ಕುಷ್ಟಗಿ: ಮಳೆ ಕೊರತೆಯಿಂದ ಬೆಳೆಗಳು ಒಣಗಿ ರೈತರು ಸಂಕಷ್ಟಕ್ಕೆ ಸಿಲುಕಿರುವ ಕುಷ್ಟಗಿ ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆ ಮಾಡದ ರಾಜ್ಯ ಸರ್ಕಾರದ ಕ್ರಮ ಖಂಡಿಸಿ, ಸೆ. 21ರಿಂದ ತಾವರಗೇರಾದಿಂದ ಕೊಪ್ಪಳದ ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲು ವಿವಿಧ ಸಂಘಟನೆಗಳು, ರೈತರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ನಿರ್ಧರಿಸಿದ್ದಾರೆ.
ಮುಖಂಡ ಅರುಣಕುಮಾರ ನಾಲತ್ವಾಡ ಮಾತನಾಡಿ, ಮಳೆ ಕೊರತೆಯಿಂದ ಕುಷ್ಟಗಿ ತಾಲೂಕಿನಲ್ಲಿ ಬೆಳೆಗಳು ಒಣಗಿವೆ. ಕೃಷಿ ಕುಟುಂಬಗಳು ನಷ್ಟ ಅನುಭವಿಸುತ್ತಿದ್ದು, ಜೀವನ ನಿರ್ವಹಣೆಗಾಗಿ ಸಾಲ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಸರ್ಕಾರ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದ ಗಮನ ಸೆಳೆಯಲು ಸೆ. 21ರಿಂದ ಪಾದಯಾತ್ರೆ ನಡೆಸಲಾಗುವುದು. ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆ ಮಾಡುವ ವರೆಗೆ ಹೋರಾಟ ಮುಂದುವರಿಸಲಾಗುವುದು ಎಂದರು.ಕನ್ನಡಪರ ಸಂಘಟನೆಯ ಸದಸ್ಯ ನಾರಾಯಣಸಿಂಗ್ ಗುಡಸಲಿ ಮಾತನಾಡಿ, ಕುಷ್ಟಗಿ ತಾಲೂಕನ್ನು ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿರುವುದು ಅನ್ಯಾಯ, ಕೂಡಲೇ ತಾಲೂಕನ್ನು ಪಟ್ಟಿಗೆ ಸೇರ್ಪಡೆ ಮಾಡಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಮಂಜುನಾಥ ಜೂಲಕುಂಟಿ, ಶ್ಯಾಮಮೂರ್ತಿ ಹಂಚಿ, ತಿಪ್ಪಣ್ಣ ಮಡ್ಡೇರ, ಅಶೋಕ ನವಲಹಳ್ಳಿ ಇದ್ದರು.