ಚಿಕ್ಕಮಗಳೂರು: ರಾಜ್ಯದಲ್ಲಿ ಈ ಒಂದೇ ವರ್ಷದಲ್ಲಿ 5 ಸಾವಿರ ಕಿರು ಆಹಾರ ಸಂಸ್ಕರಣಾ ಘಟಕ ಸ್ಥಾಪಿಸುವ ಗುರಿಯನ್ನು ಹೊಂದಲಾಗಿದೆ ಎಂದು ರಾಜ್ಯ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಈ ಯೋಜನೆಯಡಿ ಕಳೆದ 5 ವರ್ಷಗಳಲ್ಲಿ 6 ಸಾವಿರ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ. ಆದರೆ, ಈ ಬಾರಿ ಒಂದೇ ವರ್ಷದಲ್ಲಿ 5 ಸಾವಿರ ಘಟಕಗಳನ್ನು ಸ್ಥಾಪನೆ ಮಾಡುವ ಗುರಿ ಹೊಂದಲಾಗಿದೆ. ಹಾಗಾಗಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಯೋಜನೆಯ ಅರಿವು ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಪಿಎಂಎಫ್‌ಎಂಇ ಯೋಜನೆಯಡಿ ಉದ್ದಿಮೆ ಸ್ಥಾಪಿಸುವವರಿಗೆ ಕೇಂದ್ರ ಸರ್ಕಾರ ಶೇ.60 ಹಾಗೂ ರಾಜ್ಯ ಸರ್ಕಾರ ಶೇ.40 ರಷ್ಟು ಸಬ್ಸಿಡಿ ನೀಡುತ್ತಿತ್ತು. ಆದರೆ, ಈ ವರ್ಷದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಶೇ.60 ರಷ್ಟು ಕಬ್ಸಿಡಿ ನೀಡುತ್ತಿದೆ. ಇನ್ನುಳಿಕೆ ಶೇ.40 ರಷ್ಟು ಸಬ್ಸಿಡಿ ಕೇಂದ್ರ ಸರ್ಕಾರ ನೀಡಲಿದೆ ಎಂದರು.ಯುವಕರು ಕೆಲಸಕ್ಕಾಗಿ ಬೆಂಗಳೂರು ಸೇರಿದಂತೆ ಇತರೆ ನಗರಗಳಿಗೆ ಮಾತ್ರವಲ್ಲ, ದೇಶದ ಹಲವು ರಾಜ್ಯ, ವಿದೇಶಗಳಿಗೂ ತೆರಳುತ್ತಿದ್ದಾರೆ. ಹಲವು ಮಂದಿ ಮುಂದಿನ ಬದುಕಿಗಾಗಿ ಶಿಕ್ಷಣ ಪಡೆಯಬೇಕೆಂದು ಭಾವಿಸಿದ್ದಾರೆ. ಶಿಕ್ಷಣ ಜ್ಞಾನಗೋಸ್ಕರ, ಬದುಕಿಗಾಗಿ ಅಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ದೇಶದಲ್ಲಿ ಆಗು ಹೋಗುವ ಪ್ರಚಲಿತ ವಿಷಯವನ್ನು ತಿಳಿದುಕೊಳ್ಳಲು, ವಿಚಾರ ವಿನಿಮಯ ಮಾಡಿಕೊಳ್ಳಲು ಬೇಕು. ಕೆಲಸಕ್ಕಾಗಿ ಮಂತ್ರಿಗಳ ಮುಂದೆ, ಸಚಿವರ ಮನೆಯ ಮುಂದೆ ನಿಲ್ಲುವುದು ಸೂಕ್ತವಲ್ಲ. ನೀವೇ ಸ್ವಯಂ ಉದ್ಯೋಗ ಮಾಡಿ ಇತರರಿಗೂ ಉದ್ಯೋಗ ನೀಡುವ ದೃಢ ಸಂಕಲ್ಪ ಮಾಡಬೇಕೆಂದು ಕರೆ ನೀಡಿದರು.
ಕಬ್ಬು ಬೆಳೆಯುವ ಜಿಲ್ಲೆಗಳ ರೈತರು ಕಬ್ಬು ಕಟಾವಿಗೆ ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿದ್ದರು. ಈ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಮುಖ್ಯಮಂತ್ರಿಯವರು ಕಬ್ಬು ಕಟಾವಿನ 244 ಯಂತ್ರಗಳ ಖರೀದಿಗೆ ಸಬ್ಸಿಡಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕಾರ್ಮಿಕರ ಕೊರತೆ ಸಮಸ್ಯೆ ಕಡಿಮೆಯಾಗಲಿದೆ. ಹೀಗೆ ಕೃಷಿ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆ ತರಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂರಕ್ಷಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಎಚ್.ಹರೀಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಖಾಡಾ ಅಧ್ಯಕ್ಷ ಡಾ.ಅಂಶುಮಂತ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಕೆಪೆಕ್‌ನ ವ್ಯವಸ್ಥಾಪಕ ನಿರ್ದೇಶಕ ಸಿ.ಎಸ್.ಶಿವಪ್ರಕಾಶ್, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ ಉಪಸ್ಥಿತರಿದ್ದರು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ರೈತರು ಬೆಳೆ ಬೆಳೆಯುವ ಜತೆಗೆ ಮಾರುಕಟ್ಟೆಯೂ ಅತಿ ಮುಖ್ಯ. ನಮ್ಮದೇ ಬ್ರಾಂಡ್‌ನಲ್ಲಿ ಮಾರುಕಟ್ಟೆಗೆ ಪದಾರ್ಥಗಳನ್ನು ಬಿಡುಬೇಕು. ಆ ಮೂಲಕ ಹೆಚ್ಚಿನ ಲಾಭ ಪಡೆಯಬೇಕು. ಆಗ ಮಾತ್ರ ರೈತರ ಬದುಕು ಹಸನಾಗಲು ಸಾಧ್ಯ.- ಟಿ.ಡಿ. ರಾಜೇಗೌಡ, ಶಾಸಕ, ಶೃಂಗೇರಿ ಕ್ಷೇತ್ರ