ಅರಹತೊಳಲು ಕೆ.ರಂಗನಾಥ್.
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರುಸರ್ಕಾರಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ತರಬೇಕು ಎಂಬ ಉದ್ದೇಶದಿಂದ ಶಿಕ್ಷಣ ಇಲಾಖೆ ಹಲವಾರು ಬದಲಾವಣೆಗಳನ್ನು ಕಾಲಕಾಲಕ್ಕೆ ತರುತ್ತಲೇ ಇರುತ್ತದೆ. ಆದರೆ ಶಾಲೆಯಲ್ಲಿ ಮುಖ್ಯವಾಗಿ ಇರಬೇಕಾದ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳದಿರುವುದು ವಿಪರ್ಯಾಸ.
ಅನೇಕ ಶಾಲೆಗಳಲ್ಲಿ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗಿರುವ ಶಿಕ್ಷಕರು ದೀರ್ಘ ರಜೆಯಲ್ಲಿ ಇದ್ದಾರೆ. ಅವರು ಬೋಧಿಸುತ್ತಿದ್ದ ಪಠ್ಯ ವಿಷಯ ಹಿಂದೆ ಉಳಿದಿದ್ದು, ಅರ್ದವಾರ್ಷಿಕ ಪರೀಕ್ಷೆಯೂ ಮುಗಿದಿದೆ. ಹೀಗಿರುವಾಗ ಜುಲೈನಲ್ಲೇ ವರ್ಗಾವಣೆ ಪ್ರಕ್ರಿಯೆಗಳು ಮುಗಿದಿದ್ದೂ, ವರ್ಗಾವಣೆಯಲ್ಲಿ ಆಯ್ಕೆ ಮಾಡಿಕೊಂಡಿರುವ ಶಾಲೆಗಳಿಗೆ ಇದುವರೆಗೂ ಶಿಕ್ಷಕರು ಬಂದು ವರದಿಮಾಡಿಕೊಡಿಲ್ಲ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ, ಡಿಡಿಪಿಐ ಸೇರಿದಂತೆ ಸಂಬಂದಪಟ್ಟ ಅಧಿಕಾರಿಗಳನ್ನು ಕೇಳಿದರೆ ಸಮರ್ಪಕ ಉತ್ತರ ದೊರೆಯುತ್ತಿಲ್ಲ.ಹೀಗೆ ಭದ್ರಾವತಿ ತಾಲೂಕಿನ 5 ಶಾಲೆಗಳಿಗೆ ತೀರ್ಥಹಳ್ಳಿ ತಾಲೂಕಿನಿಂದ ಐವರು ಶಿಕ್ಷಕರು ವರ್ಗಾವಣೆಗೊಂಡಿದ್ದು, ಇದುವರೆಗೂ ಶಾಲೆಗಳಿಗೆ ಬರದೆ ಮೂಲ ಶಾಲೆಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೇರೆ ತಾಲೂಕಿನಿಂದ ವರ್ಗಾವಣೆಯಾದ ಶಿಕ್ಷಕರು ಎಲ್ಲರೂ ಬಂದು ಕರ್ತವ್ಯಕ್ಕೆ ಹಾಜರಾದರೆ ತೀರ್ಥಹಳ್ಳಿ ತಾಲೂಕಿನಿಂದ ವರ್ಗಾವಣೆಯಾದ ಶಿಕ್ಷಕರು ಮಾತ್ರ ಬರದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಸರ್ಕಾರಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಹಾಲು, ಮೊಟ್ಟೆ, ಶೂ, ಪುಸ್ತಕ ಸೇರಿದಂತೆ ಹಲವಾರು ಮೂಲ ಸೌಕರ್ಯಗಳನ್ನು ಒದಗಿಸುವ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಮೊದಲ ಆಧ್ಯತೆಯಾಗಿ ನೀಡಬೇಕಾದ ಶಿಕ್ಷಣದ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದು ಇಂದಿನಿಂದಲೂ ನಡೆದುಕೊಂಡು ಬರುತ್ತಿರುವ ಸಂಪ್ರದಾಯವಾಗಿಬಿಟ್ಟಿದೆ.ಸರ್ಕಾರಿ ಶಾಲೆಗಳ ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಇಲಾಖೆ ಅಧಿಕಾರಿಗಳು ಶಾಸಕರು, ಸಚಿವರು ಮತ್ತು ಪ್ರಭಾವಿಗಳ ಕೈಗೊಂಬೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದಲೇ ಸರ್ಕಾರಿ ಶಾಲೆಗಳ ಮಕ್ಕಳ ಶಿಕ್ಷಣದಲ್ಲಿ ನಿರೀಕ್ಷಿತ ಪ್ರಗತಿ ಮರೀಚಿಕೆಯಾಗಿದೆ. ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ವರ್ಗಾವಣೆಯಾದ ಶಿಕ್ಷಕರ ಮೇಲೆ ಕ್ರಮ ತೆಗೆದುಕೊಳ್ಳಲಾರದ ಅಸಹಾಯಕ ಸ್ಥಿತಿಯಲ್ಲಿ ಇಲಾಖೆಯ ಅಧಿಕಾರಿಗಳು ಇದ್ದಾರೆ.
ವಿಪರ್ಯಾಸ ಎಂದರೆ ಈ ಶಿಕ್ಷಕರಿಗೆ ವರ್ಗಾವಣೆ ಕೌನ್ಸೆಲಿಂಗ್ ನಲ್ಲಿ ಬೇರೆ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳುವ ಮೊದಲು ಯೋಚಿಸಬೇಕಿತ್ತು. ಬದಲಾಗಿ ಈ ಶಿಕ್ಷಕರೂ ಕಂಡವರ ಮಕ್ಕಳ ಬಾಳಲ್ಲಿ ಆಟವಾಡುತ್ತಿರುವುದು ಖಂಡನೀಯ. ಹಲವು ತಪ್ಪುಗಳನ್ನು ಇಲಾಖೆ ಮತ್ತು ರಾಜಕಾರಣಿಗಳು ಮಾಡಿದರೂ ಕೂಡ ಮಕ್ಕಳ ಫತಿತಾಂಶ ನಿರೀಕ್ಷೆಗೆ ತಲುಪದೇ ಇದ್ದರೆ ಅಮಾಯಕ ಶಿಕ್ಷಕರನ್ನು ಇಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುವ ಅಧಿಕಾರಿಗಳಿಗೆ ಇವರ ಮೂಗಿನ ಅಡಿಯಲ್ಲಿ ನಡೆಯುವ ತಪ್ಪುಗಳನ್ನು ಪ್ರಶ್ನಿಸುವವರು ಯಾರೂ ಇಲ್ಲದಂತಾಗಿದೆ.