ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಕಳೆದ 17 ವರ್ಷಗಳ ಹಿಂದೆ ತೀರ್ಥಹಳ್ಳಿ ತಾಲೂಕಿಗೆ ಸೀಮಿತವಾಗಿ ಪ್ರಾರಂಭವಾದ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಂಘವು ಅತ್ಯಂತ ಕಡಿಮೆ ಅವಧಿಯಲ್ಲಿ ರಾಜ್ಯದ 25 ಜಿಲ್ಲೆ ಮತ್ತು 155 ತಾಲೂಕುಗಳಿಗೆ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿದ್ದು, ವಾರ್ಷಿಕ 800 ಕೋಟಿ ರು.ಗೂ ಅಧಿಕ ವಹಿವಾಟು ನಡೆಸುವ ಮೂಲಕ ರಾಜ್ಯದ ಸಹಕಾರ ಕ್ಷೇತ್ರದಲ್ಲಿ ದಾಖಲೆ ನಿರ್ಮಿಸಿದೆ. ಈ ಸಂಘವು ತನ್ನ ಕಾರ್ಯ ವೈಖರಿ ಮೂಲಕ ರಾಜ್ಯವಷ್ಟೇ ಅಲ್ಲ ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಅಭಿಪ್ರಾಯಪಟ್ಟರು.ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರ ಸಂಘದ ವತಿಯಿಂದ ಬುಧವಾರ ಇಲ್ಲಿನ ಶಿಕ್ಷಕರ ಸೌಹಾರ್ದ ಭವನದ ಟಿಎಸ್ ಟಿ ಕನ್ವೆನ್ಷನ್ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಸಂಘದ 11ನೇ ಮಹಾಸಭೆ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ಅವರಿಗೆ ನೆರವಾಗಲು, ಜೀವನ ಭದ್ರತೆ ಕಲ್ಪಿಸಲು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ಸಂಘ ಕಾರ್ಯನಿರ್ವಹಿಸುತ್ತಿದೆ. ಈ ಸಂಘದ ಮೂಲಕ ಶಿಕ್ಷಕರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಡಿಸಿಸಿ ಬ್ಯಾಂಕ್ ನಿಂದ ಕಟ್ಟಡ ಸಾಲ ಸೇರಿ 30 ಕೋಟಿ ರು.ನಷ್ಟು ಸಾಲ ನೀಡಲಾಗಿದೆ ಎಂದು ತಿಳಿಸಿದರು.ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಮಾತನಾಡಿ, ಸಹಕಾರ ಕ್ಷೇತ್ರದ ಮೂಲಕ ಶಿಕ್ಷಕರ ಶ್ರೇಯೋಭಿವೃದ್ಧಿಗೆ ಶ್ರಮಿಸುವುದು ಸಂಘದ ಗುರಿಯಾಗಿದೆ. ಶಿಕ್ಷಕರ ಜೀವನಕ್ಕೆ ಭದ್ರತೆ ಒದಗಿಸಲು ಸಂಘವು ಬದ್ಧವಾಗಿದೆ ಎಂದರು.
ಅನಾರೋಗ್ಯ, ಮನೆ, ಮದುವೆ ಮತ್ತಿತರೆ ಕೌಟುಂಬಿಕ ಆಗುಹೋಗುಗಳಿಗೆ ಸಂಬಂಧಿಸಿದಂತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ಅವರಿಗೆ ನೆರವಾಗಲು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ಸಂಘ ಸದಾ ಸಿದ್ಧವಿದೆ ಎಂದು ಭರವಸೆ ನೀಡಿದರು.ಶಿಕ್ಷಕರ ಪ್ರತಿಭಾನ್ವಿತ ಮಕ್ಕಳಿಗೆ ಪುರಸ್ಕಾರ, ನಿವೃತ್ತ ಶಿಕ್ಷಕರಿಗೆ ಸನ್ಮಾನ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಆರ್.ಎಂ. ಮಂಜುನಾಥ ಗೌಡರನ್ನು ಅಭಿನಂದಿಸಲಾಯಿತು.
ಮಾಮ್ ಕೋಸ್ ಉಪಾಧ್ಯಕ್ಷ ಹುಲ್ಕುಳಿ ಮಹೇಶ್, ತೀರ್ಥಹಳ್ಳಿ ಪಪಂ ಅಧ್ಯಕ್ಷ ರೆಹಮತ್ ಉಲ್ಲಾ ಅಸಾದಿ, ಉಪಾಧ್ಯಕ್ಷೆ ಗೀತಾ ರಮೇಶ್, ರಾಘವೇಂದ್ರ ಎಸ್., ಶಿರಸಿಯ ಬಾಲಚಂದ್ರ ಪಟಗಾರ, ಸುರೇಶ ಪಟಗಾರ, ಉದಯ ಭಟ್ಟ, ದಾವಣಗೆರೆಯ ತಿಮ್ಮಪ್ಪ, ಪಪಂ ಕೌನ್ಸಿಲರ್ ದತ್ತಣ್ಣ, ಹೊಸನಗರ ತಾಲೂಕು ಅಧ್ಯಕ್ಷ ಸುರೇಶ್, ತೀರ್ಥಹಳ್ಳಿಯ ಕೆ.ವಿ. ಪುಟ್ಟಪ್ಪ, ಪತ್ರಕರ್ತ ಡಾನ್ ರಾಮಣ್ಣ, ತುಳುನಾಡ ಸಿರಿ ಸೌ.ಸ. ಸಂಘದ ಅಧ್ಯಕ್ಷ ರಾಘವೇಂದ್ರ, ತಿಮ್ಮಪ್ಪ ಎಂ.ಎಸ್., ಗಂಗಾನಾಯ್ಕ ಮತ್ತಿತರರು ಹಾಜರಿದ್ದರು.ಸುಮಾ ಹೆಗಡೆ, ಸಂಗಡಿಗರು ಪ್ರಾರ್ಥಿಸಿ, ತಿಮ್ಮಪ್ಪ ಎಂ.ಎಸ್. ಸ್ವಾಗತಿಸಿ, ಮಹಾಬಲೇಶ್ವರ ಹೆಗಡೆ ಪ್ರಾಸ್ತಾವಿಸಿ, ರೇಣುಕಾ ಹೆಗಡೆ, ಶ್ರೀಕಾಂತ್, ಪವಿತ್ರ ನಿರೂಪಿಸಿ, ಪುಟ್ಟಪ್ಪ ಕೆ..ವಿ ವಂದಿಸಿದರು.