ರಾಮನಗರ: ಮಾಜಿ ಸಿಎಂ ಕುಮಾರಸ್ವಾಮಿಯವರು ತಮ್ಮ ಬೆನ್ನಿಗೆ ಚೂರಿ ಹಾಕಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಬಿಜೆಪಿ ನಾಯಕರನ್ನು ಆದಿ ಚುಂಚನಗಿರಿ ಮಠಕ್ಕೆ ಕರೆದುಕೊಂಡು ಹೋಗಿದ್ದಾರೆ. ನಾನು ವಿಷ ಹಾಕಿದೆ ಎಂದು ಹೇಳುತ್ತಿದ್ದಾರೆ. ನಾನು ಯಾವ ರೀತಿ ವಿಷ ಹಾಕಿದೆ ಎಂದು ಅವರು ಹೇಳಬೇಕಲ್ಲವೇ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸವಾಲು ಹಾಕಿದರು.
ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೂಟಗಲ್ ಹಾಗೂ ಬಿಡದಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಪರವಾಗಿ ಮತಯಾಚನೆ ಮಾಡಿದ ಅವರು, ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಸಿ.ಪಿ.ಯೋಗೇಶ್ವರ್ ಮತ್ತು ವಿಜಯೇಂದ್ರ ಬೀಳಿಸಿದರು. ಈಗ ಅವರ ಜೊತೆಯಲ್ಲಿಯೇ ಕುಮಾರಸ್ವಾಮಿ ಸೇರಿಕೊಂಡಿದ್ದಾರೆ ಎಂದು ಟೀಕಿಸಿದರು.ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಜಾತ್ಯತೀತ ತತ್ವದ ಮೇಲೆ ನಾವು ಜೆಡಿಎಸ್ ಪಕ್ಷಕ್ಕೆ ಬೇಷರತ್ ಬೆಂಬಲ ನೀಡಿ ಎಲ್ಲರ ವಿರೋಧದ ನಡುವೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದೆವು. ಆದರೆ ಅದನ್ನು ಉಳಿಸಿಕೊಳ್ಳಲು ಕುಮಾರಸ್ವಾಮಿ ಅವರಿಂದ ಸಾಧ್ಯವಾಗಲಿಲ್ಲ. ಈಗ ವಿಷ ಹಾಕಿದರೆಂದು ನನ್ನ ಮೇಲೆಯೇ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಸುರೇಶ್ ಪ್ರತಿ ಪಂಚಾಯ್ತಿಗೆ ಭೇಟಿ ನೀಡಿ ಪಂಚಾಯ್ತಿ ಸದಸ್ಯನಂತೆ ಕೆಲಸ ಮಾಡಿಕೊಂಡು ಬಂದಿದ್ದಾರೆ. ಈ ಕ್ಷೇತ್ರದಲ್ಲಿ ಕುಮಾರಸ್ವಾಮಿ, ದೇವೇಗೌಡರು ಸಂಸದರಾಗಿದ್ದರು. ಅವರು ಅಧಿಕಾರದಲ್ಲಿದ್ದಾಗ ರಾಮನಗರ, ಮಾಗಡಿ ಭಾಗದ ಬಡವರಿಗಾಗಿ ಏನಾದರೂ ಮಾಡಿದ್ದಾರಾ? ಬಡವರಿಗೆ ನಿವೇಶನ ಹಂಚಿದ್ದಾರಾ? ಕುಡಿಯುವ ನೀರನ್ನು ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದರು.ಕುಮಾರಸ್ವಾಮಿ 2 ಬಾರಿ ಸಂಸದರು, 2 ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಅವರ ತಂದೆ ಒಮ್ಮೆ ಮುಖ್ಯಮಂತ್ರಿ, ಒಮ್ಮೆ ಪ್ರಧಾನಿಯಾಗಿದ್ದಾರೆ. ಈ ಭಾಗದ ಜನ ದೇವೇಗೌಡರು, ಅವರ ಮಗ ಹಾಗೂ ಸೊಸೆಗೆ ಅಧಿಕಾರ ಕೊಟ್ಟಿದ್ದಾರೆ. ಈಗ ಅಳಿಯನನ್ನು ಕರೆದುಕೊಂಡು ಬಂದಿದ್ದಾರೆ. ಜೆಡಿಎಸ್ ಪಕ್ಷ ಇದ್ದರೂ ಗೌಡರ ಅಳಿಯನನ್ನು ದಳದಿಂದ ಯಾಕೆ ನಿಲ್ಲಿಸಲಿಲ್ಲ. ಅವರ ಪಕ್ಷ ಹಾಗೂ ಚಿಹ್ನೆಗೆ ಶಕ್ತಿ ಇಲ್ಲವೇ? ಇನ್ನು ಕುಮಾರಸ್ವಾಮಿ ಇಲ್ಲಿನ ಜನರನ್ನು ಬಿಟ್ಟು ಮಂಡ್ಯದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ ಏಕೆಂದು ಪ್ರಶ್ನೆ ಮಾಡಿದರು.
