ಚಿಕ್ಕಮಗಳೂರುಇನ್ನೂ ಮೂರು ತಿಂಗಳು ಮಳೆಗಾಲವಿದ್ದರೂ ಸದ್ಯಕ್ಕೆ ಮಳೆಕೊರತೆ ಹಿನ್ನೆಲೆ ಜಿಲ್ಲೆಯಲ್ಲಿ ಕುಡಿಯುವ ನೀರು, ಜಾನು ವಾರುಗಳ ಮೇವಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಇನ್ನೂ ಮೂರು ತಿಂಗಳು ಮಳೆಗಾಲವಿದ್ದರೂ ಸದ್ಯಕ್ಕೆ ಮಳೆಕೊರತೆ ಹಿನ್ನೆಲೆ ಜಿಲ್ಲೆಯಲ್ಲಿ ಕುಡಿಯುವ ನೀರು, ಜಾನು ವಾರುಗಳ ಮೇವಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಪ್ರಕೃತಿ ವಿಕೋಪ ನಿರ್ವಹಣೆಯ ತಯಾರಿ ಕುರಿತ ಸಭೆಯಲ್ಲಿ ಮಾತನಾಡಿ ಆದ್ಯತೆ ಮೇಲೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿಗೆ ಸಮಸ್ಯೆ ಉಂಟಾಗದಂತೆ ಕ್ರಮವಹಿಸಬೇಕು. ಜುಲೈ, ಆಗಸ್ಟ್ ನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ, ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರಕ್ಕೆ ತೊಂದರೆ ಎದುರಾಗದಂತೆ ನೋಡಿ ಕೊಳ್ಳಿ. ಪಹಣಿ ಹೊಂದಿದ ರೈತರಿಗೆ ರಸಗೊಬ್ಬರ, ಬಿತ್ತನೆ ಬೀಜ ಬೇಡಿಕೆಗೆ ಅನುಗುಣವಾಗಿ ವಿತರಿಸಲು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಮಾತನಾಡಿ ನಿಗದಿತ ಪ್ರಮಾಣದಷ್ಟು ಮಳೆ ಆಗಿಲ್ಲ. ಮುಂಗಾರು ಹಂಗಾಮಿನಲ್ಲಿ 97 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈವರೆಗೆ 2954 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ಮಳೆ ಬಾರ ದಿರುವ ಕಾರಣ ಬಿತ್ತನೆ ಕಾರ್ಯ ವಿಳಂಬವಾಗಿದೆ ಎಂದು ಮಾಹಿತಿ ನೀಡಿದರು.
ರಾಗಿ, ಮುಸುಕಿನ ಜೋಳ, ಭತ್ತ, ತೊಗರಿ, ಅವರೆ, ಹುರುಳಿ, ಸಿರಿಧಾನ್ಯ ಬಿತ್ತನೆಗೆ ರೈತರು ಭೂಮಿ ಹದ ಮಾಡಿಕೊಂಡಿದ್ದಾರೆ. 13,873 ಹೆಕ್ಟೇರ್ ನಲ್ಲಿ ತೋಟಗಾರಿಕೆ ಬೆಳೆ ಬಿತ್ತನೆ ಗುರಿ ಹೊಂದಲಾಗಿದೆ. 3,828 ಹೆಕ್ಟೇರ್‌ನಲ್ಲಿ ಮಾತ್ರ ಈರುಳ್ಳಿ, ಮೆಣಸಿನ ಕಾಯಿ, ಟೊಮ್ಯಾಟೋ ಬಿತ್ತನೆ ಮಾಡಲಾಗಿದೆ ಎಂದರು.
ಈಗಾಗಲೇ ಸರಬರಾಜು 54,881 ಮೆಟ್ರಿಕ್ ಟನ್ ರಸಗೊಬ್ಬರ ಮಾರಾಟವಾಗಿದ್ದು 51,486 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದೆ. ಇನ್ನೂ 50 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ರಸಗೊಬ್ಬರ ಮತ್ತು ಬಿತ್ತನೆ ಬೀಜಕ್ಕೆ ಕೊರತೆಯಾಗದಂತೆ ಕ್ರಮ ವಹಿಸಲಾಗುವುದು ಎಂದರು.ಮೇ ಹಾಗೂ ಜೂನ್‌ನಲ್ಲಿ ಮಳೆ-ಗಾಳಿಗೆ 15ಶಾಲಾ, 3 ಅಂಗನವಾಡಿ ಕಟ್ಟಡಗಳಿಗೆ ಹಾನಿಯಾಗಿದೆ. ₹37.50 ಲಕ್ಷ ನಷ್ಟ ಸಂಭವಿಸಿದೆ. ಹಾನಿಗೆ ಒಳಗಾಗಿದ್ದ 1870 ವಿದ್ಯುತ್ ಕಂಬಗಳನ್ನು ಬದಲಾಯಿಸಲಾಗಿದ್ದು, ಸುಮಾರು ₹2.95 ಕೋಟಿ ವೆಚ್ಚವಾಗಿದೆ. ಅಲ್ಲದೆ, 38 ಕಿ.ಮೀ.ನಷ್ಟು ವಿದ್ಯುತ್ ಸಂಪರ್ಕ ತಂತಿ ಅಳವಡಿಸಲಾಗಿದೆ. ಇದಕ್ಕೆ ₹27.95 ಲಕ್ಷ ವೆಚ್ಚವಾಗಿದೆ ಎಂದು ಮಾಹಿತಿ ನೀಡಿದರು.
