ಕನ್ನಡಪ್ರಭ ವಾರ್ತೆ ಹೊಸದುರ್ಗ
ಪಟ್ಟಣದ ಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಶ್ರೀ ಸಿದ್ಧರಾಮೇಶ್ವರ ವಿದ್ಯಾಸಂಸ್ಥೆ ಆಯೋಜಿಸಿದ್ದ ತೆಂಗು ಮತ್ತು ಅಡಕೆ ಬೆಳೆಗಳ ವಿಚಾರ ಸಂಕಿರಣದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಅಡಕೆ ಮತ್ತು ತೆಂಗು ಬೆಳೆಗಳ ನಿರ್ವಹಣೆಯಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಶಿವಮೊಗ್ಗ ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯ ವಿಶೇಷ ಕಾರ್ಯಯೋಜನೆ ರೂಪಿಸುತ್ತಿದ್ದು, ವಿಶ್ವವಿದ್ಯಾಲಯ ವ್ಯಾಪ್ತಿಯ ನಾಲ್ಕು ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ಸಾವಿರಾರು ರೈತರನ್ನು ನೇರವಾಗಿ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಲಾಗುವುದು ಎಂದರು.
ಹವಾಮಾನ ವೈಪರೀತ್ಯ, ಮಣ್ಣಿನ ಫಲವತ್ತತೆ ಕುಸಿತ, ನೀರಿನ ಕೊರತೆ ಹಾಗೂ ಕೃಷಿ ವೆಚ್ಚದ ಏರಿಕೆ ಇಂದಿನ ರೈತರ ಮುಂದೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇಂತಹ ಪರಿಸ್ಥಿತಿಯಲ್ಲಿ ವೈಜ್ಞಾನಿಕ ಕೃಷಿ ಪದ್ಧತಿ, ಸಂಶೋಧನಾ ಸಂಸ್ಥೆಗಳ ಸಲಹೆ ಹಾಗೂ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡರೆ ಮಾತ್ರ ಕೃಷಿಯನ್ನು ಲಾಭದಾಯಕವಾಗಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.ನಿವೃತ್ತ ಐಪಿಎಸ್ ಅಧಿಕಾರಿ ಎಸ್.ಎನ್. ಸಿದ್ದರಾಮಪ್ಪ ಮಾತನಾಡಿ ಕೃಷಿಯೂ ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಬದಲಾಗುತ್ತಿರುವ ಹವಾಮಾನಕ್ಕೆ ಅನುಗುಣವಾಗಿ ದೀರ್ಘಾವಧಿ ಹಾಗೂ ಅಲ್ಪಾವಧಿ ಬೆಳೆಗಳನ್ನು ವೈಜ್ಞಾನಿಕ ರೀತಿಯಲ್ಲಿ ಬೆಳೆಯುವುದು ಅನಿವಾರ್ಯವಾಗಿದೆ. ರೈತರು ಇಂತಹ ವಿಚಾರ ಸಂಕಿರಣಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಕೃಷಿ ವಿಜ್ಞಾನಿಗಳು ನೀಡುವ ಮಾಹಿತಿಯನ್ನು ತಮ್ಮ ಹೊಲಗಳಲ್ಲಿ ಅಳವಡಿಸಿಕೊಂಡರೆ ಮಾತ್ರ ನಷ್ಟದಿಂದ ಹೊರಬಂದು ಸ್ಥಿರ ಆದಾಯ ಗಳಿಸಲು ಸಾಧ್ಯ ಎಂದು ಹೇಳಿದರು.
ಕೃಷಿ ವಿಜ್ಞಾನಿ ಡಾ. ಓಂಕಾರಪ್ಪ ಅಡಿಕೆ ಹಾಗೂ ತೆಂಗು ಬೆಳೆಗಳ ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ಧರಾಮೇಶ್ವರ ವಿದ್ಯಾಸಂಸ್ಥೆಯ ಅಧ್ಯಕ್ಷ ಮರಿದಿಮ್ಮಪ್ಪ ವಹಿಸಿದ್ದರು. ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಟಿ. ಬಸವರಾಜ ನಾಯ್ಕ, ಯೋಗೇಶ್ವರ್, ನಿವೃತ್ತ ಪ್ರಾಧ್ಯಾಪಕ ಡಾ. ಎಚ್. ನಾರಾಯಣಸ್ವಾಮಿ ಸೇರಿದಂತೆ ಗಣ್ಯರು ಮಾತನಾಡಿದರು.