ಹುಬ್ಬಳ್ಳಿ: ಉರ್ದು, ಪರ್ಷಿಯನ್ ಭಾಷೆಯ ಮೂಲದಿಂದ ರೂಪುಗೊಂಡ ಗಜಲ್‌ಗಳಲ್ಲಿ ಹಿಂದೆ ಪ್ರೀತಿ, ಪ್ರೇಮ, ವಿರಹ ವೇದನೆ ಪ್ರಧಾನವಾಗಿದ್ದರೆ, ಇಂದಿನ ಗಜಲ್‌ಗಳು ಮನುಷ್ಯ ಬದುಕಿನ ತಲ್ಲಣ, ದ್ರೋಹ ಹಾಗೂ ಪ್ರಚಲಿತ ವಿದ್ಯಮಾನಗಳನ್ನು ಪ್ರತಿಬಿಂಬಿಸುತ್ತಿವೆ ಎಂದು ವಿಮರ್ಶಕ ಸುಬ್ರಾಯ ಮತ್ತೀಹಳ್ಳಿ ಹೇಳಿದರು.
ಕನ್ನಡದ ಗಜಲ್‌ಗಳಲ್ಲೂ ಉರ್ದುವಿನ ಗತ್ತು ಕಾಣಬಹುದು. ಆರಂಭದಲ್ಲಿ ಗಜಲ್ ಕುರಿತು ಅಪಸ್ವರಗಳಿದ್ದರೂ, ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಅದರ ಸ್ವರೂಪವೂ ಬದಲಾಗಿದೆ. ಡಾ. ಗೋವಿಂದ ಹೆಗಡೆ ಅವರು ತಮ್ಮ ಗಜಲ್‌ಗಳ ಮೂಲಕ ಹೊಸ ಬೆಳಕು ಮೂಡಿಸುವ ಪ್ರಯತ್ನ ಮಾಡಿದ್ದಾರೆ ಎಂದರು.
ಸಾಹಿತಿ ಸಿ.ಎಸ್. ಸುದರ್ಶನ ಮಾತನಾಡಿ, ಗೋವಿಂದ ಹೆಗಡೆ ಅವರ ಗಜಲ್‌ಗಳಲ್ಲಿ ಅಂತರಂಗದ ತುಮುಲ ಹಾಗೂ ಅನುಭವ ಮಂಥನ ವ್ಯಕ್ತವಾಗುತ್ತದೆ. ಪ್ರಗತಿಶೀಲ ಕವಿಯಾಗಿರುವ ಅವರು ಸಾಹಿತ್ಯ ಕ್ಷೇತ್ರದಲ್ಲಿ ವಿಭಿನ್ನ ಪ್ರಯೋಗಗಳಿಗೆ ಮುಂದಾಗಿದ್ದಾರೆ ಎಂದರು.ಕೃತಿಕಾರ ಡಾ. ಗೋವಿಂದ ಹೆಗಡೆ ಮಾತನಾಡಿ, "ಕವಿತೆ ಬರೆಯುವುದೇಕೆ? " ಎಂಬ ಪ್ರಶ್ನೆಯೊಂದಿಗೆ ಪ್ರಯೋಗ ನಡೆಸಿದ್ದು, ಅದಕ್ಕೆ ತಕ್ಕ ಉತ್ತರವನ್ನು ತಮ್ಮ ಬರಹಗಳಲ್ಲಿ ಹುಡುಕುವ ಪ್ರಯತ್ನ ಮಾಡಿದ್ದೇನೆ. ಮನಸ್ಸಿನ ಅಂತರಾಳದ ಬೇಗುದಿ ಹಾಗೂ ಸಾಮಾಜಿಕ ತಲ್ಲಣಗಳನ್ನು ಗಜಲ್‌ಗಳ ಮೂಲಕ ಕಟ್ಟಿಕೊಡಲಾಗಿದೆ. ಗಜಲ್‌ನಲ್ಲಿ ಹುಮ್ಮಸ್ಸು ಹಾಗೂ ಸಾಗುವ ದಾರಿ ಇದೆ ಎಂಬುದನ್ನು ಅನುಭವದಿಂದ ಕಂಡುಕೊಂಡಿದ್ದೇನೆ ಎಂದರು.