ಕೊರೋನಾ ಸಂದರ್ಭದಲ್ಲಿ ಸುರೇಶ್ ಮನೆ ಮನೆಗೆ ಫುಡ್ ಕಿಟ್, ಔಷಧ, ತರಕಾರಿ ಹಂಚಿದರು. ಕೊನೆಗೆ ಅನಾಥ ಶವಗಳಿಗೆ ಅಂತ್ಯಸಂಸ್ಕಾರ ಮಾಡಿದರು. ಕುಮಾರಸ್ವಾಮಿ ಮನೆಯಿಂದ ಹೊರಗೆ ಬರಲಿಲ್ಲ. ಮತ್ತೆ ಯಾವ ಕಾರಣಕ್ಕೆ ಅವರು ಬಂದು ಮತ ಕೇಳುತ್ತಿದ್ದಾರೆ? ಜನಪ್ರತಿನಿಧಿಯಾದವರು ಜನರ ಕಷ್ಟಕ್ಕೆ ಆಗದಿದ್ದರೆ, ಆತ ಮತ್ತೆ ಯಾವ ಕಾರಣಕ್ಕೆ ಜನಪ್ರತಿನಿಧಿಯಾಗಬೇಕು?. ಅಷ್ಟೆಲ್ಲ ಮಾತನಾಡುವ ನೀನೇ ಇಲ್ಲಿ ನಿಲ್ಲಬೇಕಿತ್ತು. ಹೆದರಿಕೊಂಡು ಮಂಡ್ಯಕ್ಕೆ ಹೋಗಿ ಏಕೆ ನಿಲ್ಲಬೇಕಿತ್ತು ಎಂದು ಕೇಳಿದರು.ಸುರೇಶ್ ಅವರು ಸಂಸದರಾಗಿದ್ದಾಗ ನಾನು ಇಂಧನ ಸಚಿವರಾಗಿದ್ದಾಗ ಇಲ್ಲಿ ಶಾಸಕರಿಲ್ಲದಿದ್ದರೂ ಪ್ರತಿ ಇಬ್ಬರು ರೈತರನ್ನು ಸೇರಿಸಿ ಒಂದೊಂದು ಟ್ರಾನ್ಸ್ ಫಾರ್ಮರ್ ಅನ್ನು ಉಚಿತವಾಗಿ ಹಾಕಿಸಬೇಕು ಎಂದು ಕೇಳಿದರು. ನಾನು ಇಲ್ಲಿನ ರೈತರಿಗೆ ಈ ಸೌಲಭ್ಯ ಕಲ್ಪಿಸಿದ್ದೇವೆ. ಅದರಿಂದ ನಿಮಗೆ ಪ್ರಯೋಜನ ಆಗಿದೆಯಲ್ಲವೇ? ನೀವು ನಮಗೆ ಅಧಿಕಾರ ನೀಡುವುದೇ ನಿಮಗೆ ಅನುಕೂಲವಾಗಲಿ, ಒಳ್ಳೆಯದಾಗಲಿ ಎಂದಲ್ಲವೆ ಎಂದು ಹೇಳಿದರು.
