ಹುಬ್ಬಳ್ಳಿಯಲ್ಲಿ ಶಿಕ್ಷಕ ಸಮುದಾಯಕ್ಕೆ ₹ 200 ಕೋಟಿ ದೋಖಾ!

KannadaprabhaNewsNetwork |  
Published : May 21, 2026, 02:45 AM IST
ಹಣ | Kannada Prabha

ಸಾರಾಂಶ

ಬೆಳಗಾವಿಯ ಶಿವಂ ಅಸೋಸಿಯೇಟ್ಸ್‌ ಮಾಲೀಕ ಶಿವಾನಂದ ನೀಲಣ್ಣವರ 35 ಸಾವಿರ ಜನರಿಂದ ₹ 4500 ಕೋಟಿ ವಂಚಿಸಿದ ಪ್ರಕರಣದ ಬೆನ್ನಲ್ಲೇ ಅಂಥದ್ದೇ ಪ್ರಕರಣವೊಂದು ಧಾರವಾಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಬೆಳಗಾವಿಯ ಶಿವಂ ಅಸೋಸಿಯೇಟ್ಸ್‌ ಮಾಲೀಕ ಶಿವಾನಂದ ನೀಲಣ್ಣವರ 35 ಸಾವಿರ ಜನರಿಂದ ₹ 4500 ಕೋಟಿ ವಂಚಿಸಿದ ಪ್ರಕರಣದ ಬೆನ್ನಲ್ಲೇ ಅಂಥದ್ದೇ ಪ್ರಕರಣವೊಂದು ಧಾರವಾಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಶಾಲಾ ಶಿಕ್ಷಕರೇ ಇಲ್ಲಿ ಟಾರ್ಗೇಟ್‌ ಆಗಿದ್ದು, ಶಿಕ್ಷಕ ವೃಂದಕ್ಕೆ ₹ 200 ಕೋಟಿಗೂ ಅಧಿಕ ಹಣ ವಂಚನೆಯಾಗಿದೆ. ಶಿಕ್ಷಕ ಸಮುದಾಯವೇ ಹೆಚ್ಚಾಗಿರುವುದರಿಂದ ನೌಕರಿಗೆ ಎಲ್ಲಿ ಕುತ್ತು ಬರುತ್ತದೆ ಎಂದುಕೊಂಡು ಯಾರೂ ದೂರು ಕೊಡಲು ಮುಂದೆ ಬಂದಿಲ್ಲ. ಇಲ್ಲಿ ಶಿಕ್ಷಕರಿಗೆ ಶಿಕ್ಷಕರೇ ಏಜೆಂಟ್‌ರಂತೆ ಕೆಲಸ ಮಾಡಿ ವಂಚಿಸಿದ್ದಾರೆ. ಏಳೆಂಟು ವರ್ಷದ ಹಿಂದಿನಿಂದಲೂ ನಡೆದುಕೊಂಡು ಬಂದ ಪ್ರಕರಣ ಇದ್ದಾಗಿದ್ದು ನೀಲಣ್ಣವರ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇ ಪ್ರಕರಣದ ಕುರಿತು ಇದೀಗ ಚರ್ಚೆ ಶುರುವಾಗಿದೆ.

ಹುಬ್ಬಳ್ಳಿಯೇ ಕೇಂದ್ರ ಸ್ಥಾನ:

ಹುಬ್ಬಳ್ಳಿಯನ್ನೇ ಕೇಂದ್ರವನ್ನಾಗಿಟ್ಟುಕೊಂಡು ನಡೆದ ಈ ಹಗರಣ ಉತ್ತರ ಕರ್ನಾಟಕದ ವಿವಿಧ ಜಿಲ್ಲೆ ಹಾಗೂ ಕೋಲಾರ, ತುಮಕೂರು, ಚಿಕ್ಕಬಳ್ಳಾಪುರಕ್ಕೂ ವ್ಯಾಪಿಸಿದೆ. ಹುಬ್ಬಳ್ಳಿಯ ಮೂವರು ಶಿಕ್ಷಕರು ಬರೋಬ್ಬರಿ ನಾಲ್ಕೈದು ವರ್ಷ ನೆಪ ಮಾತ್ರಕ್ಕೆ ಶಾಲೆಗೆ ಹೋಗಿ ಅನ್ಯ ಜಿಲ್ಲೆ, ಶಾಲೆಗಳ ಶಿಕ್ಷಕರನ್ನು ನಂಬಿಸಿ ಹಣ ಹೂಡಿಕೆ ಮಾಡಿಸಿದ್ದಾರೆ. ಇವರ ಈ ಕೆಲಸಕ್ಕೆ ಅಂದಿನ ಬಿಇಒ ಒಬ್ಬರು ಸಾಥ್ ನೀಡಿದ್ದರು ಎನ್ನುವ ಮಾತುಗಳು ದಟ್ಟವಾಗಿವೆ.

