ಬರ ನಿರ್ವಹಣೆ, ಪರಿಹಾರ ವಿತರಣೆಗೆ ತುರ್ತುಕ್ರಮ ಕೈಗೊಳ್ಳಿ

KannadaprabhaNewsNetwork |  
Published : Apr 12, 2024, 01:02 AM IST
ಅಅಅ | Kannada Prabha

ಸಾರಾಂಶ

ಬೆಳಗಾವಿ: ಬರಗಾಲದ ಹಿನ್ನೆಲೆಯಲ್ಲಿ ರೈತರು ಸಂಕಷ್ಟ ಪಡುತ್ತಿದ್ದಾರೆ. ಕೊಳವೆ ಬಾವಿಗಳಲ್ಲಿ ನೀರು ಇಂಗಿ ಹೋಗಿ ಕಬ್ಬಿನ ಬೆಳೆ ಒಣಗುತ್ತಿದೆ. ಕೆಲವು ಭಾಗದಲ್ಲಿ ದನಕರುಗಳ ಮೇವಿಗಾಗಿ ಕಬ್ಬಿನ ಬೆಳೆಯನ್ನೇ ಕಟಾವು ಮಾಡಿ ಉಪಯೋಗಿಸಲಾಗುತ್ತಿದೆ. ಇದು ರೈತರಿಗೆ ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಆದ್ದರಿಂದ ಬರ ನಿರ್ವಹಣೆ ಹಾಗೂ ಪರಿಹಾರ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳುವಂತೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬರಗಾಲದ ಹಿನ್ನೆಲೆಯಲ್ಲಿ ರೈತರು ಸಂಕಷ್ಟ ಪಡುತ್ತಿದ್ದಾರೆ. ಕೊಳವೆ ಬಾವಿಗಳಲ್ಲಿ ನೀರು ಇಂಗಿ ಹೋಗಿ ಕಬ್ಬಿನ ಬೆಳೆ ಒಣಗುತ್ತಿದೆ. ಕೆಲವು ಭಾಗದಲ್ಲಿ ದನಕರುಗಳ ಮೇವಿಗಾಗಿ ಕಬ್ಬಿನ ಬೆಳೆಯನ್ನೇ ಕಟಾವು ಮಾಡಿ ಉಪಯೋಗಿಸಲಾಗುತ್ತಿದೆ. ಇದು ರೈತರಿಗೆ ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಆದ್ದರಿಂದ ಬರ ನಿರ್ವಹಣೆ ಹಾಗೂ ಪರಿಹಾರ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳುವಂತೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಜಿಲ್ಲೆಯ ಹಲವು ಸಕ್ಕರೆ ಕಾರ್ಖಾನೆಗಳು ಕಬ್ಬು ಸರಬರಾಜು ಮಾಡಿದ ರೈತರಿಗೆ ಕಬ್ಬಿನ ಹಣವನ್ನೇ ಆರು ತಿಂಗಳಿಂದ ಪಾವತಿಸಿಲ್ಲ. ರಾಜ್ಯದಲ್ಲಿ ₹2,600 ಕೋಟಿ ಬಾಕಿ ಕೊಡಬೇಕಾಗಿದೆ. ಇದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಸಕ್ಕರೆ ಕಾರ್ಖಾನೆಗಳು ಕಬ್ಬು ಕಟಾವು ಯಂತ್ರದಿಂದ ಕಟಾವು ಮಾಡುವ ಕಬ್ಬಿನಲ್ಲಿ ಶೇ.8ರಷ್ಟು ಎಂದು ಕಡಿತ ಮಾಡಿ ರೈತರಿಗೆ ಮೋಸ ಮಾಡುತ್ತಿರುವುದು ಕಾನೂನು ಬಾಹಿರವಾಗಿದೆ. ಕಡಿತ ಮಾಡಿರುವ ತೂಕದ ಹಣ ವಾಪಸ್ ಕೊಡಿಸಬೇಕು. ಬರಗಾಲಕ್ಕೆ ತುತ್ತಾಗಿರುವ ರೈತರಿಗೆ ರಾಜ್ಯ ಸರ್ಕಾರ ಕೇವಲ ₹2 ಸಾವಿರ ಪರಿಹಾರ ನೀಡಿದ್ದು, ಇದರಿಂದ ಯಾವುದೇ ಸಮಸ್ಯೆ ಪರಿಹಾರವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ಬಹುತೇಕ ಕಡೆ ಕೊಳವೆಬಾವಿಗಳಲ್ಲಿ ನೀರು ಬತ್ತಿವೆ. ಆರೇಳು ತಿಂಗಳು ಬೆಳೆದಿರುವ ಕಬ್ಬು, ಬಾಳೆ ಬೆಳೆಗಳು ನೀರಿಲ್ಲದೆ ಒಣಗಿಹೋಗುತ್ತಿದೆ. ಇದರಿಂದ ರೈತರು ಮತ್ತಷ್ಟು ಕಂಗಲಾಗಿದ್ದಾರೆ. ಇಂತಹ ರೈತರಿಗೆ ಕೊಡಲೇ ಬರ ನಷ್ಟ ಪರಿಹಾರ ಕೊಡಿಸಬೇಕು. ದನಕರುಗಳಿಗೆ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿಗಾಗಿ ಕೆರೆಕಟ್ಟೆ ತುಂಬಿಸಲು ನೀರು ಹರಿಸುವಂತೆ ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ನೀರಾವರಿ ಇಲಾಖೆಯವರು ನಿರ್ಲಕ್ಷ್ಯತನ ಮಾಡಿದ್ದಾರೆ. ವಿದ್ಯುತ್ ಸಮಸ್ಯೆಯಿಂದ ಕುಡಿಯುವ ನೀರಿಗೂ ತೊಂದರೆಯಾಗುತ್ತಿದೆ. ಕೃಷಿ ಪಂಪಸೆಟ್ ಗಳಿಗೆ ಮೂರು ನಾಲ್ಕು ಗಂಟೆಗಳ ವಿದ್ಯುತ್ ಸಹ ಸಿಗುತ್ತಿಲ್ಲ. ಕೃಷಿ ಪಂಪಸೆಟ್‌ಗಳ ಟಿ.ಸಿ. ಕೆಟ್ಟರೆ ವಿದ್ಯುತ್ ಇಲಾಖೆಯವರು ವಿಳಂಬವಾಗಿ ಮರುಜೋಡಣೆ ಮಾಡುತ್ತಿದ್ದಾರೆ. ಇದು ರೈತರಿಗೆ ನುಂಗಲಾರದ ತುತ್ತಾಗಿದೆ. ಬರಗಾಲದ ಸಂಕಷ್ಟದಲ್ಲಿ ಬೆಳೆ ಸಾಲ ಪಡೆದ ರೈತರಿಗೆ ಕೆಲವು ಬ್ಯಾಂಕುಗಳು ಸಾಲ ವಸುಲಾತಿಗಾಗಿ ನೋಟಿಸ್ ನೀಡಿ ರೈತರಿಗೆ ಮಾನಸಿಕ ಕಿರುಕುಳ ಕೊಡುತ್ತಿದ್ದಾರೆ. ಜಾನುವಾರುಗಳಿಗೆ ಮೇವಿನ ಕೊರತೆಯಾಗಿ ಕಬ್ಬಿನ ಬೆಳೆಯನ್ನೇ ಕಡಿದು ಮೇವಿಗಾಗಿ ಉಪಯೋಗಿಸುತ್ತಿದ್ದಾರೆ. ಕೆರೆಕಟ್ಟೆಗಳು ಒಣಗಿ ಹೋಗಿವೆ. ಯಾವುದೇ ಸಮಸ್ಯೆಗೂ ಸರ್ಕಾರಿ ಕಚೇರಿಗಳಿಗೆ ಹೋದರೆ ಚುನಾವಣೆ ಕೆಲಸದಲ್ಲಿದ್ದಾರೆ ಎಂದು ಹೇಳುತ್ತಿದ್ದಾರೆ. ನಾವು ಗೆಲ್ಲಿಸಿದ ಎಂ.ಎಲ್.ಎ, ಮಂತ್ರಿಗಳು ಚುನಾವಣೆ ಕಾರ್ಯದ ಸಡಗರದಲ್ಲಿದ್ದಾರೆ. ಇಂತಹ ಸ್ಥಿತಿಯಲ್ಲಿ ರೈತರ ರಕ್ಷಣೆಗೆ ಜಿಲ್ಲಾ ಆಡಳಿತ ವಿಶೇಷ ಗಮನಹರಿಸಬೇಕು. ಚುನಾವಣೆ ಕಾರ್ಯಕ್ಕೆ ನೇಮಿಸಿರುವ ಅಧಿಕಾರಿಗಳ ತಂಡದ ರೀತಿಯಲ್ಲಿ ಬರಗಾಲದ ಸಮಸ್ಯೆಗಳಿಗೆ ತುರ್ತು ಪರಿಹಾರದ ಕ್ರಮ ಕೈಗೊಳ್ಳಲು ಜಿಲ್ಲಾ ಮಟ್ಟದಲ್ಲಿ ವಿಶೇಷ ಅಧಿಕಾರಿಗಳ ತಂಡ ರಚಿಸಿ ಸಮಾರೋಪಾದಿಯಲ್ಲಿ ಕಾರ್ಯನಿರ್ವಹಿಸುವಂತೆ ಆಗ್ರಹಿಸಿದರು.

