ಯಳಂದೂರು ಪಟ್ಟಣದಲ್ಲಿರುವ ತಾಲೂಕು ವ್ಯವಸಾಯೋತ್ಪನ್ನ ಮಾರಾಟಗಾರರ ಸಹಕಾರ ಸಂಘದ ಕಚೇರಿ.
ಕನ್ನಡಪ್ರಭ ವಾರ್ತೆ ಯಳಂದೂರು
ಯಳಂದೂರು ತಾಲೂಕು ವ್ಯವಸಾಯೋತ್ಪನ್ನ ಮಾರಾಟಗಾರರ ಸಹಕಾರ ಸಂಘ ನಿ. ವಾರ್ಷಿಕ ಸಮಾನ್ಯ ಸಭೆ ನಡೆಸದ ಕಾರಣ ಇಲ್ಲಿನ ನಿರ್ದೇಶಕರ ಮಂಡಳಿ ಸದಸ್ಯರನ್ನು ಒಂದು ವರ್ಷ ಅನರ್ಹ ಮಾಡಿರುವುದಾಗಿ ಸಹಕಾರ ಸಂಘಗಳ ಉಪನಿರ್ದೇಶಕರು ಆದೇಶಿಸಿದ್ದಾರೆ.ಹಲವು ದಶಕಗಳ ಐತಿಹ್ಯ ಇರುವ ಈ ಸಂಘವು ೨೦೨೩-೨೪ನೇ ಸಾಲಿನಲ್ಲಿ ಇವರು ವಾರ್ಷಿಕ ಮಹಾಸಭೆಯನ್ನು ನಡೆಸಿಲ್ಲ. ಸಹಕಾರ ಸಂಘಗಳ ಅಧಿನಿಯಮದಂತೆ ಪ್ರತಿಯೊಂದು ಸಹಕಾರ ಸಂಘವೂ ವರ್ಷಕ್ಕೊಮ್ಮೆ ಸೆಪ್ಟಂಬರ್ ತಿಂಗಳ ೨೫ನೇ ದಿನದೊಳಗೆ ತನ್ನ ಸದಸ್ಯರ ಸಾಮಾನ್ಯ ಸಭೆಯನ್ನು ನಡೆಸತಕ್ಕದ್ದು ಎಂಬುದಾಗಿ ಕಾಯಿದೆಯಲ್ಲಿದೆ. ಹಾಗಾಗಿ ಸಹಕಾರ ಸಂಘಗಳ ಅಧಿನಿಯಮದ ಪ್ರಕಾರ ಇಲ್ಲಿನ ನಿರ್ದೇಶಕರಾದ ಮಾಜಿ ಶಾಸಕ ಎಸ್. ಬಾಲರಾಜು, ಬಿ.ಎಸ್.ನಾಗರಾಜು, ವೈ.ಎಸ್. ನಂಜಶೆಟ್ಟಿ, ಬಿ.ಮಹೇಶ್‌ಕುಮಾರ್, ರಾಜಮ್ಮ, ಅಂಬಿಕಾ, ಚಾಮರಾಜನಗರ ಶಾಸಕ ಸಿ. ಪುಟ್ಟರಂಗಶೆಟ್ಟಿ ಪುತ್ರ ಪಿ.ಕುಸುಮರಾಜು, ಎಂ.ಬಸವರಾಜು, ಪುಟ್ಟರಾಜು, ಮಹದೇಶ, ಎನ್.ಶಿವಶೇಖರ್, ಎ.ಆರ್.ಪ್ರತಾಪ್‌ರನ್ನು ನಿರ್ದೇಶಕರ ಸ್ಥಾನದಿಂದ ಒಂದು ವರ್ಷಗಳ ಅವಧಿಗೆ ಅನರ್ಹಗೊಳಿಸಿ ಆದೇಶಿಸಿದೆ. ಅಲ್ಲಿಯ ತನಕ ಇವರು ಮಂಡಳಿ ನಿರ್ದೇಶಕರಾಗಿ ಮುಂದುವರೆಯುವುದಕ್ಕಾಗಲಿ, ಚುನಾಯಿತರಾಗುವುದಕ್ಕಾಗಲಿ, ಆಯ್ಕೆಯಾಗುವುದಕ್ಕಾಗಲಿ ಅನರ್ಹರೆಂದು ಎಂದು ಸಹಕಾರ ಸಂಘಗಳ ಉಪನಿಬಂಧಕರಾದ ಜಿ.ಸಿ.ಜ್ಯೋತಿಅರಸ್ ಆದೇಶಿದ್ದಾರೆ. ೭೬ ವರ್ಷಗಳ ಐತಿಹ್ಯ ಇರುವ ಸಂಘ:
೧೯೪೯ರಲ್ಲಿ ಆರಂಭಗೊಂಡ ಈ ಸಂಘವು ಪ್ರಸ್ತುತ ೧೪೦೦ಕ್ಕೂ ಹೆಚ್ಚು ಷೇರುದಾರರನ್ನು ಹೊಂದಿದೆ. ಈ ಹಿಂದೆ ಇದು ಉತ್ತಮ ಲಾಭದಲ್ಲಿತ್ತು. ಈಚೆಗೆ ತಾಲೂಕಿಗೆ ಪಡಿತರವನ್ನು ಇಲ್ಲಿಂದಲೇ ವಿತರಣೆ ಮಾಡುವ ವ್ಯವಸ್ಥೆ ಇತ್ತು. ಆದರೆ ಈಚೆಗೆ ನಿರ್ದೆಶಕರ ಆಂತರಿಕ ತಿಕ್ಕಾಟ ಹಾಗೂ ಪ್ರತಿಷ್ಠೆಯಿಂದ ಸಭೆ ನಡೆಸದೆ ಈ ಮಂಡಳಿಯೇ ಅನರ್ಹಗೊಂಡಿದೆ. ಮಾಜಿ ಶಾಸಕ ಎಸ್.ಬಾಲರಾಜು ಅಧ್ಯಕ್ಷರಾಗಿದ್ದು, ಚಾಮರಾಜನಗರದ ಶಾಸಕ ಸಿ. ಪುಟ್ಟರಂಗಶೆಟ್ಟಿರ ಮಗ ಪಿ.ಕುಸುಮರಾಜು ಉಪಾಧ್ಯಕ್ಷರಾಗಿದ್ದು ಹಲವು ಅನುಭವಿ ನಿರ್ದೇಶಕರು ಮಂಡಳಿಯೊಳಗೆ ಇದ್ದರೂ ಕೂಡ ಮಹಾಸಭೆ ನಡೆಸದೆ ಇರುವುದರಿಂದ ನಿರ್ದೇಶಕ ಮಂಡಳಿ ಅನರ್ಹಗೊಂಡಿರುವುದು ವಿಪರ್ಯಾಸವಾಗಿದೆ ಎಂದು ಸಾರ್ವಜನಿಕರ ಆರೋಪವಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.