;Resize=(412,232))
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ರೀತಿ ಕಿರುತೆರೆ ನಟಿಗೆ ಸಾಮಾಜಿಕ ಜಾಲತಾಣದಲ್ಲಿ ತನ್ನ ಗುಪ್ತಾಂಗದ ಫೋಟೋ ಹಾಗೂ ವಿಡಿಯೋ ಕಳುಹಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಕಿಡಿಗೇಡಿಯೊಬ್ಬನನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನವೀನ್ ಬಂಧಿತನಾಗಿದ್ದು, ಕೆಲ ದಿನಗಳಿಂದ ಕನ್ನಡ ಹಾಗೂ ತೆಲುಗು ಧಾರವಾಹಿಗಳಲ್ಲಿ ನಟಿಸಿರುವ ಕಲಾವಿದೆಗೆ ನಿರಂತರವಾಗಿ ಅಶ್ಲೀಲ ಸಂದೇಶ ಕಳುಹಿಸಿ ಕಾಟ ಕೊಡುತ್ತಿದ್ದ. ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಮೂರು ತಿಂಗಳ ಹಿಂದೆ ಫೇಸ್ಬುಕ್‌ನಲ್ಲಿ ನಟಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಆಕೆಯ ಸ್ನೇಹ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಈ ರಿಕ್ವೆಸ್ಟ್ ಅನ್ನು ಅವರು ತಿರಸ್ಕರಿಸಿದ್ದರು. ನಂತರ ಅಶ್ಲೀಲ ಸಂದೇಶಗಳನ್ನು ಕಳುಹಿಸಲಾರಂಭಿಸಿದ್ದ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಆತನ ಖಾತೆಯನ್ನು ಅವರು ಬ್ಲಾಕ್ ಮಾಡಿದ್ದರು. ಬಳಿಕ ಬೇರೆ ಖಾತೆ ತೆರೆದು ಮತ್ತೆ ಆರೋಪಿ ಕುಚೋದ್ಯ ಮಾಡುತ್ತಿದ್ದ. ತನ್ನ ಮರ್ಮಾಂಗದ ಪೋಟೋ ಹಾಗೂ ವಿಡಿಯೋ ಕಳುಹಿಸಿ ಆತ ಅಸಭ್ಯವಾಗಿ ನಡೆದುಕೊಂಡಿದ್ದ. ಇದರಿಂದ ಕೆರಳಿದ ಆಕೆ, ನ.1 ರಂದು ನಾಗರಬಾವಿ ಬಳಿ ಆತನನ್ನು ಭೇಟಿಯಾಗಿ ಪೊಲೀಸರಿಗೆ ದೂರು ಕೊಡುವುದಾಗಿ ಎಚ್ಚರಿಸಿದ್ದರು. ಹೀಗಿದ್ದರೂ ತನ್ನ ಕುಚೇಷ್ಟೆಯನ್ನು ಆತ ಮುಂದುವರೆಸಿದ ಕಾರಣ ನಟಿ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ವರ್ತನೆಯಿಂದ ಬೇಸತ್ತು ಆಕೆ, ಅನ್ನಪೂರ್ಣೇಶ್ವರಿ ನಗರ ಪೊಲೀಸರಿಗೆ ದೂರು ನೀಡಿದರು. ಆತನ ಮೊಬೈಲ್ ಸಂಖ್ಯೆ ಆಧರಿಸಿ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಆರೋಪಿ ಖಾಸಗಿ ಕಂಪನಿಯಲ್ಲಿ ಡೆಲಿವರಿ ಮ್ಯಾನೇಜರ್ ಆಗಿದ್ದು, ಕುಟುಂಬದ ಜತೆ ವೈಟ್‌ಫೀಲ್ಡ್ ಬಳಿ ನೆಲೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.