ಧಾರವಾಡ:
ಆಧುನಿಕ ತಂತ್ರಜ್ಞಾನಗಳು ಸಾಮಾಜಿಕ ಬದಲಾವಣೆಯಲ್ಲಿ ಕ್ರಾಂತಿಯನ್ನುಂಟು ಮಾಡಿ ಜೀವನ ಶೈಲಿಯನ್ನು ಉತ್ತಮಗೊಳಿಸುತ್ತಿರುವುದರಿಂದ ಭಾರತ ವೇಗವಾಗಿ ಮುನ್ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರದ ಕೃಷಿ ಆಯುಕ್ತ ಡಾ. ಪಿ.ಕೆ. ಸಿಂಗ್ ಅಭಿಪ್ರಾಯಪಟ್ಟರು.ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ ಎರಡು ದಿನಗಳ ರಾಷ್ಟ್ರೀಯ ಕೃಷಿ ಸ್ಟಾರ್ಟಅಪ್ ಎಕ್ಸ್ಪೋ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನವೀನ ಆವಿಷ್ಕಾರಗಳ ಸಂಭ್ರಮದ ಈ ಯುಗದಲ್ಲಿ ಅವುಗಳನ್ನು ವಾಣಿಜ್ಯೀಕರಣಗೊಳಿಸಲು ಇದು ಸುಸಮಯವಾಗಿದೆ. ಕೇಂದ್ರ ಸರ್ಕಾರ ನೀಡುತ್ತಿರುವ ಬೆಂಬಲದಿಂದ ಇಂತಹ ಎಕ್ಸ್ಪೋಗಳು ನಮ್ಮ ಕನಸುಗಳನ್ನು ಪ್ರಯೋಗಿಸಿ ರೂಪಿಸಿಕೊಳ್ಳಲು ಹಾಗೂ ಮುಂದುವರಿಸಿಕೊಳ್ಳಲು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತವೆ ಎಂದ ಹೇಳಿದರು.
ವಿಶ್ವ ಮಣ್ಣು ದಿನಾಚರಣೆ ಅಂಗವಾಗಿ ಕೃಷಿ ಮಹಾವಿದ್ಯಾಲಯ ನಿವೃತ್ತ ಡೀನ್ ಡಾ.ಜಿ.ಎಸ್. ದಾಸೋಗ್ ಮಾತನಾಡಿ, ಮಣ್ಣು ನಮ್ಮನ್ನು ಪೋಷಿಸುವುದರ ಹೊರತಾಗಿ ನೀರನ್ನು ಶುದ್ಧೀಕರಿಸುವುದು, ಕಾರ್ಬನ್ ಭಂಡಾರವಾಗಿರುವುದು, ಜೀವ ವೈವಿಧ್ಯತೆಯ ತಾಯಿಯಾಗಿರುವುದು, ವಿಶ್ವದ ಶೇ.95ರಷ್ಟು ಜನರು ತಮ್ಮ ಆಹಾರಕ್ಕಾಗಿ ಮಣ್ಣಿನ ಮೇಲೆ ಅವಲಂಬಿತರಾಗಿದ್ದಾರೆ ಎಂದರು.ಕೃವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ ಮಾತನಾಡಿ, ಕೃಷಿ ಕ್ಷೇತ್ರವು ತಂತ್ರಜ್ಞಾನ ಆಧಾರಿತವಾಗಿ ವೇಗವಾಗಿ ಬೆಳೆಯುತ್ತಿದ್ದು, ಆಹಾರ ಮತ್ತು ರಾಷ್ಟ್ರೀಯ ಭದ್ರತೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ, ಭಾರತ ವಿಶ್ವದ ಆಹಾರ ಉತ್ಪಾದನೆಯಲ್ಲಿ ಮುಂದಾಳಾಗುವ ದಿನ ಸನಿಹದಲ್ಲಿದೆ, ಕೃಷಿಕ್ ಅಗ್ರಿ ಬಿಸಿನೆಸ್ ಇಂಕ್ಯುಬೇಟರ್, ಕೃವಿವಿ. ಧಾರವಾಡವು ೧೩೬ ಸ್ಟಾರ್ಟ್‌ಅಪ್‌ಗಳಿಗೆ ಒಟ್ಟು ₹ 14 ಕೋಟಿ ಆರ್ಥಿಕ ಬೆಂಬಲ ನೀಡಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ 2024-2025 ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಸ್ಪರ್ಧೆ ವಿಜೇತರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಈ ವೇಳೆ ಯೋಜನೆಯ ಮುಖ್ಯಸ್ಥ ಡಾ. ಎಸ್.ಎಸ್. ಡೊಳ್ಳಿ. ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಪಾರ್ವತಿ ಕುರ್ಲೆ, ವಿ.ಪಿ. ಪೊಲೀಸ್‌ಗೌಡರ, ಬಸವರಾಜ ಕುಂದಗೋಳಮಠ, ರವಿಕುಮಾರ ಮಾಳಿಗೇರ, ವಿವಿ ಕುಲಸಚಿವ ಜಯಶ್ರೀ ಶಿಂತ್ರಿ, ಶಿಕ್ಷಣ ನಿರ್ದೇಶಕ ಡಾ. ಬಿ.ಡಿ. ಬಿರಾದಾರ, ಸಂಶೋಧನಾ ನಿರ್ದೇಶಕ ಡಾ. ಪಿ.ಯು. ಕೃಷ್ಣರಾಜ, ವಿಸ್ತರಣಾ ನಿರ್ದೇಶಕ ಡಾ. ಎಂ.ವಿ. ಮಂಜುನಾಥ ಇದ್ದರು.