ತರೀಕೆರೆ ತಾಲೂಕು ಲಕ್ಕವಳ್ಳಿ ವ್ಯಾಪ್ತಿಯ ಅಡಕೆ ತೋಟಗಳಲ್ಲ್ಲಿ 800ಕ್ಕೂ ಹೆಚ್ಚು ಮರಗಳು ಗಾಳಿಯಿಂದ ನೆಲಕ್ಕುರುಳಿವೆ. ಈ ಬಗ್ಗೆ ನಷ್ಟದ ಅಂದಾಜು ಮಾಡಿ ಪರಿಹಾರ ವಿತರಿಸುವಂತೆ ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್ ಸಭೆ ಗಮನ ಸೆಳೆದಾಗ, ಸಚಿವರು ಈ ಬಗ್ಗೆ ಪ್ರತಿಕ್ರಿಯಿಸಿ ಅಗತ್ಯ ಕ್ರಮ ವಹಿಸಲು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ ಮಾಹಿತಿ ನೀಡಿ 20ಗ್ರಾಪಂ ವ್ಯಾಪ್ರಿಯ 27 ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದೆ. 8 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಇವುಗಳಲ್ಲಿ ಮೂರು ಇಲಾಖಾ ಟ್ಯಾಂಕರ್‌ಗಳು, ಐದು ಖಾಸಗಿ ಟ್ಯಾಂಕರ್‌ಗಳಿವೆ. ಉಳಿದಂತೆ 19ಖಾಸಗಿ ಬೋರ್‌ವೆಲ್ ಗಳನ್ನು ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.ಜಿಲ್ಲೆಯಲ್ಲಿ 8 ತಿಂಗಳಿಗಾಗುವಷ್ಟು ಮೇವು ದಾಸ್ತಾನಿದ್ದು, ಯಾವುದೇ ಕೊರತೆ ಇಲ್ಲ ಎಂದು ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕರು ಮಾಹಿತಿ ನೀಡಿದರು.ಶಾಸಕರಾದ ಟಿ.ಡಿ.ರಾಜೇಗೌಡ, ಕೆ.ಎಸ್.ಆನಂದ್, ಎಚ್.ಡಿ.ತಮ್ಮಯ್ಯ, ಎಸ್.ಎಲ್.ಭೋಜೇಗೌಡ ಮಳೆಯಿಂದ ಹಾನಿಗೆ ಒಳಗಾದ ರಸ್ತೆ ದುರಸ್ತಿ ಬಗ್ಗೆ, ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಮತ್ತು ಪೂರೈಕೆ ಬಗ್ಗೆ ಸಭೆಯ ಗಮನ ಸೆಳೆದರು.ಸಭೆಯಲ್ಲಿ ರಾಜ್ಯ ಪರಿಸರ ಮೌಲ್ಯ ಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಎಚ್.ಹರೀಶ್, ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಕೆಪಿಟಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ರಾಮ್ ಪ್ರಸಾತ್ ಮನೋಹರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಉಪಸ್ಥಿತರಿದ್ದರು.
