ಗುರುವಂದನಾ ಸಮಾರಂಭ । ಕೆಪಿಎಸ್ 1999-2000ನೇ ಸಾಲಿನ ಪಿಯುಸಿ ವಿದ್ಯಾರ್ಥಿಗಳಿಂದ । ಸ್ನೇಹ ಸಮ್ಮಿಲನ । ಗುರುಗಳಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ ಆನವಟ್ಟಿ
ಶಿಕ್ಷಕರು ಅರ್ಪಣಾ ಮನೋಭಾವದಿಂದ ಸರಿಯಾದ ಸಮಯಕ್ಕೆ ಶಾಲೆಗೆ ತೆರಳಿ, ಒಳ್ಳೇಯ ಪಾಠ ಮಾಡಿ ಮಕ್ಕಳ ಉಜ್ವಲ ಭವಿಷ್ಯ ರೂಪಿಸಲು ಮುಂದಾಬೇಕು ಎಂದು ನಿವೃತ್ತ ಪ್ರಾಂಶುಪಾಲ ಎಚ್.ಜಯಪ್ಪ ಹೇಳಿದರು.ಕೆಪಿಎಸ್ ಕಾಲೇಜು ವಿಭಾಗದ 1999-2000ನೇ ಸಾಲಿನಲ್ಲಿ ಓದಿರುವ ಪದವಿ ಪೂರ್ವ ಹಳೇ ವಿದ್ಯಾರ್ಥಿಗಳು ಅವರ ರಜತ ಸಂಭ್ರಮ-2025ರ ಸವಿನೆನಪಿಗಾಗಿ ಇಲ್ಲಿ ಭಾನುವಾರ ಹಮ್ಮಿಕೊಂಡ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಗುರುವಂದನಾ ಸಮಿತಿ ಅಧ್ಯಕ್ಷ ಜಿ. ಪುಂಡಲೀಕ ಮಾತನಾಡಿ, ನಿವೃತ್ತ ಪ್ರಾಂಶುಪಾಲ ಎಚ್,ಜಯಪ್ಪ ಅವರ ನೇತೃತ್ವದಲ್ಲಿ ದಾನಿಗಳು, ಹಳೇ ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು ಕೈಜೋಡಿಸಿ, 2500 ವಿದ್ಯಾರ್ಥಿಗಳು ಕೂರುವ ರಂಗಮಂದಿರ ನಿರ್ಮಾಣ ಮಾಡಿದ್ದೆವು. ನಾಲ್ಕು ವರ್ಷದ ಹಿಂದೆ ಅಡಿಟೋರಿಯಂ ಕಟ್ಟುವುದಾಗಿ ಭರವಸೆ ನೀಡಿ ಅದನ್ನು ಒಡೆದು ಹಾಕಿ ಇದುವರೆಗೂ ನಿರ್ಮಾಣ ಮಾಡಿಲ್ಲ. ಪ್ರತಿ ನಿತ್ಯ 3500 ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ಬಿಸಿಲು, ಮಳೆಯಲ್ಲೇ ಮಾಡಬೇಕು. ಮಳೆ ಬಂದರೆ ಅರ್ಧಕ್ಕೆ ನಿಲ್ಲಿಸಬೇಕು, ಬಿಸಿ ಊಟ ಮಾಡಲು ಸ್ಥಳವಿಲ್ಲ, ಶಾಲೆಯ ಕಾರ್ಯಕ್ರಮ ಮಾಡಲು ರಂಗಮಂದಿರವಿಲ್ಲ. ಅದಷ್ಟು ಬೇಗ ಸಚಿವರು ಅಡಿಟೋರಿಯಂ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಬೇರೆ ಜಿಲ್ಲೆಗಳಲ್ಲಿ ನೆಲೆಸಿರುವ ಉಪನ್ಯಾಸಕರ ವಿಳಾಸ ಸಂಗ್ರಹಿಸಿ ತಮ್ಮಗೆ ವಿದ್ಯಾಭ್ಯಾಸ ಕಲಿಸಿರುವ ಎಲ್ಲಾ ಉಪನ್ಯಾಸಕರನ್ನು ಒಂದೆಡೆ ಸೇರಿಸಿ ಗುರುವಂದನೆ ಸಲ್ಲಿಸುತ್ತಿರುವುದು ಅತ್ಯಂತ ಅರ್ಥಪೂರ್ಣ ಸಮಾರಂಭ. ಶಿಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ, ಆತ ಯಾವಾಗಲೂ ನಮಗೆ ಶಿಷ್ಯನೇ ನಾವು ಅವರಿಗೆ ಗುರುಗಳೇ ಎಂದ ಅವರು, ಇಂತಹ ಗೌರವಕ್ಕೆ ಕಾರಣರಾದ ತಮಗೆ ಕಲಿಸಿರುವ ಗುರುಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.