್ಧಿ ಪ್ರಾಧಿಕಾರ, ಯೋಜನಾ ಪ್ರಾಧಿಕಾರ, ಪುರಸಭಾ ಯೋಜನಾ ಪ್ರಾಧಿಕಾರಗಳ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯಡಿ ಕೆರೆಗಳ ಪುನರುಜ್ಜೀವನ ಶುಲ್ಕ ವಿನಿಯೋಗ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆರೆಗಳ ಪುನರುಜ್ಜೀವನ ಕಾಮಗಾರಿಗಳನ್ನು ತ್ವರಿತವಾಗಿ ಹಾಗೂ ಸುಗಮವಾಗಿ ಕೈಗೆತ್ತಿಕೊಳ್ಳಲು ಜಿಲ್ಲಾ ಮಟ್ಟದಲ್ಲಿ ಏಕ ಗವಾಕ್ಷಿ ಸಮಿತಿ ರಚಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಒಟ್ಟು 268 ಕೆರೆಗಳು ಇದ್ದು, ಅದರಲ್ಲಿ 148 ಕೆರೆಗಳು ಗ್ರಾಮೀಣ ವ್ಯಾಪ್ತಿಯಲ್ಲಿ 68 ಕೆರೆಗಳು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಹಾಗೂ 9 ಕೆರೆಗಳು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುತ್ತವೆ. ಮುಖ್ಯವಾಗಿ ಮುಚಖಂಡಿ ಹಾಗೂ ಮಲ್ಲಾಪುರ ಅಭಿವೃದ್ಧಿ ಪಡಿಸಿದಲ್ಲಿ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಬರುವ ಜುಲೈ 27 ರಂದು ಸ್ವತಃ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.ತಡ ಬೇಲಿ ನಿರ್ಮಾಣ, ಕೆರೆ ಹೂಳು ತೆಗೆಯುವುದು ಮತ್ತು ಕೆರೆಯ ನೀರಿನ ಸಂಗ್ರಹಣೆ ಹೆಚ್ಚಿಸುವ ನಿಟ್ಟಿನಲ್ಲಿ ಅಂತರ್ಜಲ ಮರು ಪೂರ್ಣಗೊಳಿಸುವುದು, ಕೆರೆ ಒತ್ತುವರಿ ತಡೆಯಲು ಅಗತ್ಯ ಗಿಡ ಮರಗಳನ್ನು ಕೆರೆಯ ದಂಡಿಗಳಲ್ಲಿ ಬೆಳೆಸುವುದು, ಕೆರೆ ನೀರಿನ ಶುದ್ಧೀಕರಣ, ನೀರಿನ ಗುಣಮಟ್ಟ ಸುಧಾರಿಸುವ, ಕೊಳಚೆ ನೀರು ಕೆರೆಗೆ ಸೇರದಂತೆ ತಡೆಯುವ ಕಾಮಗಾರಿ, ವಾಯು ವಿಹಾರಕ್ಕೆ ಅಗತ್ಯವಿರುವ ಪದಚಾರಿ ಮಾರ್ಗ, ಪ್ರವಾಸೋದ್ಯಮ ಉತ್ತೇಜಿಸುವ ಕಾಮಗಾರಿಗಳು ಸೇರಿದಂತೆ ಇತರೆ ಕಾಮಗಾರಿ ಕೈಗೊಳ್ಳಲು ವಿವಿಧ ಸ್ಥಳೀಯ ಸಂಸ್ಥೆ, ಪ್ರಾಧಿಕಾರಗಳಿಗೆ ತಿಳಿಸಿದರು.
ಬಾದಾಮಿ ಅಗಸ್ತ್ಯ ತೀರ್ಥ ಹೊಂಡಲ್ಲಿರುವ ಭೂತನಾಥ ದೇವಸ್ಥಾನಕ್ಕೆ ತೆರಳಲು ಒಂದು ಕಡೆ ಮಾತ್ರ ದಾರಿ ಇದ್ದು, ಇನ್ನೊಂದು ಕಡೆಯಲ್ಲಿ ಪ್ರವಾಸಿಗರು ತೆರಳಲು ಅನುಕೂಲವಾಗುವ ನಿಟ್ಟಿನಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕಾಗಿ ಭಾರತೀಯ ಪುರಾತತ್ವ ಇಲಾಖೆಯಿಂದ ಅನುಮತಿಗಾಗಿ ಪತ್ರ ಬರೆಯಲಾಗಿದ್ದು, ಅನುಮತಿ ಬೇಗ ಸಿರುಗಂತೆ ಪ್ರಯತ್ನಿಸಲಾಗುತ್ತಿದೆ ಎಂದು ಪುರಾತತ್ವ ಇಲಾಖೆಯ ಮೂಲಿಮನಿ ಸಭೆಗೆ ತಿಳಿಸಿದರು.ಕೆರೆ ಸಂರಕ್ಷಣೆ ಹಾಗೂ ಪುನರುಜ್ಜೀವನ ಕಾಮಗಾರಿಗಳನ್ನು ಕೆಟಿಪಿಪಿ ಕಾಯ್ದೆ ಹಾಗೂ ಇತರೆ ನಿಯಮಗಳ ಅನುಸಾರ ಎಲ್ಲ ಪ್ರಕ್ರಿಯೆ ಕಡ್ಡಾಯವಾಗಿ ಪಾಲಿಸಬೇಕೆಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು. ಕೆರೆಯ ಪುನರುಜ್ಜೀವನ ಶುಲ್ಕದ ಹಣ ಸದುಪಯೋಗವಾಗಬೇಕು. ಯಾವುದೇ ಕಾರಣಕ್ಕೂ ದುರ್ಬಳಕೆಯಾಗದಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ರುಥ್ರೇನ್, ಜಿಲ್ಲಾ ಭೂ ದಾಖಲೆ ಇಲಾಖೆಯ ಉಪ ನಿರ್ದೇಶಕ ರವಿಕುಮಾರ, ಜಿಲ್ಲಾ ಪ್ರವಾಸೋದ್ಯಮ ಇಲಖೆಯ ಉಪನಿರ್ದೇಶಕ ಜಿ.ಎಸ್.ಹಿತ್ತಲಮನಿ, ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.ಜಿಲ್ಲೆಯ ಪ್ರಸಿದ್ದ ಮುಚಖಂಡಿ ಕೆರೆಗೆ ನೀರು ತುಂಬಿಸಲು ಕ್ರಮಕೈಗೊಳ್ಳಲಾಗುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ವರ್ಷಾತದಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೇ ಅಗಸ್ತ್ಯ ತೀರ್ಥ ಹೊಂಡದಲ್ಲಿ ಬೋಟಿಂಗ್ ವ್ಯವಸ್ಥೆ ಕ್ರಮವಹಿಸಲಾಗುತ್ತಿದೆ.-ಸಂಗಪ್ಪ ಜಿಲ್ಲಾಧಿಕಾರಿ ಬಾಗಲಕೋಟೆ