ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ತಾಲೂಕಿನಲ್ಲಿ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಬೇಕು ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಪಟ್ಟಣದ ತಾಪಂ ರಾಜೀವಗಾಂಧಿ ಸಭಾಂಗಣದಲ್ಲಿ ಬುಧವಾರ ನಡೆದ ಗ್ರಾಮಲೆಕ್ಕಿಗರು, ಪಿಡಿಒ, ತಾಪಂ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ತೌಡೂರು, ಅಣಜಿಗೇರಿ, ಕ್ಯಾರಕಟ್ಟಿ, ಯು.ಬೇವಿನಹಳ್ಳಿ ಸಣ್ಣ ತಾಂಡಾ, ದೊಡ್ಡ ತಾಂಡಾ, ಹಾರಕನಾಳು ಸಣ್ಣ ತಾಂಡಾ, ಲಕ್ಷ್ಮೀಪುರ, ಎನ್.ಶೀರನಹಳ್ಳಿ, ಹುಣಸಿಕಟ್ಟೆ ಮುಂತಾದ ಗ್ರಾಮಗಳಲ್ಲಿ ವಿವಿಧ ಕಾರಣಗಳಿಂದ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಆಯಾ ಭಾಗದ ಗ್ರಾಪಂ ಪಿಡಿಒಗಳು ಸಭೆಯ ಗಮನಕ್ಕೆ ತಂದರು.ತೌಡೂರು, ಅಣಜಿಗೇರಿ ಗ್ರಾಮಗಳಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಇನ್ನೂ ಕೆಲವೊಂದು ಕಡೆ ಖಾಸಗಿ ಕೊಳವೆ ಬಾವಿಗಳಿಂದ ಬಾಡಿಗೆ ಆದಾರದ ಮೇಲೆ ನೀರು ಪಡೆದು ಸಾರ್ವಜನಿಕರಿಗೆ ಕುಡಿಯಲು ನೀರು ನೀಡಲಾಗುತ್ತದೆ ಎಂದು ಪಿಡಿಒಗಳು ತಿಳಿಸಿದರು.
ಉಚ್ಚಂಗಿದುರ್ಗ ಗ್ರಾಮದಲ್ಲಿ ಕುಡಿಯುವ ನೀರು ಪೂರೈಸಲು ₹12 ಲಕ್ಷ ಅನುದಾನ ಕೊಡುವುದಾಗಿ ಡಿಸಿಯವರು ತಿಳಿಸಿದರು. ಲಕ್ಷ್ಮೀಪುರ ಗ್ರಾಮದಲ್ಲಿ ನೀರು ಇದೆ, ಆದರೆ ನಿರ್ವಹಣೆ ಸರಿಯಿಲ್ಲ ಎಂದು ಆ ಭಾಗದ ಪಿಡಿಒ ಹೇಳಿದಾಗ ಡಿಸಿಯವರು ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳ ಮೇಲೆ ಗರಂ ಆಗಿ ಕೂಡಲೇ ಸೂಕ್ತ ನಿರ್ವಹಣೆ ಮಾಡಿ ಎಂದು ಸೂಚಿಸಿದರು.ಒಟ್ಟಿನಲ್ಲಿ ಮುಂಗಾರು ಆರಂಭವಾಗಿ ಉತ್ತಮ ಮಳೆ ಬರುವವರೆಗೂ ಒಂದು ತಿಂಗಳು ಬಹಳ ಜಾಗೃತಿಯಿಂದ ಇದ್ದು, ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಿ, ಹಣಕ್ಕೆ ಕೊರತೆ ಇಲ್ಲ ಎಂದು ಡಿಸಿ ದಿವಾಕರ ಹೇಳಿದರು.
ಉಚ್ಚಂಗಿದುರ್ಗ ಉತ್ಸವಾಂಭ ದೇವಾಲಯದ ಅಭಿವೃದ್ಧಿಗೆ ₹10 ಕೋಟಿ ಅನುದಾನ ನಿಗದಿಯಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.ತಾಲೂಕಿನಲ್ಲಿ ಸ್ಮಶಾನ ಅಭಿವೃದ್ಧಿ ಕುರಿತು ನರೇಗಾ ಸಹಾಯಕ ನಿರ್ದೆಶಕ ಸೋಮಶೇಖರ ಮಾಹಿತಿ ನೀಡಿದರು. 24 ಸ್ಮಶಾನಗಳು ಒತ್ತುವರಿಯಾಗಿವೆ ಎಂದು ಹೇಳಿದಾಗ ಜಿಲ್ಲಾಧಿಕಾರಿಯವರು ಕೂಡಲೇ ಒತ್ತುವರಿ ತೆರವುಗೊಳಿಸಿ ಎಂದು ಪಿಡಿಒಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ 349 ಗ್ರಾಮಗಳಲ್ಲಿ ತಾಲೂಕಿನಲ್ಲಿ 120 ಗ್ರಾಮಗಳಲ್ಲಿ ಫಲಾನುಭವಿಗಳಿಗೆ ಮನೆಗಳ ಹಕ್ಕುಪತ್ರಗಳಿಲ್ಲ, ಇಂತಹ 20 ಸಾವಿರ ಫಲಾನುಭವಿಗಳು ಇದ್ದಾರೆ, ಸಕ್ರಮ ಮಾಡಲು ಕ್ರಮ ವಹಿಸಿದ್ದೇವೆ ಎಂದು ಹೇಳಿದರು.73118 ಪೋಡಿ ಮುಕ್ತ:
ವಿಜಯನಗರ ಜಿಲ್ಲೆಯಲ್ಲಿ 73118 ಫಲಾನುಭವಿಗಳಿಗೆ ಪೋಡಿ ಮುಕ್ತ ಮಾಡಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಸಹ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲು ಸೂಚಿಸಿದರು. ಜಿಪಂ ಸಿಇಒ ನೊಂಗ್ಜಾಯ್ ಮೊಹಮದ್ ಅಲಿ ಅಕ್ರಮ ಶಾ , ಉಪವಿಭಾಗಾಧಿಕಾರಿ ಚಿದಾನಂದಗುರುಸ್ವಾಮಿ, ತಹಶೀಲ್ದಾರ ಬಿ.ವಿ. ಗಿರೀಶಬಾಬು, ತಾಪಂ ಇಒ ಚಂದ್ರಶೇಖರ ವೈ.ಎಚ್, ಸಹಾಯಕ ನಿರ್ದೇಶಕರಾದ ಸೋಮಶೇಖರ, ವೀರಣ್ಣ ಲಕ್ಕಣ್ಣನವರ್, ಮತ್ತೂರು ಬಸವರಾಜ ಇದ್ದರು.