ನಾರಾಯಣ ಹೆಗಡೆ ಹಾವೇರಿ
ಬೇಡ್ತಿ ಕೊಳ್ಳ ಪ್ರದೇಶದ ಜನರ ವಿರೋಧದಿಂದ ಸ್ಥಗಿತಗೊಂಡಿದ್ದ ಬೇಡ್ತಿ-ವರದಾ ನದಿ ಜೋಡಣೆ ಯೋಜನೆಯನ್ನು ಪಶ್ಚಿಮಘಟ್ಟದ ಪರಿಸರ ಮತ್ತು ಜೀವವೈವಿಧ್ಯಕ್ಕೆ ಹಾನಿಯಾಗದ ರೀತಿಯಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಈ ಹಿಂದಿನ ಡಿಪಿಆರ್‌ನಲ್ಲಿನ ಕೆಲ ಅಂಶಗಳನ್ನು ಮಾರ್ಪಾಡು ಮಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ಜಲಾಭಿವೃದ್ಧಿ ಸಂಸ್ಥೆ (ಎನ್‌ಡಬ್ಲುಡಿಎ) ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.ಶಿರಸಿ ಭಾಗದಲ್ಲಿ ಬೇಡ್ತಿ ನದಿಯೆಂದು, ಮುಂದೆ ಗಂಗಾವಳಿ ನದಿಯಾಗಿ ಹರಿದು ಅರಬ್ಬೀ ಸಮುದ್ರ ಸೇರುವ ಈ ನದಿಯ ನೀರನ್ನು ಉತ್ತರ ಕರ್ನಾಟಕ ಭಾಗಕ್ಕೆ ಹರಿಸುವುದೇ ಬೇಡ್ತಿ-ವರದಾ ನದಿ ಜೋಡಣೆ ಯೋಜನೆ. ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ವರದಾ ನದಿಗೆ ತಂದು ತುಂಗಭದ್ರಾ ನದಿಗೆ ಸೇರಿಸುವುದು ಯೋಜನೆಯ ಮುಖ್ಯ ಉದ್ದೇಶ. ಮೂರು ದಶಕಗಳ ಹಿಂದಿನ ರಾಷ್ಟ್ರೀಯ ದೃಷ್ಟಿಕೋನದ ಯೋಜನೆ (ನ್ಯಾಶನಲ್ ಪ್ರಾಸ್ಪೆಕ್ಟಸ್ ಪ್ರಾಜೆಕ್ಟ್) ಆಗಿರುವ ಇದಕ್ಕೆ ಈಗ ಮರುಜೀವ ಬಂದಿದೆ. ಯೋಜನೆಯ ಸ್ಪರೂಪದಲ್ಲಿ ಬದಲಾವಣೆ ಮಾಡಿ ಪರಿಸರಕ್ಕೆ ಹೆಚ್ಚಿನ ರೀತಿಯ ಹಾನಿಯಾಗದ ರೀತಿಯಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ.
ಏನು ಬದಲಾವಣೆ?: ರಾಷ್ಟ್ರೀಯ ಜಲಾಭಿವೃದ್ಧಿ ಸಂಸ್ಥೆಯು 2022ರಲ್ಲಿ ಸಲ್ಲಿಸಿದ್ದ ಡಿಪಿಆರ್‌ನಲ್ಲಿ ಮಾರ್ಪಾಡು ಮಾಡಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಹೊಸದಾಗಿ ಪಿಎಫ್‌ಆರ್ (ಪೂರ್ವ ಕಾರ್ಯ ಸಾಧ್ಯತಾ ವರದಿ) ಸಿದ್ಧಪಡಿಸಲಾಗಿದೆ. ಈ ವರದಿ ಮೇರೆಗೆ ಎನ್‌ಡಬ್ಲುಡಿಎ ಹೊಸ ಡಿಪಿಆರ್ ಸಿದ್ಧಪಡಿಸಲಿದೆ.