ವಂಚನೆ ನಡೆದಿರುವುದು ಹೀಗೆ:

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿದರೆ ದೊಡ್ಡ ಮಟ್ಟದ ಬಡ್ಡಿ ಬರುತ್ತದೆ. ಮೂರೇ ವರ್ಷದಲ್ಲಿ ನಿಮ್ಮ ಹಣ ದುಪ್ಪಟ್ಟು ಆಗುತ್ತದೆ ಎಂದು ನಂಬಿಸಿ ಹಣ ಪಡೆಯಲಾಗಿದೆ ಎಂದು ಮೂಲಗಳು ತಿಳಿಸುತ್ತವೆ. ಹೂಡಿಕೆ ಮಾಡಿದ ಶಿಕ್ಷಕರಿಗೆ ಯಾವುದೇ ಷೇರುಗಳ ಖರೀದಿ, ಕಂಪನಿಯ ಹೆಸರು, ಹೂಡಿಕೆಯ ಮೊತ್ತ ಇತ್ಯಾದಿ ದಾಖಲೆ ಯಾರಿಗೂ ನೀಡಿಲ್ಲ.

ಯಾರಿಗೆ ಹೇಗೆ ಕೊಟ್ಟಿದ್ದು?

ಮುಂಬೈ ಸಂಪರ್ಕ ಇರುವ ಬೆಳಗಾವಿ ಜಿಲ್ಲೆ ಚಿಕ್ಕೋಡಿ ಮತ್ತು ಕೊಲ್ಲಾಪುರದ ವ್ಯಕ್ತಿಗಳಿಗೆ (ಇವರ ಅಕೌಂಟಿಗೆ ನೂರಾರು ಆರ್‌ಟಿಜಿಎಸ್‌, ಚೆಕ್, ಫೋನ್ ಪೇ ಮೂಲಕ ಜಮಾ ಮಾಡಿದ ದಾಖಲೆಗಳಿವೆ) ಇಬ್ಬರು ಏಜೆಂಟರ ಖಾತೆಗೆ ಶಿಕ್ಷಕರಿಂದ ಹಣ ವರ್ಗಾಯಿಸಿದ್ದಾರೆ. ಇನ್ನು ಹಣ ಹಾಕಿಸಿರುವ ಹುಬ್ಬಳ್ಳಿಯ ಮೂವರು ಶಿಕ್ಷಕರು. ತಾವು ಮಾತ್ರ ಎಲ್ಲೂ ನೇರವಾಗಿ ಹಣ ಪಡೆದಿಲ್ಲ. ಏಜಂಟ್‌ರಿಗೆ ಹಣ ವರ್ಗಾವಣೆ ಮಾಡಿದವರು ಅದರ ರಶೀದಿಯನ್ನು ತಮ್ಮ ವಾಟ್ಸ್‌ಆ್ಯಪ್‌ಗೆ ತರಿಸಿಕೊಂಡಿದ್ದಾರೆ.

ಆರಂಭದಲ್ಲಿ ಕೆಲವು ಪ್ರಮುಖ ಶಿಕ್ಷಕರಿಗೆ ಬಡ್ಡಿ ಸಂದಾಯವಾಗಿದೆ. ಇದನ್ನು ನಂಬಿದ ಎಷ್ಟೋ ಶಿಕ್ಷಕರು ತಮ್ಮ ಪೂರ್ಣ ಪ್ರಮಾಣದ ಸಂಬಳವನ್ನೇ ಹೂಡಿಕೆ ಮಾಡಿದ್ದಾರೆ. ಕೆಲವರು ತಮ್ಮ ಸೈಟ್ ಮಾರಿ ಹಣ ಕಟ್ಟಿದ್ದರೆ, ಕೆಲವರು ಮಕ್ಕಳ ಮದುವೆಗೆಂದು ಕಾಯ್ದಿರಿಸಿದ್ದ ಹಣ, ಪಿಂಚಣಿ ಮೊತ್ತ ಕಟ್ಟಿರುವುದುಂಟು. ಸೊಸೈಟಿಯಲ್ಲಿ ಸಾಲ ಮಾಡಿ ಹಣ ಕಟ್ಟಿದ್ದಾರೆ. ಬರೀ ಶಿಕ್ಷಕರಷ್ಟೇ ಅಲ್ಲ, ಮೂವರು ಬಿಇಒ, ವಿವಿಧ ಜಿಲ್ಲೆಯ ಶಿಕ್ಷಣ ಇಲಾಖೆ ನೌಕರರೂ ಇದರಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಹೀಗೆ ಹೂಡಿಕೆ ಮಾಡಿಸಿರುವ ಹುಬ್ಬಳ್ಳಿ ಶಿಕ್ಷಕರು ದೊಡ್ಡ ಮಟ್ಟದ ಕಮೀಷನ್ ಪಡೆದಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಪೊಲೀಸ್ ಬಾಗಿ?

