ಮೇಕೆದಾಟು ಯೋಜನೆಗೆ ತಮಿಳ್ನಾಡು ಅಡ್ಡಿ ಸಲ್ಲ: ವೀರಭದ್ರಸ್ವಾಮಿ

KannadaprabhaNewsNetwork |  
Published : Jun 05, 2026, 01:30 AM IST
೪ಸಿಎಚ್‌ಎನ್೨ | Kannada Prabha

ಸಾರಾಂಶ

ಮೇಕೆದಾಟಿನಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ತಮಿಳುನಾಡು ಆಕ್ಷೇಪವೆತ್ತಿರುವುದು ಖಂಡನೀಯ. ಕರ್ನಾಟಕ ಸರ್ಕಾರ ತಮಿಳುನಾಡಿಗೆ ಮಣಿಯದೆ ಮೇಕೆದಾಟು ಅಣೆಕಟ್ಟು ನಿರ್ಮಾಣ ಕಾಮಗಾರಿ ಆರಂಭಿಸಬೇಕು ಎಂದು ಜಿಲ್ಲಾಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕೆ. ವೀರಭದ್ರಸ್ವಾಮಿ ಒತ್ತಾಯಿಸಿದರು.

ಜಿಲ್ಲಾಭಿವೃದ್ಧಿ ಹೋರಾಟ ಸಮಿತಿಯಿಂದ ನೆರೆ ರಾಜ್ಯದ ನಡೆಗೆ ಖಂಡನೆ

ಯೋಜನೆ ಆರಂಭಿಸದಿದ್ದರೆ ಮೇಕೆದಾಟಿನಲ್ಲಿ ದೊಡ್ಡ ಹೋರಾಟ ಎಚ್ಚರಿಕೆ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮೇಕೆದಾಟಿನಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ತಮಿಳುನಾಡು ಆಕ್ಷೇಪವೆತ್ತಿರುವುದು ಖಂಡನೀಯ. ಕರ್ನಾಟಕ ಸರ್ಕಾರ ತಮಿಳುನಾಡಿಗೆ ಮಣಿಯದೆ ಮೇಕೆದಾಟು ಅಣೆಕಟ್ಟು ನಿರ್ಮಾಣ ಕಾಮಗಾರಿ ಆರಂಭಿಸಬೇಕು ಎಂದು ಜಿಲ್ಲಾಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕೆ. ವೀರಭದ್ರಸ್ವಾಮಿ ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕದ ಮೇಕೆದಾಟಿನಲ್ಲಿ ಅಣೆಕಟ್ಟು ನಿರ್ಮಾಣ ಸಂಬಂಧ ೨೦೨೫ ನವೆಂಬರ್‌ನಲ್ಲಿ ಪ್ರಕಟಿಸಿದ್ದ ತೀರ್ಪನ್ನು ಮರುಪರಿಶೀಲಿಸಬೇಕು ಎಂದು ತಮಿಳುನಾಡು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿತ್ತು. ಆದರೆ ಸುಪ್ರೀಂಕೋರ್ಟ್ ತಮಿಳುನಾಡು ಅರ್ಜಿ ವಜಾಗೊಳಿಸಿತು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ಕಾವೇರಿ ನೀರು ನಿಯಂತ್ರಣ ಸಮಿತಿಗಳ ಅಭಿಪ್ರಾಯಗಳನ್ನು ಸಂಗ್ರಹಿಸಿದ ನಂತರವೇ ಕೇಂದ್ರ ಜಲ ಆಯೋಗ ಮೇಕೆದಾಟಿನಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಅನುಮತಿ ನೀಡಿದೆ. ವಾಸ್ತವಾಂಶ ಹೀಗಿದ್ದರೂ, ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಮೇಕೆದಾಟಿನಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುವುದಾದರೂ ಏಕೆ ಎಂದು ಪ್ರಶ್ನಿಸಿದರು.ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿನ ಒತ್ತಾಯಕ್ಕೆ ಮಣಿಯದೇ, ಮೇಕೆದಾಟಿನಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ರಾಜ್ಯಸರ್ಕಾರಕ್ಕೆ ಆದೇಶ ನೀಡಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಜಲಸಂಪನ್ಮೂಲ ಸಚಿವರಿಗೆ ಮನವಿ ಸಲ್ಲಿಸಬೇಕು ಎಂದರು.ಬೆಳೆಯುತ್ತಿರುವ ಬೆಂಗಳೂರು ನಗರ ಸೇರಿದಂತೆ ಇತರೆ ಪಟ್ಟಣ, ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವುದು, ಹರಿದು ಹೋಗುವ ಮಳೆ ನೀರನ್ನು ಸಂಗ್ರಹಿಸಿಕೊಳ್ಳುವ ಉದ್ದೇಶದ ಹಿನ್ನೆಲೆಯಲ್ಲಿ ಮೇಕೆದಾಟಿನಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಅನುಮತಿ ಕೊಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಪದಾಧಿಕಾರಿಗಳು, ಶಾಸಕರು, ಸಂಸದರ ಜೊತೆ ಡಿ.ಕೆ. ಶಿವಕುಮಾರ್‌ ಅವರು ಕಳೆದ ೪ ವರ್ಷದ ಹಿಂದೆ ಬೆಂಗಳೂರಿನಿಂದ ಮೇಕೆದಾಟುವರೆಗೆ ಪಾದಯಾತ್ರೆ ಮಾಡಿ, ಕೇಂದ್ರ ಸರ್ಕಾರದ ಗಮನ ಸೆಳೆದಿದ್ದರು.

ಪ್ರಸ್ತುತ ಡಿ.ಕೆ.ಶಿವಕುಮಾರ್‌ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಶೀಘ್ರವಾಗಿ ಮೇಕೆದಾಟು ಅಣೆಕಟ್ಟು ನಿರ್ಮಾಣ ಕಾಮಗಾರಿ ಆರಂಭಿಸಬೇಕು. ವಿಳಂಬ ಮಾಡಿದರೆ ಮೇಕೆದಾಟು ಪ್ರದೇಶದಲ್ಲಿ ವಿವಿಧ ಸಂಘಟನೆಗಳ ಜೊತೆ ಜಿಲ್ಲಾಭಿವೃದ್ಧಿ ಹೋರಾಟ ಸಮಿತಿ ದೊಡ್ಡ ಮಟ್ಟದ ಹೋರಾಟಕ್ಕೆ ಸಜ್ಜಾಗಲಿದೆ ಎಂದು ಎಚ್ಚರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಸಿದ್ದರಾಜು, ಪ್ರಧಾನ ಕಾರ್ಯದರ್ಶಿ ಮರಿಯಾಲ ಲಿಂಗಪ್ಪಸ್ವಾಮಿ, ಪುಟ್ಟಸ್ವಾಮಿ, ಭವಾನಿ ಶಂಕರ್‌, ಕಾರ್ಯದರ್ಶಿ ಅಮ್ಮನಪುರ ನಂಜುಂಡಸ್ವಾಮಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಈಶ್ವರವನದಲ್ಲಿ ಮಿಯಾವಾಕಿ ಅರಣ್ಯ ಬೆಳೆಸುವ ಕಾರ್ಯಕ್ರಮಕ್ಕೆ ಇಂದು ಚಾಲನೆ
ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆಯಿಂದ ದಿಟ್ಟ ಕ್ರಮ