ಉದ್ದೇಶಿತ ಹೊಸ ಯೋಜನೆಯಲ್ಲಿ ಎರಡು ಲಿಂಕೇಜ್ ಮೂಲಕ ಬೇಡ್ತಿ ನದಿಯಿಂದ ವರದಾ ನದಿಗೆ ನೀರು ಬರಲಿದೆ. ಯಾವ ಪ್ರದೇಶಕ್ಕೂ ತೊಂದರೆಯಾಗದ ರೀತಿಯಲ್ಲಿ ಬೇಡ್ತಿ ನದಿಯಿಂದ ನೀರನ್ನು ಲಿಫ್ಟ್ ಮಾಡಿ ವರದೆಗೆ ತರುವುದಾಗಿದೆ. ರಾಷ್ಟ್ರೀಯ ದೃಷ್ಟಿಕೋನದ ಯೋಜನೆ ಪ್ರಕಾರ ಬೇಡ್ತಿಯಿಂದ ವರದಾ ನದಿಗೆ ನೀರು ಲಿಫ್ಟ್ ಮಾಡುವುದು ಒಂದಾದರೆ ಬೇಡ್ತಿಯಿಂದ ಧರ್ಮಾ ಜಲಾಶಯದಲ್ಲಿ ನೀರು ಸಂಗ್ರಹಿಸಿ ಭರ್ತಿ ಮಾಡಿ ಅಲ್ಲಿಂದ ವರದಾ ನದಿಗೆ ಹರಿಸುವುದು ಮತ್ತೊಂದು ಮಾರ್ಗವಾಗಿದೆ. ಈ ಎರಡು ಮಾರ್ಗಗಳ ಮೂಲಕ ಕ್ರಮವಾಗಿ 10.6 ಟಿಎಂಸಿ ಮತ್ತು 7.6 ಟಿಎಂಸಿ ಸೇರಿದಂತೆ 18.42 ಟಿಎಂಸಿ ನೀರನ್ನು ವರದಾ ನದಿಗೆ ಹರಿಸುವುದು ಉದ್ದೇಶಿತ ಯೋಜನೆಯಲ್ಲಿದೆ.
ಈ ಮಾರ್ಪಾಟು ಮಾಡಿದ ಯೋಜನೆಯ ಪ್ರಸ್ತಾವನೆ ಎನ್‌ಡಬ್ಲುಡಿಎ ಬೆಂಗಳೂರು ವಿಭಾಗೀಯ ಕಚೇರಿಯಿಂದ ದೆಹಲಿಗೆ ಸಲ್ಲಿಕೆಯಾಗಿದ್ದು, ಅಲ್ಲಿ ಪರಿಶೀಲನೆ ನಡೆಯಬೇಕಿದೆ. ಯೋಜನೆಯ ಪೂರ್ವ ಕಾರ್ಯ ಸಾಧ್ಯತಾ ವರದಿ ಕೂಡ ಸಲ್ಲಿಕೆಯಾಗಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.ಹಿಂದಿನ ಡಿಪಿಆರ್‌ನಲ್ಲಿ ಏನಿತ್ತು?
ಶಿರಸಿ ತಾಲೂಕಿನ ಸಾಲ್ಕಣಿ-ವಾನಳ್ಳಿ ನಡುವೆ ಇರುವ ಶಿರ್ಲೇಬೈಲು ಬಳಿ ಪಟ್ಟದಹಳ್ಳಕ್ಕೆ ಅಣೆಕಟ್ಟು ನಿರ್ಮಿಸಿ ಅಲ್ಲಿಂದ ಸಹಸ್ರಲಿಂಗದ ಅಣೆಕಟ್ಟಿಗೆ ನೀರನ್ನು ಪಂಪ್ ಮಾಡುವುದು. ಶಿರಸಿ ತಾಲೂಕಿನ ಸಹಸ್ರಲಿಂಗದ ಮೇಲ್ಭಾಗದಲ್ಲಿ ಶಾಲ್ಮಲಾ ಹಳ್ಳಕ್ಕೆ ಅಣೆಕಟ್ಟು ನಿರ್ಮಿಸಿ ಅಲ್ಲಿಂದ ವರದಾ ನದಿಗೆ ನೀರನ್ನು ಪಂಪ್ ಮಾಡುವುದು. ಯಲ್ಲಾಪುರ ತಾಲೂಕಿನ ಬೇಡ್ತಿ ಸೇತುವೆಯ ಕೆಳಭಾಗದಲ್ಲಿ ಸುರಮನೆ ಹಳ್ಳಿಯಲ್ಲಿ ಬೇಡ್ತಿ ನದಿಗೆ ಅಣೆಕಟ್ಟು ನಿರ್ಮಿಸಿ ಅಲ್ಲಿಂದ ಮುಂಡಗೋಡು ತಾಲೂಕಿನ ಮಳಗಿ ಸಮೀಪದ ಧರ್ಮಾ ಜಲಾಶಯಕ್ಕೆ ನೀರನ್ನು ಲಿಫ್ಟ್ ಮಾಡುವುದು. ಈ ಮೂರು ಅಣೆಕಟ್ಟೆಗಳಿಂದ ಕ್ರಮವಾಗಿ 6.5 ಕಿಮೀ, 6.7 ಕಿಮೀ ಮತ್ತು 4.23 ಕಿಮೀ ಉದ್ದದ ಸುರಂಗ ನಿರ್ಮಾಣ ಮಾಡಲಾಗುತ್ತದೆ. 