ಸರ್ಕಾರಿ ಗೌರವಗಳೊಂದಿಗೆ ಶ್ರೀಗಳಿಗೆ ಅಶ್ರುತರ್ಪಣ

KannadaprabhaNewsNetwork |  
Published : Jun 24, 2026, 01:30 AM IST
ಕೆ ಕೆ ಪಿ ಸುದ್ದಿ 01(1): ಲಿಂಗೈಕ್ಯರಾದ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಣಾ ಮಹಾಸ್ವಾಮಿಗಳ ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್. | Kannada Prabha

ಸಾರಾಂಶ

ಕನಕಪುರ: ಸೋಮವಾರ ಲಿಂಗೈಕ್ಯರಾದ ತಾಲೂಕಿನ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿಗಳ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶರೀರಕ್ಕೆ ಪುಷ್ಪ ನಮನ ಸಲ್ಲಿಸಿ, ಪಾದುಕೆಗಳಿಗೆ ನಮಸ್ಕರಿಸಿ ಅವರ ಆತ್ಮಕ್ಕೆ ಶಾಂತಿ ಕೋರಿದರು

ಕನಕಪುರ: ಸೋಮವಾರ ಲಿಂಗೈಕ್ಯರಾದ ತಾಲೂಕಿನ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿಗಳ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶರೀರಕ್ಕೆ ಪುಷ್ಪ ನಮನ ಸಲ್ಲಿಸಿ, ಪಾದುಕೆಗಳಿಗೆ ನಮಸ್ಕರಿಸಿ ಅವರ ಆತ್ಮಕ್ಕೆ ಶಾಂತಿ ಕೋರಿದರು.

ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದ ಬಳಿಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಷ್ಟ್ರಧ್ವಜವನ್ನು ದೇಗುಲ ಮಠದ ಕಿರಿಯ ಸ್ವಾಮೀಜಿಗಳಿಗೆ ಹಸ್ತಾಂತರ ಮಾಡಿ ಭಾವುಕರಾದರು. ನಂತರ ಲಿಂಗೈಕ್ಯ ಸ್ವಾಮೀಜಿಯ ಪಾದುಕೆಗಳಿಗೆ ನಮಸ್ಕರಿಸಿ ಕಿರಿಯ ಶ್ರೀಗಳಿಗೆ ನಮಿಸಿದರು. ಶ್ರೀಗಳ ಗದ್ದುಗೆ ಸ್ಥಳಕ್ಕೆ ತೆರಳಿ ವಿಭೂತಿ ಗಟ್ಟಿ ಗಳನ್ನು ಅರ್ಪಿಸಿ ಪೂಜೆ ಸಲ್ಲಿಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್ ಅವರು, ಶ್ರೀಗಳದ್ದು ಮಾತು ಕಡಿಮೆ ಮೌನವಾಗಿಯೇ ಅಚ್ಚುಕಟ್ಟಾಗಿ ಕೆಲಸಗಳನ್ನು ನೆರವೇರಿಸುತ್ತಿದ್ದರು. ಚುನಾವಣೆಗೂ ಮುಂಚೆ ಅವರ ಆಶೀರ್ವಾದ ಪಡೆಯಲು ಹೋದ ಸಂದರ್ಭದಲ್ಲಿ ಅನಾರೋಗ್ಯದಿಂದ ಹಾಸಿಗೆಯಲ್ಲಿ ಮಲಗಿದ್ದರೂ ತಮಗೆ ಹಣದ ಕಟ್ಟನ್ನು ನೀಡಿ ಇದು ಚುನಾವಣಾ ಖರ್ಚಿಗೆ ಸಣ್ಣ ಕೊಡುಗೆ ಎಂದು ಹೇಳಿ ಆಶೀರ್ವಸಿದ್ದರು. ಅವರಿಗೆ ಭವಿಷ್ಯದಲ್ಲಿ ಏನಾಗುತ್ತದೆ ಎಂದು ಮೊದಲೇ ತಿಳಿದಿತ್ತು ಎಂದು ಭಾವುಕರಾದರು.

