ಪಕ್ಷದ ಅಧ್ಯಕ್ಷನಾಗಿ ಶಾಸಕರ ಜತೆ ಮಾತು: ಡಿಕೆಶಿ

KannadaprabhaNewsNetwork |  
Published : Jun 27, 2025, 12:48 AM IST
ಡಿಕೆಶಿ | Kannada Prabha

ಸಾರಾಂಶ

ವಸತಿ ಇಲಾಖೆ ಅಕ್ರಮದ ಆರೋಪದ ಕುರಿತು ಬಿ.ಆರ್‌.ಪಾಟೀಲ್‌ ಅವರು ನನ್ನನ್ನು ಭೇಟಿಯಾಗಿ ವಿಚಾರ ತಿಳಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ಮಾಡುತ್ತೇನೆ ಹಾಗೂ ಸಚಿವ ಜಮೀರ್‌ ಅವರೊಂದಿಗೂ ಮಾತನಾಡುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಸತಿ ಇಲಾಖೆ ಅಕ್ರಮದ ಆರೋಪದ ಕುರಿತು ಬಿ.ಆರ್‌.ಪಾಟೀಲ್‌ ಅವರು ನನ್ನನ್ನು ಭೇಟಿಯಾಗಿ ವಿಚಾರ ತಿಳಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ಮಾಡುತ್ತೇನೆ ಹಾಗೂ ಸಚಿವ ಜಮೀರ್‌ ಅವರೊಂದಿಗೂ ಮಾತನಾಡುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷನಾಗಿ ವಾಸ್ತವಾಂಶ ತಿಳಿಯಬೇಕಾಗಿತ್ತು. ಹೀಗಾಗಿ ಹಿರಿಯ ಶಾಸಕ ಬಿ.ಆರ್‌.ಪಾಟೀಲ್‌ ಅವರನ್ನು ಕರೆಸಿ ಮಾತನಾಡಿದ್ದೇನೆ. ಮುಖ್ಯಮಂತ್ರಿ ಅವರೊಂದಿಗೂ ಚರ್ಚಿಸಲಾಗುವುದು. ಅಲ್ಲದೆ, ಪಕ್ಷದ ರಾಷ್ಟ್ರೀಯ ನಾಯಕರು ಕೂಡ ರಾಜ್ಯಕ್ಕೆ ಆಗಮಿಸುತ್ತಿದ್ದು, ಎಲ್ಲರ ಜತೆ ಮಾತನಾಡಿ ಮಾಹಿತಿ ಪಡೆಯಲಿದ್ದಾರೆ ಎಂದು ಹೇಳಿದರು.

ಹಲವು ಶಾಸಕರು ಸರ್ಕಾರದ ವಿರುದ್ಧ ಮಾತನಾಡುತ್ತಿದ್ದು, ಮುಖ್ಯಮಂತ್ರಿ ಅವರಿಗೆ ಆಡಳಿತದಲ್ಲಿ ಹಿಡಿತ ತಪ್ಪುತ್ತಿದ್ದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಶಾಸಕರು ಮಾತನಾಡುತ್ತಿರುವ ವಿಚಾರ ನನಗೆ ತಿಳಿದಿಲ್ಲ. ಏನಾದರೂ ಇದ್ದರೆ ನಮ್ಮ ಪಕ್ಷದ ವರಿಷ್ಠರ ಜತೆ ನಾನು ಮತ್ತು ಮುಖ್ಯಮಂತ್ರಿ ಅವರು ಮಾತನಾಡುತ್ತೇವೆ. ಆಡಳಿತದಲ್ಲಿ ಯಾವುದೇ ಹಿಡಿತ ಕಳೆದುಕೊಂಡಿಲ್ಲ. ಅವೆಲ್ಲವೂ ಮಾಧ್ಯಮಗಳ ಸೃಷ್ಟಿಯಷ್ಟೇ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ ಶಾಸಕರಿಗೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ ಬಾಬು ಪತ್ರ ಬರೆದಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಸುರೇಶ್‌ ಬಾಬು ಅವರು ಮೊದಲು ಅವರ ಪಕ್ಷದವನ್ನು ಸರಿಪಡಿಸಿಕೊಳ್ಳಲಿ. ಅವರ ಕಾವಲಿಯಲ್ಲಿರುವ ತೂತನ್ನು ಮುಚ್ಚಿಕೊಳ್ಳಲಿ. ಜೆಡಿಎಸ್‌ ಶಾಸಕ ಜಿ.ಟಿ. ದೇವೇಗೌಡ ಸೇರಿದಂತೆ ಇತರ ಶಾಸಕರ ಮುನಿಸನ್ನು ಸರಿಪಡಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.

-ಬಾಕ್ಸ್‌-

ಇಂದಿರಾ ಗಾಂಧಿ ದೇಶಕ್ಕೆ

ಪ್ರಾಣ ಕೊಟ್ಟವರು-ಡಿಕೆಶಿ

ಇಂದಿರಾ ಗಾಂಧಿ ಅವರನ್ನು ಬಿಜೆಪಿ ಹಿಟ್ಲರ್‌ಗೆ ಹೋಲಿಕೆ ಮಾಡಿದ್ದಕ್ಕೆ ಪ್ರಕರಣ ದಾಖಲಿಸಿರುವ ವಿಚಾರದ ಬಗ್ಗೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ಬಿಜೆಪಿಯಲ್ಲಿ ಹಲವು ಸಮಸ್ಯೆಗಳಿವೆ. ತುರ್ತು ಪರಿಸ್ಥಿತಿ ನಂತರ ದೇಶದ ಜನ ಇಂದಿರಾ ಗಾಂಧಿ ಅವರ ನಾಯಕತ್ವದಲ್ಲೇ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತಂದರು. ಇಂದಿರಾ ಗಾಂಧಿ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದವರು. ಆದರೆ, ಬಿಜೆಪಿ ಪ್ರಚಾರಕ್ಕಾಗಿ ಅವರ ಹೆಸರನ್ನು ಚರ್ಚೆಗೆ ತರುತ್ತಿದೆ ಎಂದರು.

ತುರ್ತು ಪರಿಸ್ಥಿತಿ ಜಾರಿ ನಂತರ 50 ವರ್ಷಗಳು ಕಳೆದಿವೆ. ಈಗ ಅದು ಮುಗಿದ ಅಧ್ಯಾಯ. ಆಗಿನಿಂದ ಈವರೆಗೆ ಕಾಂಗ್ರೆಸ್‌ ಆಡಳಿತದಲ್ಲಿ ದೇಶ ಬಲಿಷ್ಠವಾಗಿ ನಿಂತಿದೆ. ಬಿಜೆಪಿ ಆಡಳಿತದಲ್ಲಿ ಯಾವ ಪರಿಸ್ಥಿತಿಯಿದೆ ಎಂದು ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ. ದೇಶದ ಪರಿಸ್ಥಿತಿ ಬಗ್ಗೆ ಬಿಜೆಪಿ ಸಂಸದರನ್ನು ವೈಯಕ್ತಿಕವಾಗಿ ಕೇಳಿದರೆ ಅವರೇ ಹೇಳುತ್ತಾರೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