ಶಿಕ್ಷಕರು ತಂಬಾಕುಮುಕ್ತ ಯುವಪೀಳಿಗೆ ರೂಪಿಸಬೇಕು

KannadaprabhaNewsNetwork | Published : Jan 11, 2025 12:47 AM

ಸಾರಾಂಶ

ಶಿಕ್ಷಕರು ಮಕ್ಕಳ ಭವಿಷ್ಯಕ್ಕೆ ಭದ್ರ ಬೂನಾದಿ ಹಾಕುವುದು ಹಾಗೂ ಉತ್ತಮ ಸಮಾಜ ನಿರ್ಮಾಣ ಮಾಡುವುದು ಎಲ್ಲವೂ ಶಾಲಾ ಹಂತದಲ್ಲಿಯೇ ಆಗಬೇಕಾದ ಶಿಕ್ಷಣವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಎಂ. ಕರೆಣ್ಣವರ್ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಸಿಆರ್‌ಪಿಗಳಿಗೆ ತರಬೇತಿ ಕಾರ್ಯಾಗಾರದಲ್ಲಿ ನ್ಯಾ. ಮಹಾವೀರ ಕರೆಣ್ಣವರ್ ಸಲಹೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಶಿಕ್ಷಕರು ಮಕ್ಕಳ ಭವಿಷ್ಯಕ್ಕೆ ಭದ್ರ ಬೂನಾದಿ ಹಾಕುವುದು ಹಾಗೂ ಉತ್ತಮ ಸಮಾಜ ನಿರ್ಮಾಣ ಮಾಡುವುದು ಎಲ್ಲವೂ ಶಾಲಾ ಹಂತದಲ್ಲಿಯೇ ಆಗಬೇಕಾದ ಶಿಕ್ಷಣವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಎಂ. ಕರೆಣ್ಣವರ್ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ದಾವಣಗೆರೆ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ, ಉತ್ತರ, ದಕ್ಷಿಣ ಹಾಗೂ ಚನ್ನಗಿರಿ ವಲಯದ ಸಿಆರ್‌ಪಿಗಳಿಗೆ ತಂಬಾಕುಮುಕ್ತ ಶೈಕ್ಷಣಿಕ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕ ಮನಸ್ಸು ಮಾಡಿದರೆ ವಿದ್ಯಾರ್ಥಿಗಳನ್ನು ಜಿಲ್ಲಾಧಿಕಾರಿ, ನ್ಯಾಯಾಧೀಶ, ವೈದ್ಯ, ವಿಜ್ಞಾನಿ, ಸಂಶೋಧಕ, ಅಭಿಯಂತರ ಹಾಗೂ ಇನ್ನಿತರ ಅಧಿಕಾರಿಗಳನ್ನಾಗಿ ರೂಪಿಸಬಹುದು. ಮಣ್ಣನ್ನು ಮೂರ್ತಿಯನ್ನಾಗಿ ಮಾಡಬಹುದು, ಶಿಲೆಗೆ ಕಲೆಯ ರೂಪ ಕೊಡಬಹುದು, ಶಾಲಾ ಹಂತದಲ್ಲಿ ತಂಬಾಕು ನಿಯಂತ್ರಣ ಸಮಿತಿಯನ್ನು ರಚಿಸಿ ಶಾಲಾ ವ್ಯಾಪ್ತಿಯಲ್ಲಿ ತಂಬಾಕು ಬಳಕೆ ಆಗದಂತೆ ಕ್ರಮವಹಿಸುವುದು ಮತ್ತು ಪ್ರೌಢಾವಸ್ಥೆಯಲ್ಲಿ ಮಕ್ಕಳು ದಾರಿ ತಪ್ಪುವುದನ್ನು ನಿಲ್ಲಿಸುವುದು ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಶಿಕ್ಷಕರು ತರಬೇತಿಯ ಸದುಪಯೋಗ ಪಡೆದು, ತಂಬಾಕುಮುಕ್ತ ಯುವಪೀಳಿಗೆಯನ್ನಾಗಿ ರೂಪಿಸಬೇಕೆಂದು ತಿಳಿಸಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್ ಮಾತನಾಡಿ, ಪ್ರತಿನಿತ್ಯ 293 ಜನ ಮಕ್ಕಳು 13-15ರ ವಯೋಮಾನದವರು ತಂಬಾಕು ಸೇವನೆ ಆರಂಭಿಸುತ್ತಿರುವುದು ಆತಂಕಕಾರಿ ವಿಷಯ. ಹಾಗಾಗಿ, ತಂಬಾಕು ಬಳಕೆಗೆ ಮಕ್ಕಳು ಬಲಿ ಆಗದಂತೆ ಕ್ರಮ ವಹಿಸುವುದು ತಮ್ಮೆಲ್ಲರ ಜವಾಬ್ದಾರಿಯಾಗಿದೆ. ಜಿಲ್ಲೆಯ ಎಲ್ಲ ಶಾಲೆಗಳನ್ನ ತಂಬಾಕುಮುಕ್ತ ಶೈಕ್ಷಣಿಕ ಸಂಸ್ಥೆಗಳೆಂದು ಘೋಷಿಸುವುದು ತರಬೇತಿ ಪ್ರಮುಖ ಉದ್ದೇಶವಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎ.ಎಲ್. ಕೃಷ್ಣನಾಯ್ಕ, ಶಾಲಾ ಶಿಕ್ಷಣ ಇಲಾಖೆ ಉಪಯೋಜನಾ ಸಮನ್ವಯ ಅಧಿಕಾರಿ ರವಿ, ದಂತ ವಿಭಾಗದ ಮುಖ್ಯಸ್ಥ ಡಾ. ಪಿ.ಎಂ. ತಿಪ್ಪೇಸ್ವಾಮಿ. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎನ್.ಪಿ.ಮಂಜುಳ, ಜಿಲ್ಲಾ ಸಲಹೆಗಾರ ಸತೀಶ್ ಕಲಹಾಳ್, ಸಮಾಜ ಕಾರ್ಯಕರ್ತರಾದ ಶೈಲಾ ಶಾಮನೂರು ಮತ್ತು ಎಲ್ಲ ತಾಲೂಕು ದೈಹಿಕ ಶಿಕ್ಷಣಾಧಿಕಾರಿಗಳು, ಉತ್ತರ, ದಕ್ಷಿಣ ಹಾಗೂ ಚನ್ನಗಿರಿ ವಲಯದ ಸಿಆರ್‌ಪಿಗಳು ಭಾಗವಹಿಸಿದ್ದರು.

- - -

-9ಕೆಡಿವಿಜಿ39.ಜೆಪಿಜಿ:

ದಾವಣಗೆರೆಯಲ್ಲಿ ನಡೆದ ತರಬೇತಿ ಕಾರ್ಯಾಗಾರವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಎಂ. ಕರೆಣ್ಣವರ್ ಉದ್ಘಾಟಿಸಿದರು.

Share this article