ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರ ಕಲಿಸಿ: ಬಸವರಾಜ ವಂಕಲಕುಂಟಿ

KannadaprabhaNewsNetwork |  
Published : Mar 05, 2024, 01:34 AM IST
ಪೋಟೋ ಇದೆ. | Kannada Prabha

ಸಾರಾಂಶ

ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಕಲಿಸಿ ಅವರ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕಿರಿ ಎಂದು ಉದ್ಯಮಿ ಬಸವರಾಜ ವಂಕಲಕುಂಟಿ ತಿಳಿಸಿದರು.

ನರೇಗಲ್ಲ: ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಕಲಿಸಿ ಅವರ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕಿರಿ ಎಂದು ಉದ್ಯಮಿ ಬಸವರಾಜ ವಂಕಲಕುಂಟಿ ತಿಳಿಸಿದರು. ಅವರು ಸ್ಥಳೀಯ ಹೊಸ ಬಸ್ ನಿಲ್ದಾಣದ ಎದುರಿಗೆ ಇರುವ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ೭ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಸಂಸ್ಕಾರವಿಲ್ಲದ ಶಿಕ್ಷಣ ಶೂನ್ಯದಂತೆ. ಪಾಲಕರು ಮಕ್ಕಳಿಗೆ ಮೌಲ್ಯ ಕಲಿಸಬೇಕು. ಸಂಸ್ಕಾರವಿಲ್ಲದ ಕಾರಣ ಇಂದು ಹಲವು ಮಕ್ಕಳು ದಾರಿತಪ್ಪುತ್ತಿರುವುದನ್ನು ಕಾಣುತ್ತಿದ್ದೇವೆ. ಉತ್ತಮ ಶಿಕ್ಷಣ ನೀಡಿ ವಿದೇಶಕ್ಕೆ ಮಕ್ಕಳನ್ನು ಕಳುಹಿಸಿ ಎಲ್ಲ ಸೌಕರ್ಯ ನೀಡಿದರೂ ಇಂದು ಹಲವರು ತಂದೆ-ತಾಯಿಯರನ್ನು ವೃದ್ಧಾಶ್ರಮಕ್ಕೆ ಕಳುಹಿಸುತ್ತಿದ್ದಾರೆ. ಕೆಲವರು ಹೆತ್ತವರು ಸತ್ತಾಗಲೂ ಬರುತ್ತಿಲ್ಲ. ಈ ಮನಸ್ಥಿತಿ ಮುಂದುವರಿದರೆ ಸಮಾಜ ಅಧೋಗತಿಗೆ ಇಳಿಯಲಿದೆ. ಮಕ್ಕಳಿಗೆ ಸಂಸ್ಕಾರ ಕಲಿಸಬೇಕು ಎಂದು ಅವರು ಪಾಲಕರಿಗೆ ಕಿವಿಮಾತು ಹೇಳಿ ಮನುಷ್ಯ ಶೈಕ್ಷಣಿಕವಾಗಿ ಎಷ್ಟೇ ಎತ್ತರಕ್ಕೆ ಬೆಳೆದರೂ ಅವನಲ್ಲಿ ಸಂಸ್ಕಾರವಿಲ್ಲದಿದ್ದರೆ ಆ ವ್ಯಕ್ತಿ ಸಮಾಜದ ಅತ್ಯಂತ ಕಟ್ಟಕಡೆಯ ವ್ಯಕ್ತಿಯಾಗಿರುತ್ತಾನೆ ಎಂದು ನುಡಿದರು.

ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ.ಸಿ ಅಧ್ಯಕ್ಷ ಆನಂದ ಕೊಟಗಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಪಾಠ ಮಾಡುವ ಎಲ್ಲಾ ಶಿಕ್ಷಕರು ತಮ್ಮ ಮಕ್ಕಳನ್ನು ಮೊದಲಿಗೆ ಸರ್ಕಾರಿ ಶಾಲೆಯಲ್ಲಿ ಕಲಿಸಬೇಕು ಅನಂತರ ಪರರ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಮನವೊಲಿಸಬೇಕು. ಸರ್ಕಾರಿ ಶಾಲೆಯಲ್ಲಿ ಓದಿದವರೇ ಇಂದು ದೇಶದ ಮಹಾನ್ ಸಾಧಕರಾಗಿದ್ದಾರೆ ಎಂಬುದನ್ನು ಅರಿತು ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ದಾಖಲು ಮಾಡಿಸಬೇಕು ಎಂದರು. ಸರ್ಕಾರಿ ಶಾಲೆಗಳೆಂಬ ಕೀಳರಿಮೆ ಅಗತ್ಯವಿಲ್ಲ, ದೇಶದ ಮಹಾನ್ ಸಾಧಕರೆಲ್ಲಾ ಇಲ್ಲೇ ಓದಿದ್ದು ಎಂಬುದನ್ನು ಅರಿತು ದಾನಿಗಳು ನೀಡುವ ಸೌಲಭ್ಯ ಸದುಪಯೋಗ ಮಾಡಿಕೊಳ್ಳಿ ನಿರಂತರ ಅಧ್ಯಯನದ ಮೂಲಕ ಸಾಧಕರಾಗಿ ಎಂದರು.