52.40 ಕೋಟಿ ಘನ ಮೀಟರ್ ನೀರನ್ನು ಸಂಗ್ರಹಿಸಿ ಪಂಪ್ ಮಾಡಲಾಗುತ್ತದೆ. ಇದರಿಂದ ಉತ್ತರ ಕರ್ನಾಟಕ ಭಾಗಕ್ಕೆ ನೀರಾವರಿ ಒದಗಿಸುವುದು ಈ ಹಿಂದೆ ಸಲ್ಲಿಕೆಯಾಗಿದ್ದ ಡಿಪಿಆರ್‌ನಲ್ಲಿ ತಿಳಿಸಲಾಗಿತ್ತು.ಉತ್ತರ ಕರ್ನಾಟಕಕ್ಕೆ ನೀರು: ಬೇಡ್ತಿ-ವರದಾ ನದಿ ಜೋಡಣೆ ಯೋಜನೆಯಿಂದ 18 ಟಿಎಂಸಿ ನೀರನ್ನು ಬಳಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಇದರಿಂದ ಹಾವೇರಿ, ಗದಗ, ಕೊಪ್ಪಳ, ರಾಯಚೂರು ಜಿಲ್ಲೆವರೆಗೂ ನೀರಾವರಿ ಸೌಲಭ್ಯ ಕಲ್ಪಿಸುವುದು ಯೋಜನೆಯ ಉದ್ದೇಶವಾಗಿದೆ. ಪಶ್ಚಿಮಘಟ್ಟದಲ್ಲಿ ಹರಿಯುವ ಬೇಡ್ತಿ ನದಿ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತದೆ ಎಂಬುದು ಯೋಜನೆ ಪರವಾಗಿರುವವರ ವಾದವಾಗಿದೆ. ಬೇಡ್ತಿ ನದಿ ತಿರುವು ಯೋಜನೆ ಕುರಿತು 2003ರಲ್ಲೇ ಎನ್‌ಡಬ್ಲುಡಿಎ ಅಧ್ಯಯನ ನಡೆಸಲು ಮುಂದಾಗಿತ್ತು. ಆದರೆ, ಸ್ಥಳೀಯರ ವಿರೋಧದಿಂದ ಕೈಬಿಟ್ಟಿತ್ತು.
ಬೇಡ್ತಿ-ವರದಾ ನದಿ ಜೋಡಣೆ ಹಳೆಯ ಯೋಜನೆಗಳಲ್ಲಿ ಒಂದು. ಆದರೆ, ಪರಿಸರ, ಜೀವವೈವಿಧ್ಯಕ್ಕೆ ಹಾನಿಯಾಗುತ್ತದೆ ಎಂಬ ಕಾರಣಕ್ಕೆ ಅನುಷ್ಠಾನಗೊಳಿಸಿರಲಿಲ್ಲ. ಈಗ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಯೋಜನೆ ಜಾರಿಗೆ ಪ್ರಯತ್ನಿಸಲಾಗುತ್ತಿದೆ. ಯೋಜನೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಿದೆ. ಅದಕ್ಕಾಗಿ ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ಜನ ಜಾಗೃತಿ ಸಭೆ ನಡೆಸಲಾಗುವುದು ಎಂದು ಮಾಜಿ ಸಿಎಂ, ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.