ಮುಖದ ಸೌಂದರ್ಯಕ್ಕೆ ಹಲ್ಲುಗಳು ಅಗತ್ಯ: ಡಾ.ಪತ್ತಾರ

KannadaprabhaNewsNetwork | Published : Nov 25, 2024 1:04 AM

ಸಾರಾಂಶ

ಆರೋಗ್ಯದ ದೃಷ್ಟಿಯಿಂದ ಹಲ್ಲುಗಳ ಬಗೆಗಿನ ಮೂಢನಂಬಿಕೆಗಳಿಗೆ ಬಲಿಯಾಗಬಾರದು. ಚಾಕಲೇಟ್, ಚ್ಯುವಿಂಗ್ ಗಮ್‌ನಂತಹ ಜಿಗುಟು ಪದಾರ್ಥಗಳ ಸೇವನೆ ಮಾಡಬಾರದು

ಕನ್ನಡಪ್ರಭ ವಾರ್ತೆ ಜಮಖಂಡಿ

ಆಹಾರ ನುರಿಸಲು, ಮಾತನಾಡಲು, ಚೆನ್ನಾಗಿ ನಗಲು, ಮುಖದ ಸೌಂದರ್ಯ ಹಾಗೂ ದೇಹದ ಆರೋಗ್ಯಕ್ಕೆ ಹಲ್ಲುಗಳು ತುಂಬಾ ಅಗತ್ಯ. ಆದ್ದರಿಂದ ಬೆಳಗ್ಗೆ ಮತ್ತು ಸಂಜೆ ದಿನಕ್ಕೆ ಎರಡು ಬಾರಿ ಎರಡು ನಿಮಿಷಗಳ ಕಾಲ ಸರಿಯಾದ ವಿಧಾನದಿಂದ ಹಲ್ಲು ಉಜ್ಜಿ ಸ್ವಚ್ಛಗೊಳಿಸಿಕೊಳ್ಳಬೇಕು. ಊಟ, ಉಪಹಾರ ಮಾಡಿದ ಬಳಿಕ ನೀರು ಮುಕ್ಕಳಿಸಿ ಉಗಳಬೇಕು ಎಂದು ಡಾ.ವಿದ್ಯಾಧರ ಪತ್ತಾರ ಹೇಳಿದರು.

ನಗರದ ಬಸವಜ್ಯೋತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಆಶ್ರಯದಲ್ಲಿ ಸ್ಮೈಲ್‌ ಕೇರ್ ಹಲ್ಲಿನ ದವಾಖಾನೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹಲ್ಲುಗಳ ಆರೋಗ್ಯ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಹಲ್ಲು ಉಜ್ಜುವ ವಿಧಾನ ಕುರಿತು ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದ ಅವರು, ಆರೋಗ್ಯದ ದೃಷ್ಟಿಯಿಂದ ಹಲ್ಲುಗಳ ಬಗೆಗಿನ ಮೂಢನಂಬಿಕೆಗಳಿಗೆ ಬಲಿಯಾಗಬಾರದು. ಚಾಕಲೇಟ್, ಚ್ಯುವಿಂಗ್ ಗಮ್‌ನಂತಹ ಜಿಗುಟು ಪದಾರ್ಥಗಳ ಸೇವನೆ ಮಾಡಬಾರದು. ಕುರಕುರೆ ಸೇವಿಸಬಾರದು. ತಂಬಾಕು, ಗುಟ್ಕಾ ಅಗಿಯಬಾರದು. ಸಿಗಾರೇಟ್ ಸೇದಬಾರದು. ಪ್ರತಿ ಎರಡು ತಿಂಗಳಿಗೊಮ್ಮೆ ಹಲ್ಲುಜ್ಜುವ ಬ್ರಷ್‌ ಬದಲಾಯಿಸಬೇಕು ಎಂದು ಸಲಹೆ ನೀಡಿದರು.

ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಹುಟ್ಟು ಹಬ್ಬದ ನಿಮಿತ್ತ ಚಾಕಲೇಟ್ ವಿತರಿಸುವ ಬದಲಾಗಿ ತಂದೆ-ತಾಯಿ ಹಾಗೂ ಶಿಕ್ಷಕರಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಬೇಕು. ಸ್ನೇಹಿತರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡು ಹುಟ್ಟುಹಬ್ಬ ಆಚರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಹಲ್ಲುಗಳನ್ನು ಉಜ್ಜಿದ ಬಳಿಕ ತೋರು ಬೆರಳಿನಿಂದ ವಸಡುಗಳ ಮೇಲೆ ಉಜ್ಜಿಕೊಳ್ಳುವುದರಿಂದ ರಕ್ತ ಪರಿಚಲನೆ ಸುಗಮಗೊಳ್ಳುತ್ತದೆ. ಅದರಿಂದ ವಸಡು ಮತ್ತು ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ ಆಗುತ್ತದೆ ಎಂದರು. ಹಲ್ಲಿನ ದವಾಖಾನೆಯ ಡಾ.ಶಿಲ್ಪಾ ಬೆಳಗಲಿ, ಕಲ್ಯಾಣಿ ಪನಾಳಕರ, ಸವಿತಾ ಜಾಪಳಮಠ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Share this article