ತಮಿಳುನಾಡು ಮೂಲದ ದಂಪತಿಗೆ ಜೀವಾವಧಿ ಶಿಕ್ಷೆ

KannadaprabhaNewsNetwork |  
Published : Jul 18, 2025, 12:45 AM IST

ಸಾರಾಂಶ

ಈ ಸಂಬಂಧ ಹಲಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅಂದಿನ ಸಿಪಿಐ ಹಾಗೂ ಹಾಲಿ ಮಂಡ್ಯ ಅಪರ ಪೊಲೀಸ್ ಅಧೀಕ್ಷಕ ಎಸ್.ಇ. ಗಂಗಾಧರಸ್ವಾಮಿ ಅವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಕನ್ನಡಪ್ರಭ ವಾರ್ತೆ ಮಂಡ್ಯ

ದೇವಾಲಯಕ್ಕೆ ಹೋಗಿಬರೋಣವೆಂದು ಹೇಳಿ ಮಹಿಳೆಯೊಬ್ಬರನ್ನು ಕರೆದೊಯ್ದು ಕೊಲೆ ಮಾಡಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ ಅಪರಾಧಿಗಳಿಗೆ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ತಲಾ ೫ ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಪೆರಿಯಾನಾಯಕನ ಪಾಳ್ಯಂ ನಿವಾಸಿಗಳಾದ ಆನಂದ ಮತ್ತು ಆತನ ಪತ್ನಿ ಆನಂದಿ ಶಿಕ್ಷೆಗೊಳಗಾದವರು. ಆನಂದ ಮತ್ತು ಆನಂದಿ ಅವರು ಎರಡು ವರ್ಷದ ಹಿಂದೆ ಅದೇ ಗ್ರಾಮದ ತಿರುಮಲೈಸ್ವಾಮಿ ಪತ್ನಿ ರಜಾತಿ ಅಲಿಯಾಸ್ ಆರೋಗ್ಯ ಮೇರಿ ಅವರನ್ನು ಕರ್ನಾಟಕದಲ್ಲಿರುವ ದೇವಾಲಯವೊಂದಕ್ಕೆ ಹೋಗಿ ಬರೋಣವೆಂದು ಕರೆತಂದು ಮಾರ್ಗ ಮಧ್ಯೆ ಆಕೆಗೆ ಮದ್ಯಪಾನ ಮಾಡಿಸಿದ್ದಾರೆ. ನಂತರ ಮಳವಳ್ಳಿ ತಾಲೂಕಿನ ಧನಗೂರು ಕುರಿಫಾರಂ ಕಡೆಗೆ ಹೋಗುವ ರಸ್ತೆಯಲ್ಲಿರುವ ನೀಲಗಿರಿ ಮರಗಳ ಜಮೀನಿಗೆ ಕರೆತಂದು ಆಕೆ ಮಲಗಿದ್ದಾಗ ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಲೆ ಮಾಡಿ ಆಕೆಯ ಮೈಮೇಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.

ಈ ಸಂಬಂಧ ಹಲಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅಂದಿನ ಸಿಪಿಐ ಹಾಗೂ ಹಾಲಿ ಮಂಡ್ಯ ಅಪರ ಪೊಲೀಸ್ ಅಧೀಕ್ಷಕ ಎಸ್.ಇ. ಗಂಗಾಧರಸ್ವಾಮಿ ಅವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಇಲ್ಲಿನ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರು ಆರೋಪಿಗಳು ನಡೆಸಿದ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ಆನಂದ ಮತ್ತು ಆನಂದಿ ಅವರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ೫ ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ಅಭಿಯೋಜಕಿ ಜಿ.ವೆಂಕಟಲಕ್ಷ್ಮಮ್ಮ ಅವರು ವಾದ ಮಂಡಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!