ಶಿಕ್ಷಕರ ದಿನಾಚರಣೆ: ನಾಲ್ವರು ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ

KannadaprabhaNewsNetwork |  
Published : Sep 06, 2024, 01:11 AM ISTUpdated : Sep 06, 2024, 01:12 AM IST
5ಕೆಎಂಎನ್ ಡಿ15 | Kannada Prabha

ಸಾರಾಂಶ

ಭಾರತೀಯ ಸಂಪ್ರದಾಯದದಲ್ಲಿ ಪೋಷಕರ ನಂತರ ಅತ್ಯಂತ ಗೌರವಾನ್ವಿತ ವೃತ್ತಿ ಶಿಕ್ಷಕರದು. ಮಕ್ಕಳಿಗೆ ವಿದ್ಯಾ ಬುದ್ಧಿ ಕಲಿಸುವ ಗುರುಗಳು ಆಚಾರ್ಯ ದೈವೋಭವ ಎಂಬ ವೈಭವಕ್ಕೆ ಪಾತ್ರರಾಗುತ್ತಾರೆ. ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಣದ ಪಾತ್ರ ವಿಶೇಷವಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣದಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ನಾಲ್ವರು ಶಿಕ್ಷಕರು ಸೇರಿದಂತೆ 62 ಮಂದಿ ನಿವೃತ್ತ ಶಿಕ್ಷಕರನ್ನು ಅಭಿನಂದಿಸಲಾಯಿತು.

ಪಟ್ಟಣದ ಶ್ರೀವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಜಿಪಂ, ಶಿಕ್ಷಣ ಇಲಾಖೆಯಿಂದ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ಚಂದೂಪುರ ಡಿ.ಕೆ.ಗೌಡ ಪ್ರೌಢಶಾಲೆ ಮುಖ್ಯ ಶಿಕ್ಷಕ ಶಿವ ಮಾದೇಗೌಡ, ಮರಳಿಗ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ಪಿ.ವಿ.ಮಾಲಾ, ಹೊಸಗಾವಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಲಕ್ಷ್ಮಿನರಸಿಂಹ ಶಾಸ್ತ್ರಿ ಹಾಗೂ ರುದ್ರಾಕ್ಷಿ ಪುರ ಶಾಲೆ ಶಿಕ್ಷಕಿ ವಿ.ಸಿ.ಲಕ್ಷ್ಮಿ ಅವರು ಇಲಾಖೆ ಹಾಗೂ ಶಿಕ್ಷಕ ಸಂಘಟನೆಯಿಂದ ಶಾಲು ಹೊದಿಸಿ ಫಲತಾಂಬೂಲ ನೀಡಿ ಗೌರವ ಸಮರ್ಪಣೆ ಮಾಡಲಾಯಿತು.

ಅಲ್ಲದೇ ಸರ್ಕಾರ, ಅನುದಾನಿತ, ಅನುದಾನ ರಹಿತ ಹಾಗೂ ವಸತಿ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರು ಮತ್ತು ಮರಣ ಹೊಂದಿದ ಶಿಕ್ಷಕರ ಕುಟುಂಬ ವರ್ಗವನ್ನು ಸನ್ಮಾನಿಸಲಾಯಿತು. ಶಾಸಕ ಕೆ.ಎಂ.ಉದಯ್ ಅನುಪಸ್ಥಿತಿಯಲ್ಲಿ ತಾಪಂ ಇಒ ರಾಮಲಿಂಗಯ್ಯ ಕಾರ್ಯಕ್ರಮ ಉದ್ಘಾಟಿಸಿದರು.

ನಂತರ ಮಾತನಾಡಿ, ಭಾರತೀಯ ಸಂಪ್ರದಾಯದದಲ್ಲಿ ಪೋಷಕರ ನಂತರ ಅತ್ಯಂತ ಗೌರವಾನ್ವಿತ ವೃತ್ತಿ ಶಿಕ್ಷಕರದು. ಮಕ್ಕಳಿಗೆ ವಿದ್ಯಾ ಬುದ್ಧಿ ಕಲಿಸುವ ಗುರುಗಳು ಆಚಾರ್ಯ ದೈವೋಭವ ಎಂಬ ವೈಭವಕ್ಕೆ ಪಾತ್ರರಾಗುತ್ತಾರೆ. ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಣದ ಪಾತ್ರ ವಿಶೇಷವಾಗಿದೆ. ಇದನ್ನು ಅಳವಡಿಸಿಕೊಂಡಾಗ ಮಾತ್ರ ಮನುಷ್ಯ ಜೀವನದಲ್ಲಿ ಉತ್ತಮ ಹಾದಿ ಕಂಡುಕೊಳ್ಳಲು ಸಾಧ್ಯ ಎಂದರು.