ದುಡ್ಡು ಹಾಕಿಸಿಕೊಂಡಿರುವ ಏಜೆಂಟರು ನಾಪತ್ತೆಯಾಗಿದ್ದು, ಮೊಬೈಲ್‌ ಕೂಡ ಸ್ವಿಚ್‌ ಆಫ್‌ ಆಗಿವೆ. ಇಲ್ಲಿ ಮಧ್ಯವರ್ತಿಗಳಂತೆ ಕೆಲಸ ಮಾಡಿದ್ದ ಶಿಕ್ಷಕರನ್ನು ಕರೆದುಕೊಂಡು ಚಿಕ್ಕೋಡಿ ವ್ಯಕ್ತಿಯ ಮನೆಗೆ ಇಲ್ಲಿನ ಕೆಲ ಶಿಕ್ಷಕರು ತೆರಳಿದ್ದರು. ಅವರ ಹತ್ತಿರದ ಸಂಬಂಧಿಯೂ ಆಗಿದ್ದ ಆಗಿನ ಪಿಎಸ್‌ಐ ಅವರು ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿ ನಷ್ಟ ಅನುಭವಿಸಿದ್ದಾರೆ. ನಿಮ್ಮ ದುಡ್ಡು ವಾಪಸ್‌ ಕೊಡ್ತಾರೆ ಎಂದು ರಾಜಿ ಮಾಡಿಸಿ ಕಳುಹಿಸಿದ್ದಾರೆ. ಈ ಘಟನೆ ನಡೆದು ಒಂದೂವರೆ ವರ್ಷವೇ ಕಳೆದಿದೆ. ಆದರೆ ಈ ವರೆಗೂ ದುಡ್ಡು ಬಂದಿಲ್ಲ. ಏಜಂಟರು ಸಿಗುತ್ತಿಲ್ಲ.

ದೊಡ್ಡಮಟ್ಟದ ಹಣದ ವಹಿವಾಟು ಸರ್ಕಾರಿ ನೌಕರಿಗೆ ಕುತ್ತು ತಂದೀತು ಎನ್ನುವ ಅಳುಕಿನಿಂದ ಯಾವುದೇ ಶಿಕ್ಷಕರು ಬಾಯಿ ಬಿಡುತ್ತಿಲ್ಲ. ಏನೆಲ್ಲಾ ದಾಖಲೆಗಳು ಇದ್ದರೂ ಪೊಲೀಸರಿಗೆ ದೂರು ನೀಡುತ್ತಿಲ್ಲ. ಆದರೆ, ಹೂಡಿಕೆ ಮಾಡಿಸಿದವರನ್ನು ನಿತ್ಯವೂ ಪೀಡಿಸುತ್ತಿದ್ದಾರೆ.

ಇದೀಗ ನೀಲಣ್ಣವರ ಪ್ರಕರಣದಿಂದ ದುಡ್ಡು ಕಳೆದುಕೊಂಡಿರುವ ಶಿಕ್ಷಕರಿಗೆ ಧೈರ್ಯ ಬಂದಿದ್ದು, ತಾವು ದೂರು ಕೊಟ್ಟರೆ ತಮ್ಮ ದುಡ್ಡು ವಾಪಸ್‌ ಬರಬಹುದೇನೋ ಎಂಬ ಯೋಚನೆಯಲ್ಲಿದ್ದಾರೆ. ಅಲ್ಲದೇ, ಪೊಲೀಸ್‌ ಠಾಣೆ ಮೆಟ್ಟಿಲೇರುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ.

ಶಿಕ್ಷಕರನ್ನು ನಂಬಿ ನಾನು ಆಸ್ತಿ, ಚಿನ್ನ ಮಾರಿ, ಸಾಲ ಮಾಡಿ ಬರೋಬ್ಬರಿ ₹36 ಲಕ್ಷ ಹೂಡಿಕೆ ಮಾಡಿರುವೆ. ಏಜಂಟನ ಅಕೌಂಟಿಗೆ ಹಣ ವರ್ಗಾವಣೆ ಮಾಡಿರುವೆ. ಬಿಇಒಗಳು ಸೇರಿದಂತೆ ಆರೇಳು ಜನ ಶಿಕ್ಷಕರು ಭಾಗಿಯಾಗಿ ಶಿಕ್ಷಕ ಸಮುದಾಯಕ್ಕೆ ವಂಚಿಸಿದ್ದಾರೆ. ಈ ಹಗರಣದ ಬಗ್ಗೆಯೂ ಸೂಕ್ತ ತನಿಖೆಯಾಗಲಿ.

ಹೆಸರು ಹೇಳಲಿಚ್ಚಿಸದ ಶಿಕ್ಷಕಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಕಲಿ ಜಾತಿ ಪ್ರಮಾಣಪತ್ರ ಪ್ರಕರಣ: ಪ್ರತಿಭಟನೆ
ಆಟ್ ಪಾಟ್ ಶಿಬಿರ ಕೊಡವ ಸಂಸ್ಕೃತಿ ಪ್ರತೀಕ: ಮಹೇಶ್ ನಾಚಯ್ಯ