ಬ್ಯಾಡಗಿ: ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶ್ರೇಷ್ಠ ಶಿಲ್ಪಿಗಳು, ಜ್ಞಾನ ಹಂಚುವ ದೈವಸ್ವರೂಪಿಗಳು. ಪಾಠದ ಜೀವಂತತೆ, ಜೀವನ ಮೌಲ್ಯಗಳ ಬೋಧನೆ, ಸತ್ಸಂಸ್ಕಾರದ ಬೀಜ ಬಿತ್ತನೆ, ಇವೆಲ್ಲ ಶಿಕ್ಷಕರಿಂದ ಮಾತ್ರ ಸಾಧ್ಯ ಎಂದು ಕಾಂಗ್ರೆಸ್ ತಾಲೂಕಾಧ್ಯಕ್ಷ ದಾನಪ್ಪ ಚೂರಿ ಅಭಿಪ್ರಾಯಪಟ್ಟರು.
ಶಿಕ್ಷಕರು ಕಲಿಕೆ ಮಾತ್ರವಲ್ಲದೆ, ಜೀವನಕ್ಕೆ ಬೇಕಾದ ಸತ್ಸಂಸ್ಕಾರ, ಶಿಸ್ತಿನ ಪಾಠ ಕಲಿಸಿ ವಿದ್ಯಾರ್ಥಿಗಳ ಬದುಕನ್ನು ರೂಪಿಸುತ್ತಾರೆ ಎಂದರು.
ತಹಸೀಲ್ದಾರ ಚಂದ್ರಶೇಖರ್ ನಾಯ್ಕ ಮಾತನಾಡಿ, ಒಳ್ಳೆಯ ಗುರುವಿನ ಜತೆ ಕಳೆಯುವ ಒಂದು ದಿನ, ಸಾವಿರ ದಿನದ ಅಧ್ಯಯನಕ್ಕಿಂತ ಅಮೂಲ್ಯವಾಗಿದೆ. ಇದರೊಟ್ಟಿಗೆ ಶಿಕ್ಷಕರು ದೇಶಕ್ಕೆ ಅದಮ್ಯ ಕೊಡುಗೆ ನೀಡುವ ಬುದ್ಧಿವಂತರನ್ನು ಸೃಷ್ಠಿ ಮಾಡುವ ನಿರ್ಮಾತೃಗಳು ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ, ತಾಲೂಕಿನಲ್ಲಿ ಶೈಕ್ಷಣಿಕ ಅಭ್ಯುದಯಕ್ಕೆ ಇಲ್ಲಿನ ಎಲ್ಲ ಶಿಕ್ಷಕರ ಕೊಡುಗೆ ಅಪಾರವಾಗಿದೆ. ನಿಮ್ಮೆಲ್ಲರ ಶ್ರಮದ ಫಲವಾಗಿ ಕಳೆದ ಹಲವು ವರ್ಷಗಳಿಂದ ಬ್ಯಾಡಗಿ ತಾಲೂಕು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಮೊದಲ ಸ್ಥಾನ ಪಡೆದು ಉತ್ತಮ ಫಲಿತಾಂಶ ನೀಡಲು ಸಾಧ್ಯವಾಗಿದೆ ಎಂದರು.
ವೇದಿಕೆಯಲ್ಲಿ ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಶಂಬನಗೌಡ ಪಾಟೀಲ, ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್ ಮುನಾಫ್ ಎರೇಶಿಮಿ, ಸದಸ್ಯ ಈರಣ್ಣ ಬಣಕಾರ್, ದುರ್ಗೇಶ್ ಗೊಣೆಮ್ಮನವರ್, ನೌಕರರ ಸಂಘದ ಅಧ್ಯಕ್ಷ ಎಂ.ಏನ್.ಕಂಬಳಿ, ಸಮನ್ವಯಾಧಿಕಾರಿ ಎಂ.ಎಫ್. ಹುಳ್ಯಾಳ್, ಕಸಾಪ ತಾಲೂಕಾಧ್ಯಕ್ಷ ಬಿ.ಎಂ. ಜಗಪುರ, ಜಿ.ಬಿ. ಬೂದಿಹಾಳ, ಎ.ಟಿ. ಪೀಠದ, ಪೊಮ್ಮಾರ, ಎಂ.ಎನ್. ಚಳಗೇರಿ, ಜೀವರಾಜ ಚಳಗೇರಿ ಸೇರಿದಂತೆ ತಾಲೂಕಿನ ಶಿಕ್ಷಕವೃಂದ ಹಾಗೂ ಹಲವರು ಉಪಸ್ಥಿತರಿದ್ದರು. ಎಂ.ಎಫ್. ಕರಿಯಣ್ಣನವರ ನಿರೂಪಿಸಿದರು.