ತಾಂತ್ರಿಕ ದೋಷ: ದಾವಣಗೆರೆಯಲ್ಲೇ ನಿಂತ ವಂದೇಭಾರತ್‌ ರೈಲು!

KannadaprabhaNewsNetwork |  
Published : Jun 28, 2025, 12:18 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ಧಾರವಾಡದಿಂದ ಬೆಂಗಳೂರಿಗೆ ಹೊರಟಿದ್ದ ವಂದೇ ಭಾರತ್ ರೈಲಿನಲ್ಲಿ ತಾಂತ್ರಿಕ ದೋಷಗಳು ಕಂಡುಬಂದ ಹಿನ್ನೆಲೆ ರೈಲನ್ನು ದಾವಣಗೆರೆ ರೈಲ್ವೆ ನಿಲ್ದಾಣದಲ್ಲೇ ನಿಲ್ಲಿಸಿ, ಬೇರೆ ಎರಡು ರೈಲುಗಳಲ್ಲಿ ಪ್ರಯಾಣಿಕರನ್ನು ಬೆಂಗಳೂರಿಗೆ ಕಳಿಸುವ ವ್ಯವಸ್ಥೆ ಮಾಡಲಾಯಿತು.

- ಧಾರವಾಡದಿಂದ ಬೆಂಗಳೂರಿಗೆ ಹೊರಟಿದ್ದ ರೈಲಿನ ಬೇರಿಂಗ್‌ನಲ್ಲಿ ಕಾಣಿಸಿದ ಸ್ಪಾರ್ಕ್‌ - ಮುನ್ನೆಚ್ಚರಿಕೆಯಾಗಿ ವಂದೇ ಭಾರತ್‌ ರೈಲನ್ನು ನಿಲ್ಲಿಸಿದ ಲೋಕೋ ಪೈಲಟ್‌

- ಜನಶತಾಬ್ಧಿ, ಅರಸೀಕೆರೆ ವಂದೇ ಭಾರತ್‌ ರೈಲುಗಳ ಮೂಲಕ ಬೆಂಗಳೂರಿಗೆ ಪ್ರಯಾಣಿಕರ ರವಾನೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಧಾರವಾಡದಿಂದ ಬೆಂಗಳೂರಿಗೆ ಹೊರಟಿದ್ದ ವಂದೇ ಭಾರತ್ ರೈಲಿನಲ್ಲಿ ತಾಂತ್ರಿಕ ದೋಷಗಳು ಕಂಡುಬಂದ ಹಿನ್ನೆಲೆ ರೈಲನ್ನು ದಾವಣಗೆರೆ ರೈಲ್ವೆ ನಿಲ್ದಾಣದಲ್ಲೇ ನಿಲ್ಲಿಸಿ, ಬೇರೆ ಎರಡು ರೈಲುಗಳಲ್ಲಿ ಪ್ರಯಾಣಿಕರನ್ನು ಬೆಂಗಳೂರಿಗೆ ಕಳಿಸುವ ವ್ಯವಸ್ಥೆ ಮಾಡಲಾಯಿತು.

ಎಂದಿನಂತೆ ಬೆಂಗಳೂರಿನಿಂದ ಶುಕ್ರವಾರ ಬೆಳಗಿನ ಜಾವ ಹೊರಟು, ದಾವಣಗೆರೆ ಮಾರ್ಗವಾಗಿ ವಂದೇ ಭಾರತ್ ರೈಲು ಧಾರವಾಡ ತಲುಪಿತ್ತು. ಅಲ್ಲಿಂದ ಮಧ್ಯಾಹ್ನ 1.15ಕ್ಕೆ ಹೊರಟು ಮಧ್ಯಾಹ್ನ 3.35ಕ್ಕೆ ದಾವಣಗೆರೆಗೆ ಬರುತ್ತಿತ್ತು. ಹರಿಹರ ರೈಲ್ವೆ ನಿಲ್ದಾಣದಿಂದ ಹೊರಟ ನಂತರ ವಂದೇಭಾರತ್ ರೈಲಿನ ಬೇರಿಂಗ್‌ನಲ್ಲಿ ಸ್ಪಾರ್ಕ್ ಕಾಣಿಸಿಕೊಂಡಿತು. ಲೋಕೋ ಪೈಲಟ್ ಸಮಯಪ್ರಜ್ಞೆ ಮೆರೆದು, ರೈಲನ್ನು ನಿಲ್ಲಿಸಿದರು.