ಸಂಘದ ರಾಜ್ಯಾಧ್ಯಕ್ಷ ಕುರುಬೂರ ಶಾಂತಕುಮಾರ, ಬಾಪುಗೌಡ , ಸುರೇಶ ಪಾಟೀಲ, ಗುರುಸಿದ್ದ ಕೋಟಗಿ, ಚುನ್ನಪ್ಪಾ ಪೂಜಾರಿ, ಬಲ್ಲೂರ ರವಿಕುಮಾರ, ಎಸ್‌.ಬಿ.ಸಿದ್ನಾಳ ಸೇರಿದಂತೆ ಇತರರು ಇದ್ದರು.

----------

PREV

Latest Stories

ನಗರದಲ್ಲಿ ಶೀಘ್ರ ಟೋಯಿಂಗ್ ವ್ಯವಸ್ಥೆ ಮರು ಜಾರಿ:ಪರಂ
ದೇಶದಲ್ಲೇ ಫಸ್ಟ್‌ ಟೈಂ ಜನರ ಮನೆ ಬಾಗಿಲಿಗೆ ಪೊಲೀಸ್ : ಪರಂ
ನೀರುಗಾಲುವೆಗಳಲ್ಲಿ ಟೆಕ್‌ ಪಾರ್ಕ್‌ ನಿರ್ಮಾಣದಿಂದ ಪ್ರವಾಹ