ದಾನಿ ಹಾಗೂ ಹೈದ್ರಾಬಾದಿನ ಕೃಷಿ ವಿಜ್ಞಾನಿ ಚಂದ್ರಶೇಖರ ಶಿವನಗೌಡ ಸೋಮನಗೌಡ್ರ ಅವರು ನಮ್ಮೂರಿನ ಸರ್ಕಾರಿ ಶಾಲೆ ಸಭಾಮಂಟಪ ಕಟ್ಟಿಸಿಕೊಡಲು ಒಪ್ಪಿದ್ದಾರೆ. ಹಾಗಾಗಿ ಮುಂದಿನ ವರ್ಷದ ವಾರ್ಷಿಕ ಕಾರ್ಯಕ್ರಮ ಸಭಾಮಂಟಪದಲ್ಲಿ ನಡೆಯಲಿದೆ ಎಂದು ಭರವಸೆ ನೀಡಿದರು.

ಈ ವೇಳೆ ಇನ್ನೋರ್ವ ಮುಖ್ಯ ಅತಿಥಿ ಅಬ್ಬಿಗೇರಿಯ ಮುಖ್ಯ ಶಿಕ್ಷಕ ಡಿ.ಎಚ್. ಪರಂಗಿ ಮಾತನಾಡಿ, ಕಲಿಕೆಗೆ ಆಸಕ್ತಿ ಸಾಧನೆಯ ಛಲ ಮುಖ್ಯ ಎಂದು ತಿಳಿಸಿ, ಬಡತನ ಅಡ್ಡಿಯಾಗಬಾರದು, ಮಕ್ಕಳ ಶೈಕ್ಷಣಿಕ ಉನ್ನತಿಗೆ ನೆರವು ನೀಡಲು ಸರ್ಕಾರಿ ಶಾಲೆಗಳಲ್ಲಿ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿದೆ ಅದನ್ನು ಸದುಪಯೋಗ ಪಡೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಕರಾಬೇಕು, ಸರ್ಕಾರಿ ಶಾಲೆಗಳ ಮಕ್ಕಳು ಕೀಳರಿಮೆ ಬಿಟ್ಟು ಸಾಧನೆಯತ್ತ ಸಾಗಬೇಕು. ನೀವು ಯಾರಿಗಿಂತ ಕಡಿಮೆ ಇಲ್ಲ ಎಂಬುದನ್ನು ಅರಿಯಿರಿ ಕಷ್ಟಪಟ್ಟು ಓದಬೇಕು ಎಂದರು.

ಇದೇ ಸಂದರ್ಭದಲ್ಲಿ ಹಿರಿಯರಾದ ಈರಮ್ಮ ಸೋಮನಗೌಡ್ರ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಶಾಲೆಯ ಮುಖ್ಯೋಪಾಧ್ಯಾಯ ಬಸವರಾಜ ಕುರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೈಲಾರಪ್ಪ ಚಳ್ಳಮರದ, ರೇಣುಕಾ ಜೋಗಿ, ಪೋತರಾಜ ಮಣ್ಣೊಡ್ಡರ, ಎಸ್.ಎಚ್. ಹಾದಿಮನಿ, ಶ್ರೀಮತಿ ಆರ್.ಡಿ.ತೋಟಗಂಟಿ, ಅಶೋಕ ಬಂಡಿವಡ್ಡರ, ಬಸವ್ವ ಹೊಸಮನಿ, ಜೀವನಬಿ ಲಕ್ಷ್ಮೇಶ್ವರ, ರೇಣುಕಾ ನಡುವಲಕೇರಿ, ಗಂಗವ್ವ ಗೋಡಿ, ಅಬ್ದುಲಗಣಿ ಕುದರಿ, ದೀಪಾ ಈಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