ಬೇರಿಂಗ್‌ನಲ್ಲಿ ಸ್ಪಾರ್ಕ್ ಕಾಣಿಸಿಕೊಂಡ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ವಿಚಾರವನ್ನು ತಂದರು. ಆಗ ಮೇಲಧಿಕಾರಿಗಳು ದಾವಣಗೆರೆ ನಿಲ್ದಾಣದಲ್ಲೇ ವಂದೇ ಭಾರತ್ ರೈಲನ್ನು ನಿಲುಗಡೆ ಮಾಡುವಂತೆ ಲೋಕೋ ಪೈಲಟ್‌ಗೆ ಸೂಚಿಸಿದರು ಎನ್ನಲಾಗಿದೆ. ಬಳಿಕ ದಾವಣಗೆರೆ ನಿಲ್ದಾಣದ 2ನೇ ಫ್ಲಾಟ್ ಫಾರಂನಲ್ಲಿ ವಂದೇಭಾರತ್ ಟ್ರೈನ್‌ ನಿಲುಗಡೆ ಮಾಡಲಾಯಿತು.

ಹಿಂದೆಯೇ ಬರುತ್ತಿದ್ದ ಜನಶತಾಬ್ಧಿ ರೈಲಿನಲ್ಲಿ ವಂದೇ ಭಾರತ್‌ನಲ್ಲಿದ್ದ ಸಾಕಷ್ಟು ಪ್ರಯಾಣಿಕರಿಗೆ ಫ್ಲಾಟ್ ಫಾರಂ 1ಕ್ಕೆ ಕಳಿಸಿ, ಜನಶತಾಬ್ದಿ ರೈಲಿನ ಮೂಲಕ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಯಿತು. ಜನಶತಾಬ್ಧಿ ರೈಲಿನ ಡಿ 14 ಮತ್ತು ಡಿ 19ನಲ್ಲಿ ಧಾರವಾಡ ಕಡೆಯಿಂದ ಬಂದ ಪ್ರಯಾಣಿಕರು ಹಾಗೂ ದಾವಣಗೆರೆಯಿಂದ ಬೆಂಗಳೂರಿಗೆ ಹೊರಟಿದ್ದ ಪ್ರಯಾಣಿಕರಿಗೆ ಹತ್ತಲು ಅವಕಾಶ ಮಾಡಿಕೊಡಲಾಯಿತು. ವಾರಾಂತ್ಯದ ದಿನವಾಗಿದ್ದರಿಂದ ಬೆಂಗಳೂರಿಗೆ ಪ್ರಯಾಣಿಸುವವರ ಸಂಖ್ಯೆ ಸಹಜವಾಗಿಯೇ ಎರಡೂ ರೈಲುಗಳಲ್ಲಿ ಹೆಚ್ಚಾಗಿತ್ತು.

ಶಾಲೆ, ಕಾಲೇಜುಗಳಿಗೆ ರಜೆ ಬಿಟ್ಟಿದ್ದರಿಂದ, ಶನಿವಾರ, ಭಾನುವಾರ ರಜಾ ದಿನಗಳಿದ್ದುದರಿಂದ ತಮ್ಮ ಊರಿಗೆ ಮರಳಲು ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಉದ್ಯೋಗಿಗಳು ರೈಲಿನಲ್ಲಿ ಹೊರಟಿದ್ದರು. ಮಗನ ಮನೆಗೆ, ಮಗಳ ಮನೆಗೆಂದು ಆರಾಮದಾಯಕ ಪ್ರಯಾಣವೆಂದು ವಂದೇಭಾರತ್ ಟ್ರೈನ್‌ ಹತ್ತಿದ್ದ ಪ್ರಯಾಣಿಕರು, ವಿಶೇಷಚೇತನರು ವಂದೇಭಾರತ್‌ ರೈಲಿನಲ್ಲಿ ತಾಂತ್ರಿಕ ದೋಷದ ಪರಿಣಾಮ ಸಹಜವಾಗಿಯೇ ಬೇಸರದಿಂದ ಜನಶತಾಬ್ದಿ ರೈಲಲ್ಲಿ ಪ್ರಯಾಣಿಸಬೇಕಾಯಿತು.

