ದಾಬಸ್‍ಪೇಟೆ: ಜಗತ್ತಿನಲ್ಲಿ ಮಾನವನಿಗೆ ಅತ್ಯಂತ ಮುಖ್ಯವಾದದ್ದು ಜ್ಞಾನ. ರಾಷ್ಟ್ರದ ಅಭಿವೃದ್ಧಿಯಲ್ಲಿ ಶಿಕ್ಷಣ ಇಂದು ಮಹತ್ತರ ಪಾತ್ರ ವಹಿಸಿದ್ದು ವಿದ್ಯಾರ್ಥಿ ದೆಸೆಯಿಂದಲೇ ಸಂಸ್ಕಾರಯುತ ಶಿಕ್ಷಣ ಕಲ್ಪಿಸಬೇಕಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪಪೊಲೀಸ್ ವರಿಷ್ಠಾಧಿಕಾರಿ ನಾಗರಾಜು ತಿಳಿಸಿದರು.
ಸಮಾಜದಲ್ಲಿ ಬದಲಾವಣೆ ಅವಶ್ಯ, ಹಾಗಂತ ಮೌಲ್ಯಗಳನ್ನು ಗಾಳಿಗೆ ತೂರುವಂತಾಗಬಾರದು. ಇಂದಿನ ಶಿಕ್ಷಣದಲ್ಲಿ ನೈತಿಕ ಮೌಲ್ಯ ಅಳವಡಿಕೆ ಅಗತ್ಯವಾಗಿದೆ. ಸ್ಪರ್ಧಾತ್ಮಕ ಶಿಕ್ಷಣದ ಒತ್ತಡದಲ್ಲಿ ಮಹಾನ್ ವ್ಯಕ್ತಿಗಳ ತತ್ವಾದರ್ಶಗಳು, ಮೌಲ್ಯಾಧಾರಿತ ಶಿಕ್ಷಣ ಮರೆಯಾಗುತ್ತಿವೆ. ಶಿಕ್ಷಕರು ಮನಸ್ಸು ಮಾಡಿದರೆ ದೇಶವನ್ನೇ ತಿದ್ದುವ ಕೆಲಸ ಮಾಡಬಹುದು ಎಂದರು.
ಪೊಲೀಸ್ ಇನ್‍ಸ್ಪೆಕ್ಟರ್ ರಾಜು ಮಾತನಾಡಿ, ಪೋಷಕರು ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತಲೂ ಜ್ಞಾನ ಹಾಗೂ ಗುಣಮಟ್ಟದ ಶಿಕ್ಷಣ ನೀಡಿದರೆ ಭವಿಷ್ಯದಲ್ಲಿ ಅದೇ ಆಸ್ತಿಯಾಗಿ ಪರಿಣಮಿಸುತ್ತದೆ ಎಂದರು.ಶಾಲಾ ಸಂಸ್ಥಾಪಕ ಅಧ್ಯಕ್ಷ ಜಯರಾಮ್ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂಬ ದೃಷ್ಟಿಯಿಂದ ಬಹಳ ಕಷ್ಟಕಾಲದಲ್ಲೇ ಈ ಶಿಕ್ಷಣ ಸಂಸ್ಥೆಯನ್ನು ನಿರ್ಮಿಸಿದ್ದು ಇಂದು ಒಂದು ಹಂತಕ್ಕೆ ಬೆಳೆದು ನಿಂತಿದೆ. ಬಡವರಿಗೆ, ಅನಾಥ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ನಮ್ಮ ಸಂಸ್ಥೆ ಬದ್ಧವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಿಇಒ ರಮೇಶ್, ಇಸಿಒ ಗಿರೀಶ್, ಸಂಸ್ಥೆಯ ಅಧ್ಯಕ್ಷ ಜಗನ್ನಾಥ್, ಶಾಲಾ ಆಡಳಿತಾಧಿಕಾರಿ ರಿಶ್ವಂತ್ ರಾಮು, ಹೇಮಾ, ಮುಖ್ಯಶಿಕ್ಷಕಿ ಮೀನಾಕುಮಾರಿ, ವಿರುಪಾಕ್ಷಯ್ಯ, ಅಭಿಷೇಕ್ ಸೇರಿ ಶಾಲಾ ಪೋಷಕರು, ವಿದ್ಯಾರ್ಥಿಗಳು, ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.