ಹುಬ್ಬಳ್ಳಿ: ಕಂದಾಯ ಇಲಾಖೆಗಳ ದಾಖಲೆಗಳ ಗಣಕೀರಕಣದಲ್ಲಿ ಹುಬ್ಬಳ್ಳಿ ತಾಲೂಕು ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ತಹಸೀಲ್ದಾರ್ ಕಲಗೌಡ ಪಾಟೀಲ ಹೇಳಿದರು.
ಕಂದಾಯ ಇಲಾಖೆಯ ದಾಖಲೆಗಳು ಸಾರ್ವಜನಿಕರಿಗೆ ದೋಷವಿಲ್ಲದೆ ಸುಲಭವಾಗಿ ಸಿಗುವಂತೆ ಮಾಡಲು ಸರ್ಕಾರ ಗಣಕೀಕರಣಕ್ಕೆ ಮುಂದಾಗಿದೆ. ತಾಲೂಕಿನಲ್ಲಿ ಒಟ್ಟು 1.37 ಲಕ್ಷ ದಾಖಲೆಗಳಿದ್ದು, ಈಗಾಗಲೇ 1.22 ಲಕ್ಷ ದಾಖಲೆಗಳನ್ನು ಗಣಕೀಕರಣ ಮಾಡಲಾಗಿದೆ. ಇನ್ನುಳಿದಂತೆ ಹಂತಹಂತವಾಗಿ ಗಣಕೀಕರಣ ಮಾಡಲಾಗುತ್ತಿದೆ ಎಂದರು.
ರೈತರಿಗೆ ಬೆಳೆ ವಿಮೆ, ಬೆಳೆ ಪರಿಹಾರ, ಕೃಷಿಸಾಲ ಸುಲಭವಾಗಿ ಪಡೆಯಲು ಪಹಣಿ ಪತ್ರಿಕೆಗೆ ಆಧಾರ್ ಜೋಡಣೆ ಕಡ್ಡಾಯವಾಗಿದ್ದು, ಹುಬ್ಬಳ್ಳಿ ನಗರ ತಾಲೂಕು ಶೇ. 97.57 ರಷ್ಟು ಪ್ರಗತಿ ಸಾಧಿಸಿದೆ. ನಮ್ಮ ಹೊಲ ನಮ್ಮದಾರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಮುಂಗಾರು ಹಂಗಾಮಿನಲ್ಲಿ ಬೆಳೆಹಾನಿಯಾದ 37,753 ರೈತರಿಗೆ ₹2 ಕೋಟಿ ಪರಿಹಾರ ನೀಡಲಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಸಶಕ್ತ ಸಂವಿಧಾನ ರಚಿಸಿದ್ದರಿಂದ ಎಲ್ಲರೂ ಮುಕ್ತವಾಗಿ ಸ್ವಾತಂತ್ರ್ಯ ಅನುಭವಿಸಲು ಸಾಧ್ಯವಾಗಿದೆ. ಜಗತ್ತಿಗೆ ಮಾದರಿಯಾದ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದಾಗಿದೆ. ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ವಿದೇಶಗರು ಭಾರತವನ್ನು ಹೇಗೆ ನೋಡುತ್ತಿದ್ದರು, ಈಗ ಭಾರತವನ್ನು ಹೇಗೆ ನೋಡುತ್ತಿದ್ದಾರೆ ಎಂದು ವಿಮರ್ಶಿಸಬೇಕಿದೆ ಎಂದರು.
ವಿವಿಧ ಶಾಲೆಯ ಮಕ್ಕಳು ದೇಶಭಕ್ತಿ ಸಾರುವ ನೃತ್ಯ ಪ್ರದರ್ಶಿಸಿದರು. ಪೊಲೀಸ್, ಗೃಹರಕ್ಷಕ, ಎನ್‌ಸಿಸಿ ವಿದ್ಯಾರ್ಥಿಗಳು ಪಥಸಂಚಲನ ನಡೆಸಿದರು. ಈ ವೇಳೆ ಶಹರ ಬಿಇಒ ಚನ್ನಪ್ಪಗೌಡರ, ಗ್ರಾಮೀಣ ಬಿಇಒ ಉಮೇಶ ಬೊಮ್ಮಕ್ಕನ್ನವರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.