ನನಗೆ ಕೆಂಪೇಗೌಡ ಎಂದು ನಾಮಕರಣ ಮಾಡಿದ್ದರೂ ಶಿವಗಿರಿ ಕ್ಷೇತ್ರದ ಅನುಗ್ರಹ ಇದ್ದ ಕಾರಣಕ್ಕೆ ಶಿವಕುಮಾರ್ ಎಂದು ಮರುನಾಮಕರಣ ಮಾಡಲಾಯಿತು ಎಂದು ನಮ್ಮ ತಾಯಿ ಹೇಳುತ್ತಿರುತ್ತಾರೆ. ನನಗೂ ಮಠ-ಮಾನ್ಯಗಳಿಗೂ ಅವಿನಾಭಾವ ಸಂಬಂಧವಿದೆ. ಮನೆ ಹುಷಾರು, ಮಠ ಹುಷಾರು ಎಂದು ಹಿರಿಯರು ಹೇಳಿದ್ದಾರೆ. ಅದರಂತೆ ನಮ್ಮ ಮಠಗಳನ್ನೂ ನಾವು ಉಳಿಸಿ ಬೆಳೆಸಬೇಕು. ಸಾವಿಗೆ ಗಳಿಗೆಯಿಲ್ಲ, ಸಾವು ಯಾರನ್ನೂ ಕೇಳಿ ಬರುವುದಿಲ್ಲ, ಅತಿಥಿಗಳಿಗೆ ನಾಳೆ ಬನ್ನಿ ಎನ್ನಬಹುದು. ಆದರೆ ಸಾವಿಗೆ ನಾಳೆ ಬಾ ಎನ್ನಲು ಸಾಧ್ಯವಿಲ್ಲ. ಆದರೆ ನಿರ್ವಾಣ ಸ್ವಾಮಿಗಳ ಆದರ್ಶ ಸದಾ ಶಾಶ್ವತ ಎಂದರು.

ನಮ್ಮ ಕುಟುಂಬಕ್ಕೂ ಶ್ರೀ ಮಠಕ್ಕೂ ಉತ್ತಮ ಒಡನಾಟ:

ಶ್ರೀಮಠ ಹಾಗೂ ನಮ್ಮ ಕುಟುಂಬಕ್ಕೆ ಅವಿನಾಭಾವ ಒಡನಾಡವಿದೆ. ನಮ್ಮ ಅಜ್ಜನ ಕಾಲದಿಂದಲೂ ಮನೆಯಲ್ಲಿ ಯಾವುದೇ ಕಾರ್ಯಗಳು ನಡೆದರೂ ಇವರಿಗಿಂತ ಮೊದಲು ಇದ್ದಂತಹ ಹಿರಿಯ ಸ್ವಾಮೀಜಿಯವರು ಬಂದು ಆಶೀರ್ವಾದ ಮಾಡುತ್ತಿದ್ದರು. ಯಾವುದೇ ಶುಭಕಾರ್ಯಗಳಿದ್ದರೂ ನಮಗೆ ಅವರ ಅಭಯ ಹಸ್ತ ಇದ್ದೇ ಇರುತ್ತಿತ್ತು. ಪ್ರತಿಯೊಂದು ಸಂದರ್ಭದಲ್ಲಿಯೂ ಅವರು ನಮಗೆ ಮಾರ್ಗದರ್ಶನ ಮಾಡುತ್ತಿದ್ದರು. ಅವರ ಚಿಂತನೆಗಳು ನಮಗೆ ದಾರಿದೀಪ ಎಂದು ತಿಳಿಸಿದರು.

ನಮ್ಮ ಜಿಲ್ಲೆಗೆ ಆಧ್ಯಾತ್ಮಿಕ ದೀಪ. ಅನ್ನ, ಅಕ್ಷರ, ಆಶ್ರಯವನ್ನು ಸರ್ಕಾರ ನೀಡುವುದಕ್ಕಿಂತ ಮೊದಲು ದೇಗುಲ ಮಠ ಹಾಗೂ ಸಿದ್ದಗಂಗಾ ಮಠ ನೀಡಿದ್ದವು. 84 ವರ್ಷ ಬಾಳಿ ಬದುಕಿ ಮಾರ್ಗದರ್ಶನ ನೀಡಿದವರು. ಮೈಸೂರು ಮಹಾರಾಜರ ಕಾಲದಿಂದಲೂ ಈ ಮಠ ಅಚಲವಾಗಿ ನಿಂತಿದೆ. ಉನ್ನತ ಅಧಿಕಾರಿಗಳು, ಜನಪ್ರತಿನಿಧಿಗಳು, ಉದ್ಯಮಿಗಳು ಮಠದಲ್ಲಿ ಕಲಿತು ಉತ್ತಮ ಜೀವನ ರೂಪಿಸಿಕೊಂಡಿದ್ದಾರೆಂದು ಹೇಳಿದರು.