ಗೃಹ ಜ್ಯೋತಿಗೆ ಜಾತಿ, ಪಾನ್ ಕಾರ್ಡ್ ಕೇಳುವುದರಲ್ಲಿ ತಪ್ಪೇನಿದೆ?: ಸಚಿವ ಕೆ.ಜೆ.ಜಾರ್ಜ್‌ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು‘ಗೃಹಜ್ಯೋತಿ’ ಯೋಜನೆಗೆ ಜಾತಿ ಪ್ರಮಾಣ ಪತ್ರ, ಪಾನ್ ಕಾರ್ಡ್ ಕೇಳುವುದಲ್ಲಿ ತಪ್ಪೇನಿದೆ. ಶಾಲಾ ದಾಖಲಾತಿ ವೇಳೆ ಜಾತಿ ಬರೆಸುವುದಿಲ್ಲವೇ ಎಂದು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಹಾಗೂ ಇಂಧನ ಸಚಿವ ಕೆ.ಜೆ.ಜಾರ್ಜ್ ಪ್ರಶ್ನಿಸಿದ್ದಾರೆ.ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ 1.64 ಕೋಟಿ ಜತೆಗೆ ಗೃಹಜ್ಯೋತಿ ಯೋಜನೆ ಲಾಭ ಪಡೆಯುತ್ತಿ ದ್ದಾರೆ. ಕೆಲವರು ಗೃಹ ಜ್ಯೋತಿ ಯೋಜನೆ ವಾಣಿಜ್ಯ ಉದ್ದೇಶಕ್ಕೆ ಬಳಕೆ ಸೇರಿದಂತೆ ದುರ್ಬಳಕೆ ಮಾಡುತ್ತಿರುವ ಬಗ್ಗೆ ದೂರು ಬಂದಿದೆ. ಹೀಗಾಗಿ, ಪರಿಶೀಲನೆ ನಡೆಸಲಾಗುತ್ತಿದೆ. ಈ ವೇಳೆ ಜಾತಿ ಪ್ರಮಾಣ ಪತ್ರ ಹಾಗೂ ಪಾನ್ ಕಾರ್ಡ್ ದಾಖಲೆ ಪಡೆಯಲಾಗುತ್ತಿದೆ ಎಂದ ಅವರು, ಜಾತಿ ಆಧಾರದಲ್ಲಿ ಯೋಜನೆ ನೀಡುವುದಿಲ್ಲ. ಯ್ಯೂನಿಟ್ ಬಳಕೆ ಆಧಾರದಲ್ಲಿ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.ಮಲೆನಾಡು ಪ್ರವಾಸೋದ್ಯಮ ಬಗ್ಗೆ ಸಿಎಂ ಸಭೆಇತ್ತೀಚಿಗೆ ಕರಾವಳಿ ಪ್ರವಾಸೋದ್ಯಮದ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅದೇ ರೀತಿ ಮಲೆನಾಡು ಪ್ರವಾಸೋದ್ಯಮದ ಬಗ್ಗೆ ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ಈ ವೇಳೆ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಮಡಿಕೇರಿಯ ಪ್ರವಾಸೋದ್ಯಮ ಅಭಿವೃದ್ಧಿ ಚರ್ಚೆ ನಡೆಸಲಾಗುತ್ತದೆ. ಜತೆಗೆ, ಚಿಕ್ಕಮಗಳೂರು ಜಿಲ್ಲಾ ಪ್ರವಾಸೋದ್ಯಮ ಕುರಿತು ಒಂದು ದಿನ ಪ್ರತ್ಯೇಕವಾಗಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಈ ವೇಳೆ ಜಿಲ್ಲೆಯ ಪ್ರವಾಸೋದ್ಯಮದ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೆ.ಜೆ.ಜಾರ್ಜ್ ಹೇಳಿದರು.----ಬಾಕ್ಸ್---ಚಿಕ್ಕಮಗಳೂರು ಶಾಸಕರಿಗೆ ಸಚಿವ ಸ್ಥಾನ ನೀಡಬೇಕು: ಸಚಿವ ಕೆ.ಜೆ.ಜಾರ್ಜ್‌ಚಿಕ್ಕಮಗಳೂರು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಐದಕ್ಕೆ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂದು ಈ ಹಿಂದೆಯೇ ಪ್ರತಿಪಾದಿಸಿದ್ದೇನೆ. ಈಗಲೂ ಅದನ್ನೇ ಪ್ರತಿಪಾದಿಸುತ್ತೇವೆ. ಈ ಜಿಲ್ಲೆಯ ಶಾಸಕರು ಸಚಿವರಾದರೆ, ಕೆಲಸ ಕಾರ್ಯಗಳು ಸುಲಭವಾಗಲಿದೆ ಎಂದು ಸುದ್ದಿಗಾರರ ಪ್ರಶ್ನೆ ಪ್ರತಿಕ್ರಿಯೆ ನೀಡಿದರು.----ಬಾಕ್ಸ್---ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನಕ್ಕೆ ಶಾಸಕರಿಂದಲೇ ಅಸಮಾಧಾನವೇ?ಸಚಿವ ಕೆ.ಜೆ.ಜಾರ್ಜ್ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂದು ಮಾಧ್ಯಮವರಿಗೆ ತಿಳಿಸುವ ವೇಳೆಯಲ್ಲಿ ಧ್ವನಿಗೂಡಿದ ಕಡೂರು ಶಾಸಕ ಆನಂದ್ 5 ವರ್ಷ ಸಚಿವ ಕೆ.ಜೆ.ಜಾರ್ಜ್ ಅವರೇ ಉಸ್ತುವಾರಿ ಸಚಿವರಾಗಿರಬೇಕು. ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡಿದರೆ ಆ ಸಚಿವರು ಬೇರೆ ಜಿಲ್ಲೆಯ ಉಸ್ತುವಾರಿ ವಹಿಸಿಕೊಳ್ಳಲಿ ಎನ್ನುವ ಮೂಲಕ ಪರೋಕ್ಷವಾಗಿ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಅಸಮಾಧಾನ ಹೊರಹಾಕಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.