ಕ್ರಿಪ್ಟೋ ಕರೆನ್ಸಿ: ಮ್ಯಾಟ್ರಿಮೋನಿಯಲ್ಲಿ ವಧು ಹುಡುಕಿ, ₹9.34 ಲಕ್ಷ ಕಳಕೊಂಡ ಟೆಕ್ಕಿ!

KannadaprabhaNewsNetwork |  
Published : Jul 4, 2025 11:48 PM IST
(ಸಾಂದರ್ಭಿಕ ಚಿತ್ರ)  | Kannada Prabha

ಸಾರಾಂಶ

ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಯುವತಿಯ ಮಾತಿಗೆ ಮರುಳಾದ ದಾವಣಗೆರೆಯ ಸಾಫ್ಟ್‌ವೇರ್‌ ಎಂಜಿನಿಯರೊಬ್ಬ ₹9.34 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ಘಟನೆ ನಗರದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಯುವತಿಯ ಮಾತಿಗೆ ಮರುಳಾದ ದಾವಣಗೆರೆಯ ಸಾಫ್ಟ್‌ವೇರ್‌ ಎಂಜಿನಿಯರೊಬ್ಬ ₹9.34 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ಘಟನೆ ನಗರದಲ್ಲಿ ನಡೆದಿದೆ.

ಸಂಗಮ ಮ್ಯಾಟ್ರಿಮನಿ ಆ್ಯಪ್‌ನಲ್ಲಿ ಖಾತೆ ತೆರೆದು ವಧುವನ್ನು ಹುಡುಕುತ್ತಿದ್ದ ದಾವಣಗೆರೆ ಟೆಕ್ಕಿಗೆ ಚೆನ್ನೈ ಮೂಲದವಳೆಂದು ಹೇಳಿಕೊಂಡ ಯುವತಿ ಪರಿಚಯವಾಗಿದೆ. ಏ.24ರಂದು ಅಪರಿಚಿತ ನಂಬರ್‌ನಿಂದ ವಾಟ್ಸಪ್ ಮೆಸೇಜ್ ಮಾಡಿದ ಯುವತಿಯು, ಅಭಿನಯ ಎಂಬ ಪ್ರೊಫೈಲ್‌ನಿಂದ ಪರಿಚಯ ಮಾಡಿಕೊಂಡಿದ್ದಳು. ತಮಿಳುನಾಡಿನ ಚೆನ್ನೈನವಳಾದ ತಾನು ಸದ್ಯ ಮಲೇಷ್ಯಾದಲ್ಲಿ ನೆಲೆಸಿದ್ದೇನೆ ಎಂದು ನಂಬಿಸಿದ್ದಾಳೆ.

ಟೆಕ್ಕಿಗೆ ನಿಮ್ಮ ಪ್ರೊಫೈಲ್ ಇಷ್ಟವಾಗಿದೆ. ನಿಮ್ಮನ್ನು ಮದುವೆ ಆಗುತ್ತೇನೆಂದು ವಂಚಕ ಯುವತಿ ಹೇಳಿದ್ದಾಳೆ. ಬಳಿಕ ತಾನು ಗ್ಲೋಬಲ್ ಟಿಆರ್‌ಎಕ್ಸ್ ಎಂಬ ಕಂಪನಿಯಲ್ಲಿ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದ್ದಾಗಿ ಹೇಳಿಕೊಂಡಿದ್ದಳು. ನೀವೂ ಆಸಕ್ತಿ ಇದ್ದರೆ ಹಣ ಹೂಡಿಕೆ ಮಾಡಿ ಎಂಬುದಾಗಿ ದಾವಣಗೆರೆ ಟೆಕ್ಕಿಗೆ ಆಕೆ ಲಿಂಕ್ ಸಹ ಕಳಿಸಿದ್ದಳು. ವಂಚಕಿಯ ಮಾತು ನಂಬಿದ ಟೆಕ್ಕಿ ಲಿಂಕ್ ಕ್ಲಿಕ್ ಮಾಡಿ, ಹೂಡಿಕೆಗೆಂದು ಮೇ 4ರಿಂದ ಮೇ 9ರವರೆಗೆ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ₹9.34 ಲಕ್ಷಗಳನ್ನು ವರ್ಗಾವಣೆ ಮಾಡಿದ್ದಾರೆ.

ಇಷ್ಟಾದ ಮೇಲೆ ಪ್ರೊಸೆಸಿಂಗ್ ಶುಲ್ಕ ಪಾವತಿಸುವಂತೆ ಮತ್ತೆ ಅಪರಿಚಿತ ನಂಬರ್‌ನಿಂದ ಟೆಕ್ಕಿಗೆ ಕರೆಬಂದಿದೆ. ಶೇ.5ರಷ್ಟು ಪ್ರೊಸೆಸಿಂಗ್ ಫೀಸ್ ಸಹ ವರ್ಗಾವಣೆ ಮಾಡಿದ್ದ ಟೆಕ್ಕಿಗೆ ಬಳಿಕ ಅಮೆರಿಕನ್ ಡಾಲರ್‌ನಿಂದ ಭಾರತದ ರುಪಾಯಿಗೆ ಕನ್ವರ್ಟ್ ಮಾಡಲು ಮತ್ತೆ ಆನ್‌ಲೈನ್‌ ವಂಚಕರು ಬೇಡಿಕೆ ಇಟ್ಟಿದ್ದಾರೆ. ಆಗ ಟೆಕ್ಕಿಗೆ ಯುವತಿಯಿಂದ ತಾನು ಮೋಸಹೋಗಿದ್ದು, ₹9.34 ಲಕ್ಷಗಳಿಗೂ ಅಧಿಕ ಹಣ ಕಳೆದುಕೊಂಡಿದ್ದು ಅರಿವಿಗೆ ಬಂದಿದೆ. ಬಳಿಕ ದಾವಣಗೆರೆ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ದೌಡಾಯಿಸಿದ ದೂರು ನೀಡಿದ್ದಾರೆ.

- - -

(ಸಾಂದರ್ಭಿಕ ಚಿತ್ರ)

PREV