ಹೊರ ಜಿಲ್ಲೆ, ತಮಿಳುನಾಡಿನಿಂದಲೂ ಭಕ್ತರು ಬಂದಿದ್ದು, ಸುತ್ತೂರು ಶ್ರೀಗಳು ಈ ಮಠದ ಆಧಾರಸ್ತಂಭವಾಗಿದ್ದರು. ಸಿದ್ದಗಂಗಾ ಮಠಕ್ಕೆ ಎಷ್ಟು ಹಿರಿತನ ಇದೆಯೋ ಅಷ್ಟೇ ಹಿರಿತನ ಹಳೇ ಮೈಸೂರು ಭಾಗದ ಈ ಮಠಕ್ಕೂ ಇದೆ. ಮರಣ ದೇಹಕ್ಕೆ ಹೊರತು ಜಂಗಮಕ್ಕಲ್ಲ, ಬಸವಣ್ಣನವರ ತತ್ವಾದರ್ಶಗಳಡಿ ಅಕ್ಷರ ದಾಸೋಹ, ಅನ್ನ ದಾಸೋಹ ನಡೆಸುತ್ತಿದ್ದರು. ಕಿರಿಯ ಶ್ರೀಗಳ ಮಾರ್ಗದರ್ಶನದಂತೆ ಈ ಮಠದ ಸೇವೆಯನ್ನು ಮುಂದುವರೆಸುತ್ತೇವೆ. ಕನಕಪುರ ತಾಲೂಕಿನ ಜನರ ಕಣ ಕಣದಲ್ಲೂ ದೇಗುಲ ಮಠವಿದೆ. ನಿರ್ವಾಣ ಮಹಾಸ್ವಾಮಿಯವರಿಗೆ ಸರ್ಕಾರಿ ಗೌರವ ಸಲ್ಲಿಸುವ ಗೌರವ ಸಿಕ್ಕಿದ್ದು ನನ್ನ ಭಾಗ್ಯ ಎಂದು ಹೇಳಿದರು.

ಈ ವೇಳೆ ಸಚಿವ ಈಶ್ವರ್ ಖಂಡ್ರೆ, ಮಾಜಿ ಸಂಸದ ಡಿ.ಕೆ.ಸುರೇಶ್ ಹಾಗೂ ಎಂಎಲ್ಸಿ ಎಸ್.ರವಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಕೆ ಕೆ ಪಿ ಸುದ್ದಿ 01(1):

ಕನಕಪುರ ತಾಲೂಕಿನ ಲಿಂಗೈಕ್ಯರಾದ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿಗಳ ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್.

ಕೆ ಕೆ ಪಿ ಸುದ್ದಿ 01(2) :

ಸರ್ಕಾರಿ ಗೌರವದ ನಂತರ ರಾಷ್ಟ್ರಧ್ವಜವನ್ನು ಶ್ರೀ ಮಠದ ಕಿರಿಯ ಶ್ರೀ ಚನ್ನಬಸವ ಸ್ವಾಮೀಜಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಹಸ್ತಾಂತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾವು ತಿನ್ನಲು ಅಡ್ಡಿಯಾದ ಕಾರು ಜಖಂ ಮಾಡಿದ ಕಾಡಾನೆ
ಪಿಯು ಉಪನ್ಯಾಸಕರು ಪ್ರೌಢಶಾಲೆಗೆ ಬೋಧಿಸಲು ತಿದ್ದುಪಡಿ ವಿರೋಧಿಸಿ ಉಪನ್ಯಾಸಕರ ಪ್ರತಿಭಟನೆ