ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಮಂಗಳವಾರ ಇಕೋ ಕ್ಲಬ್, ಎನ್.ಎಸ್.ಎಸ್. ಸಹಯೋಗದೊಂದಿಗೆ ಆಯೋಜಿಸಲಾದ ‘ನಮ್ಮ ನಡೆ ಹಸಿರೆಡೆಗೆ: ಗೋ ಗ್ರೀನ್ ಅಭಿಯಾನ: 2024’ ರಡಿ ‘ಸ್ವಚ್ಛ ದೀಪಾವಳಿ, ಸ್ವಸ್ಥ ದೀಪಾವಳಿ-2024 ರತ್ತ ನಮ್ಮ ಹೆಜ್ಜೆ’ ಪರಿಸರ ಜಾಗೃತಿ ಅಭಿಯಾನ ನಡೆಯಿತು. ಈ ಸಂದರ್ಭ ಹಸಿರು ದೀಪಾವಳಿ ಆಚರಣೆ ಕುರಿತ ಮಾಹಿತಿ ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕೊಡಗಿನ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಪ್ರಾರ್ಥನಾ ಸಭೆಯ ವೇಳೆ ಮಾಲಿನ್ಯಕಾರಕ ಪಟಾಕಿ ಸಿಡಿಸುವುದರಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಶಾಲೆಗಳಲ್ಲಿ ಇಕೋಕ್ಲಬ್, ಎನ್.ಎಸ್.ಎಸ್., ಎನ್.ಸಿ.ಸಿ. ಘಟಕಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಮಾಲಿನ್ಯಕಾರಿ ಪಟಾಕಿ ಸಿಡಿಸುವುದನ್ನು ಬಿಟ್ಟು ಹಸಿರು ಪಟಾಕಿ ಮಾತ್ರ ಬಳಸಲು ತಿಳಿಸಲಾಗಿದೆ ಎಂದರು.ಹಣತೆ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ ಮಾತನಾಡಿ, ದೀಪಾವಳಿ ಹಬ್ಬದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸರ್ಕಾರ ಹಸಿರು ಪಟಾಕಿಗಳನ್ನು ಮಾತ್ರ ಬಳಸಲು ಸರ್ಕಾರ ಆದೇಶಿಸಿದೆ. ಪರಿಸರ ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ತಗ್ಗಿಸಿ ಪಟಾಕಿ ಸಿಡಿತದಿಂದ ಸಂಭವಿಸುವ ಅವಘಡಗಳನ್ನು ತಡೆಗಟ್ಟುವ ದಿಸೆಯಲ್ಲಿ ನಾವೆಲ್ಲರೂ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆಗೆ ವಿಶೇಷ ಒತ್ತು ನೀಡಬೇಕು ಎಂದು ಮನವಿ ಮಾಡಿದರು.
ಕೊಡಗಿನಲ್ಲಿ ಕಳೆದ 14 ವರ್ಷಗಳಿಂದ ಪರಿಸರ ಸ್ನೇಹಿ ದೀಪಾವಳಿ ಆಚರಣೆಯ ಮಹತ್ವದ ಕುರಿತು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಪ್ರೌಢಶಾಲಾ ವಿದ್ಯಾರ್ಥಿನಿ ಎಂ.ಎನ್.ರಕ್ಷಿತಾ ಅನಿಸಿಕೆ ವ್ಯಕ್ತಪಡಿಸಿದಳು.ದೀಪಾವಳಿ ಸಂದರ್ಭ ಮಾಲಿನ್ಯಕಾರಿ ಪಟಾಕಿ ಸಿಡಿಸುವುದನ್ನು ಬಿಟ್ಟು ಪರಿಸರ ಸಂರಕ್ಷಣೆ ದೃಷ್ಟಿಯಿಂದ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಿಸುವುದಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರತಿಜ್ಞೆ ಸ್ವೀಕರಿಸಿದರು.
ಕೆ.ಯು.ರಂಜಿತ್ ಕಾರ್ಯಕ್ರಮ ನಿರ್ವಹಿಸಿದರು. ಪ್ರೌಢಶಾಲಾ ವಿದ್ಯಾರ್ಥಿಗಳು ಗೀತೆ ಹಾಡಿದರು.
ವಿದ್ಯಾರ್ಥಿಗಳು ಹಸಿರು ದೀಪಾವಳಿ ಆಚರಣೆ ಕುರಿತಂತೆ ವಿವಿಧ ಪರಿಸರ ಘೋಷಣೆಗಳನ್ನು ಕೂಗಿದರು.