ಹೆಚ್ಚುತ್ತಿರುವ ತಾಪಮಾನ ತಡೆಗಟ್ಟಲು ಮುಂದಾಗಿ: ಶಾಸಕ ದರ್ಶನ್ ಪುಟ್ಟಣ್ಣಯ್ಯ ಮನವಿ

KannadaprabhaNewsNetwork |  
Published : Jun 18, 2026, 01:45 AM IST
17ಕೆಎಂಎನ್ ಡಿ15 | Kannada Prabha

ಸಾರಾಂಶ

ವಿದ್ಯಾರ್ಥಿಗಳು ಗ್ರಾಮದಲ್ಲಿ ಅಧ್ಯಯನ ನಡೆಸಿದ ವಿವರಗಳನ್ನು ಗ್ರಾಮಾಡಳಿತ, ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತಕ್ಕೆ ತಲುಪಿಸುತ್ತಾರೆ. ಗ್ರಾಮದಲ್ಲಿನ ಆರೋಗ್ಯ, ಶಿಕ್ಷಣ, ಆರ್ಥಿಕ ಸಮಾನತೆ ಪಾಲಿಸುವ ವರದಿಯನ್ನು ಮಕ್ಕಳು ಸಮೀಕ್ಷೆ ಮಾಡಿದ್ದಾರೆ. ಇದರ ಆಧಾರದ ಮೇಲೆ ಅಭಿವೃದ್ಧಿಪರ ಯೋಜನೆಗಳನ್ನು ಹಮ್ಮಿಕೊಳ್ಳಲಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಗಿಡ ಮರಗಳ ನಾಶದಿಂದ ತಾಪಮಾನ ಹೆಚ್ಚಳವಾಗಿ ಆಗುತ್ತಿರುವ ವೈಪರೀತ್ಯಗಳನ್ನು ತಡೆಗಟ್ಟಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮನವಿ ಮಾಡಿದರು.

ತಾಲೂಕಿನ ಹೊಳಲು ಗ್ರಾಮದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರ, ಸಮಾಜ ಕಾರ್ಯ ವಿಭಾಗ, ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ವತಿಯಿಂದ ನಡೆದ ಪರಿಸರ ಸಮೃದ್ಧಿ ಗ್ರಾಮೀಣ ಕಾರ್‍ಯ ಶಿಬಿರದಲ್ಲಿ ಸಮಾರೋಪ ಭಾಷಣ ಮಾಡಿದರು.

ಪರಿಸರದಲ್ಲಿ ಸಮನ್ವಯ ಸಾಧಿಸಲು ಪ್ರತಿಯೊಬ್ಬರೂ ಕಾರ್‍ಯ ಪ್ರವೃತ್ತರಾಗಬೇಕು. ಮುಂಗಾರು ಮಳೆ ಕೈಕೊಟ್ಟು ತಲ್ಲಣಗೊಳಿಸಿದೆ. ಇದರಿಂದ ನಾವು ಸಾಕಷ್ಟು ಪಾಠ ಕಲಿಯಬೇಕಿದೆ. ಜಾಗತಿಕ ತಾಪಮಾನದಿಂದ ಸಾಕಷ್ಟು ಅವಘಡಗಳನ್ನು ಸೃಷ್ಟಿಸುತ್ತಿದೆ. ಜನರು ಸಸಿ ಅಥವಾ ಪರಿಸರಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಸಕ್ರಿಯರಾಗುವುದು ತುಂಬಾ ಅವಶ್ಯಕ ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಪರಿಸರ ವಿಸ್ತರಿಸಿಕೊಂಡು ಜಲಸಂರಕ್ಷಣೆ, ಅರಣ್ಯೀಕರಣ, ಸ್ವಚ್ಛತೆಗೆ ವಿಶೇಷ ಗಮನ ಕೊಡಬೇಕಿದೆ. ಅದೇ ರೀತಿ ವಿದ್ಯಾರ್ಥಿಗಳು ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆಯೊಡನೆ ಶ್ರಮದಾನದ ಮೂಲಕ ಸಸ್ಯ ಸಂಕುಲಗಳ ಬೆಳವಣಿಗೆಗೆ ವಿಶೇಷ ಗಮನ ಹರಿಸಿರುವುದಕ್ಕೆ ಶ್ಲಾಘಿಸಿದರು.

ಮಾಜಿ ಶಾಸಕ ಎಚ್.ಬಿ.ರಾಮು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರು ಒಗ್ಗಟ್ಟಿನಿಂದ ಗ್ರಾಮಾಭಿವೃದ್ದಿ ಯೋಜನೆಗಳಿಗೆ ಸಹಕರಿಸಬೇಕು. ಪರಿಸರ, ಶಿಕ್ಷಣ, ಆರೋಗ್ಯ ಇವು ದೈನಂದಿನ ಕಾರ್‍ಯಗಳಾಗಿದೆ. ಇಂದಿನ ದಿನಗಳಲ್ಲಿ ಸದ್ಭಾವನೆ ಹೊಂದಿರುವ ಜನರು ಶ್ರೇಷ್ಠ ಕಾರ್‍ಯಗಳಲ್ಲಿ ಮಗ್ನರಾಗಿ ಮಾದರಿ ಆಗಬೇಕಿದೆ ಎಂದರು.

ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿ, ಸಮಾಜ ಕಾರ್‍ಯ ವಿಭಾಗದ ವಿದ್ಯಾರ್ಥಿಗಳು ಸಮೀಕ್ಷೆ ಅಥವಾ ನಕ್ಷೆ ತಯಾರಿಕೆಗೆ ಸೀಮಿತವಾಗದೆ ಮಾಟೆಂಕ್ ಸಿಂಗ್ ಅಹ್ಲುವಾಲಿಯಾ ಅವರ ಆಲೋಚನಾ ಕ್ರಮವನ್ನು ಅರ್ಥೈಸಿಕೊಂಡು ಹಳ್ಳಿಯಿಂದ ನಗರ ಪ್ರದೇಶಕ್ಕೆ ವಲಸೆ ಹೋಗುವ ಜನರಿಗೆ ಉಪಯೋಗವಾಗುವಂತೆ ಆದಾಯೋತ್ಪನ್ನ ಚಟುವಟಿಕೆಗಳನ್ನು ನಡೆಸಲು ಈ ಶಿಬಿರಗಳಿಂದ ಸಾಧ್ಯವಾಗಿವೆ ಎಂದು ತಿಳಿಸಿದರು.

ಸರ್ ಎಂವಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಎಚ್.ವಿ.ವೆಂಕಟೇಶಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಗ್ರಾಮದಲ್ಲಿ ಅಧ್ಯಯನ ನಡೆಸಿದ ವಿವರಗಳನ್ನು ಗ್ರಾಮಾಡಳಿತ, ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತಕ್ಕೆ ತಲುಪಿಸುತ್ತಾರೆ. ಗ್ರಾಮದಲ್ಲಿನ ಆರೋಗ್ಯ, ಶಿಕ್ಷಣ, ಆರ್ಥಿಕ ಸಮಾನತೆ ಪಾಲಿಸುವ ವರದಿಯನ್ನು ಮಕ್ಕಳು ಸಮೀಕ್ಷೆ ಮಾಡಿದ್ದಾರೆ. ಇದರ ಆಧಾರದ ಮೇಲೆ ಅಭಿವೃದ್ಧಿಪರ ಯೋಜನೆಗಳನ್ನು ಹಮ್ಮಿಕೊಳ್ಳಲಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಒಕ್ಕಲಿಗರ ಸಂಘದ ಮಾಜಿ ಉಪಾಧ್ಯಕ್ಷ ಎಚ್.ಎಲ್. ಶಿವಣ್ಣ ಕ್ರೀಡಾ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಿದರು. ಸಮಾರಂಭದಲ್ಲಿ ಬ್ಯಾಂಕ್ ಆಫ್ ಬರೋಡದ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕಿ ಕೆ.ಪಿ.ಅರುಣಕುಮಾರಿ, ಮೈಸೂರು ವಿವಿ ಸಮಾಜಕಾರ್‍ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಚಂದ್ರಮೌಳಿ, ತಾಂಡವೇಶ್ವರ ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಮು, ಗ್ರಾಪಂ ಮಾಜಿ ಅಧ್ಯಕ್ಷೆ ಸುಧಾ, ಪಿಡಿಒ ಸುನಿಲ್, ಗ್ರಾಮ ಆಡಳಿತ ಅಧಿಕಾರಿ ಗುಣಶೇಖರ್, ಸಮಾಜಕಾರ್‍ಯ ವಿಭಾಗದ ಪ್ರಾಧ್ಯಾಪಕರಾದ ಸುನಿಲ್, ಕಿರಣ್, ಯುವ ಮುಖಂಡ ಸಂತೋಷ್, ಕೆ.ಎಂ.ಕೃಷ್ಣೇಗೌಡ ಹಲವರು ಭಾಗವಹಿಸಿದ್ದರು.

ಹೊಳಲು ಗ್ರಾಮದ ದೊಡ್ಡಯ್ಯಸ್ವಾಮಿ, ಮೂಡಲು ಬಸವೇಶ್ವರ ಹಾಗೂ ಸಾರ್ವಜನಿಕ ಸ್ಮಶಾನದಲ್ಲಿ 300 ಗಿಡಗಳನ್ನು ನಾಟಿ ಮಾಡಲಾಯಿತು. ತರುವಾಯ ಗ್ರಾಮಸ್ಥರುಗಳಿಗೆ ಸಾವಿರಾರು ಹಣ್ಣಿನ ಗಿಡಗಳು ಮತ್ತು ಅರಣ್ಯಕ್ಕೆ ಪೂರಕವಾದ ಗಿಡಗಳನ್ನು ವಿತರಿಸಲಾಯಿತು. ರಕ್ತದಾನ ಶಿಬಿರ, ಗ್ರಾಮೀಣ ಕ್ರೀಡಾಕೂಟ, ಆರೋಗ್ಯ ತಪಾಸಣೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಗ್ರಾಮೀಣ ರೈತ ಮಹಿಳೆಯರಿಗೆ ಬಟ್ಟೆ ಬ್ಯಾಗ್ ವಿತರಣೆ, ಆರ್ಥಿಕ ಸಾಕ್ಷರತೆ ಹಾಗೂ ಬ್ಯಾಂಕುಗಳಲ್ಲಿ ಸಿಗುವ ವಿಮೆಗಳ ಕುರಿತು ಸಾಮಾಜಿಕ ಭದ್ರತಾ ಯೋಜನೆಗಳ ನೋಂದಾವಣೆ ಆಂದೋಲನ ಕಾರ್‍ಯಕ್ರಮ ಹಾಗೂ ಗ್ರಾಮೀಣ ಮಹಿಳೆಯರಿಗೆ ಕೋಲಾಟ ತರಬೇತಿ, ಪ್ರದರ್ಶನ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೌಟುಂಬಿಕ ಕಲಹ: ಆತ್ಮಹತ್ಯೆಗೆ ಶರಣಾದ ಆಟೋ ಚಾಲಕ
ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಅಂಗಡಿಗಳ ತೆರವು