ಜನಶತಾಬ್ದಿ ರೈಲಿನಲ್ಲಿ ಸೀಟುಗಳು ಸಿಗದ ಪ್ರಯಾಣಿಕರನ್ನು ಅರಸೀಕೆರೆಯಿಂದ ಬಂದ ವಿಶೇಷ ವಂದೇಭಾರತ್ ರೈಲು ಹತ್ತಿಸಿಕೊಂಡು ಬೆಂಗಳೂರಿಗೆ ತಲುಪಿಸಿದೆ. ವಂದೇ ಭಾರತ್‌ ರೈಲಿನಲ್ಲಿ ಸಣ್ಣ ತಾಂತ್ರಿಕ ದೋಷವಾಗಿದ್ದು ಬಿಟ್ಟರೆ, ಬೇರಾವುದೇ ದೊಡ್ಡಮಟ್ಟದ ಸಮಸ್ಯೆ ಆಗಿಲ್ಲ. ಮುನ್ನೆಚ್ಚರಿಕೆಯಿಂದ ರೈಲನ್ನು ಇಲ್ಲಿಯೇ ನಿಲ್ಲಿಸಲಾಗಿದೆ ಎಂದು ರೈಲ್ವೆ ಇಲಾಖೆ ಮೂಲಗಳು ಪ್ರತಿಕ್ರಿಯಿಸಿವೆ.

- - -

(ಬಾಕ್ಸ್‌) * ಮತ್ತೊಂದು ವಂದೇ ಭಾರತ್‌ ರೈಲು ನೆರವು ಜನಶತಾಬ್ದಿ ರೈಲಲ್ಲೂ ಪ್ರಯಾಣಿಕರು ಹೆಚ್ಚಾಗಿದ್ದರಿಂದ ಅರಸೀಕೆರೆ ಮಾರ್ಗದಲ್ಲಿ ಸಂಚರಿಸಬೇಕಾಗಿದ್ದ ಮತ್ತೊಂದು ವಂದೇಭಾರತ್ ರೈಲನ್ನು ತುರ್ತಾಗಿ ದಾವಣಗೆರೆ ರೈಲ್ವೆ ನಿಲ್ದಾಣಕ್ಕೆ ಕರೆಸಿಕೊಂಡು, ಉಳಿದಿದ್ದ ಪ್ರಯಾಣಿಕರಿಗೆ ಅದರಲ್ಲಿ ತೆರಳಲು ವ್ಯವಸ್ಥೆ ಮಾಡಲು ರೈಲ್ವೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ರೈಲ್ವೆ ಪೊಲೀಸರು ಶ್ರಮಿಸಿದರು. ಸದ್ಯಕ್ಕೆ ವಂದೇ ಭಾರತ್ ರೈಲು ತಾಂತ್ರಿಕ ಕಾರಣದಿಂದ ದಾವಣಗೆರೆ ನಿಲ್ದಾಣದಲ್ಲೇ ನಿಲುಗಡೆಯಾಗಿದೆ. ಅರಸೀಕೆರೆಯಿಂದ ಬರುವ ರೈಲಿನಲ್ಲಿ ರೈಲ್ವೆ ಇಲಾಖೆ ತಂತ್ರಜ್ಞರು, ಸ್ಥಳೀಯ ತಂತ್ರಜ್ಞರು ಲೋಕೋ ಪೈಲಟ್ ಜೊತೆಗೆ ಚರ್ಚಿಸಿ, ಪರಿಶೀಲಿಸುತ್ತಿದ್ದಾರೆ.

- - -

-(ಫೋಟೋ ಬರಲಿವೆ)

PREV

Recommended Stories

ದಲಿತರಿಗೆ ದಿಲ್ಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ : ಜಾರಕಿಹೊಳಿ
ತೀವ್ರ ಚಳಿ, ಜ್ವರ : ದೇವೇಗೌಡ ಆಸ್ಪತ್ರೆಗೆ, ಐಸಿಯುನಲ್ಲಿ ಚಿಕಿತ್ಸೆ