ಅಕ್ಷರ ದಾಸೋಹ ಇಲಾಖೆ ನಿಕಟಪೂರ್ವ ಸಹಾಯಕ ನಿರ್ದೇಶಕಿ ಡಾ.ಮಂಗಳ ಪ್ರಧಾನ ಭಾಷಣ ಮಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಕಾಳಿರಯ್ಯ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದೇವರಾಜು, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ನಿಕಟ ಪೂರ್ವ ಅಧ್ಯಕ್ಷ ರವೀಶ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ರಾಜೇಶ್ವರಿ, ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಅಂಕ ಗೌಡ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಆರ್. ಅನಂತೇಗೌಡ, ಸರ್ಕಾರಿ ಜೂನಿಯರ್ ಕಾಲೇಜಿನ ಪ್ರಾಂಶುಪಾಲೆ ಎ.ಸಿ. ಗೀತಾ, ಕಸಾಪ ಮಾಜಿ ಅಧ್ಯಕ್ಷರಾದ ಸುನಿಲ್ ಕುಮಾರ್, ಅಪೂರ್ವ ಚಂದ್ರ, ಕೆ.ಎಂ.ಉದಯ್ ಚಾರಿಟಬಲ್ ಟ್ರಸ್ಟ್ ನಿರ್ದೇಶಕ ಕೆ.ಎಂ.ರವಿ ಹಾಗೂ ತಾಲೂಕಿನ ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ನಿರ್ದೇಶಕರಗಳು ಭಾಗವಹಿಸಿದ್ದರು.

ಗುರುಭವನ ಅಭಿವೃದ್ಧಿಗೆ ಸರ್ಕಾರ ಬದ್ಧ: ಶಾಸಕರ ಸಂದೇಶ

ಮದ್ದೂರು:

ಶಿಕ್ಷಕರ ಸಂಘಟನೆಗಳ ಬಹು ದಿನಗಳ ಬೇಡಿಕೆಯಾದ ಗುರುಭವನದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ.

ತಮ್ಮ ಗೈರುಹಾಜರಿಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಶುಭ ಸಂದೇಶ ಕೋರಿರುವ ಶಾಸಕರು, ಗುರುಭವನದ ಅಭಿವೃದ್ಧಿಗೆ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದೆ. ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈಚೆಗೆ ಮದ್ದೂರು ಭೇಟಿಗೆ ಆಗಮಿಸಿದ ವೇಳೆ ಗುರುಭವನದ ಸ್ಥಳ ವೀಕ್ಷಣೆ ಮಾಡಿದ ನಂತರ ಅಭಿವೃದ್ಧಿ ಕುರಿತಂತೆ ಚರ್ಚೆ ನಡೆಸಲಾಗಿತ್ತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಚಿವರು ಭವನದ ಅಭಿವೃದ್ಧಿಗೆ ಅಂದಾಜು ವೆಚ್ಚದ ಯೋಜನೆ ತಯಾರಿಸಿ ಶಿಕ್ಷಣ ಇಲಾಖೆಗೆ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಅನುದಾನ ಬಿಡುಗಡೆಯಾದ ನಂತರ ಗುರು ಭವನದ ಪುನಶ್ಚೇತನ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಶಾಸಕ ಉದಯ್ ತಮ್ಮ ಸಂದೇಶದಲ್ಲಿ ಶಿಕ್ಷಕರಿಗೆ ಆಶ್ವಾಸನೆ ನೀಡಿದ್ದಾರೆ ಎಂದು ಬಿಇಒ ಕಾಳೀರಯ್ಯ ತಿಳಿಸಿದರು.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