ಸುರೇಶ್ ಅವರು ಸತ್ತೇಗಾಲದಿಂದ ಮಾಗಡಿಗೆ ನೀರು ತಂದರೆ ಕುಮಾರಸ್ವಾಮಿ ನಾನು ತಂದಿದ್ದೇನೆ ಎಂದು ಹೇಳುತ್ತಿದ್ದಾರೆ. ಇನ್ನು ಈ ಭಾಗದ ಹಳ್ಳಿಯ ಮಕ್ಕಳು ಶಿಕ್ಷಣಕ್ಕಾಗಿ ನಗರ ಪ್ರದೇಶಕ್ಕೆ ಹೋಗುವುದನ್ನು ತಪ್ಪಿಸಲು ಪಂಚಾಯ್ತಿ ಮಟ್ಟದಲ್ಲಿ ಗುಣಮಟ್ಟದ ಶಾಲೆಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ನಮ್ಮ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಶಾಲೆಗೆ 10 ಕೋಟಿ ವೆಚ್ಚದಲ್ಲಿ 3 ಅಂತಾರಾಷ್ಟ್ರೀಯ ಮಟ್ಟದ ಶಾಲೆಗಳನ್ನು ನಿರ್ಮಿಸಲು ಮುಂದಾಗಿದ್ದೇವೆ. ಇಡೀ ದೇಶದಲ್ಲಿ ಇಂತಹ ಯೋಜನೆ ಇಲ್ಲ. ಇಡೀ ರಾಜ್ಯದಲ್ಲಿ ಇಂತಹ 2 ಸಾವಿರ ಶಾಲೆ ಮಾಡಲು ಮುಂದಾಗಿದ್ದೇವೆ. ಹೀಗೆ ನಿಮ್ಮ ಬದುಕಿನಲ್ಲಿ ಬದಲಾವಣೆ ಮಾಡಲು ನಾವು ಮುಂದಾಗಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.ಡಿ.ಕೆ.ಸುರೇಶ್ 3 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ಪಕ್ಕದಲ್ಲಿ ದಳದ ಮನೆಯವರಿದ್ದರೂ ಅವರಿಗೆ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಹೇಳಿ ಕಾಂಗ್ರೆಸ್‌ಗೆ ಮತಹಾಕಿಸಬೇಕು. ಹೆಂಗಸರು ಮತ ಹಾಕುತ್ತಾರೆ. ಆದರೆ, ಗಂಡು ಮಕ್ಕಳ ಮೇಲೆ ನನಗೆ ಡೌಟು. ನೀವೆಲ್ಲಾ ಡಿ.ಕೆ.ಸುರೇಶ್ ಗೆ ಮತ ಹಾಕಿಸಬೇಕು ಎಂದು ಮಹಿಳೆಯರಲ್ಲಿ ಮನವಿ ಮಾಡಿದರು.
ಈ ವೇಳೆ ಶಾಸಕ ಬಾಲಕೃಷ್ಣ, ಮಾಜಿ ಎಂಎಲ್‌ಸಿ ಸಿ.ಎಂ.ಲಿಂಗಪ್ಪ, ಬಿಡದಿ ಪುರಸಭೆ ಸದಸ್ಯ ಸಿ.ಉಮೇಶ್, ಕುಮಾರ್ , ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜು, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಯರೇಹಳ್ಳಿ ಮಂಜು, ಕೆಎಂಎಫ್ ಮಾಜಿ ಅಧ್ಯಕ್ಷ ನಾಗರಾಜು, ತಾಪಂ ಮಾಜಿ ಅಧ್ಯಕ್ಷ ಮಹದೇವಯ್ಯ, ಕೂಟಗಲ್ ಗ್ರಾಪಂ ಸದಸ್ಯ ಅರೇಹಳ್ಳಿ ಗಂಗಾಧರ್ ಗೌಡ , ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಾ ಮುನಿರಾಜು ಹಾಜರಿದ್ದರು.(ಈ ಕೋಟ್ ಪ್ಯಾನಲ್‌ನಲ್ಲಿ ಬಳಸಿ)ಕೋಟ್ ...............
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಕೂಡ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಮಹಾಲಕ್ಷ್ಮಿ ಯೋಜನೆ ಮೂಲಕ ಬಡ ಕುಟುಂಬದ ಮಹಿಳೆಗೆ ವಾರ್ಷಿಕ 1 ಲಕ್ಷ, ನಿರುದ್ಯೋಗಿ ಯುವಕರಿಗೆ ವಾರ್ಷಿಕ 1 ಲಕ್ಷ ಶಿಷ್ಯ ವೇತನ, 25 ಲಕ್ಷದವರೆಗೆ ಆರೋಗ್ಯ ವಿಮೆ, ರೈತರ ಸಾಲ ಮನ್ನಾ ಹಾಗೂ ಸ್ವಾಮಿನಾಥನ್ ಆಯೋಗದ ಅನುಸಾರ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಲು ತೀರ್ಮಾನಿಸಿದ್ದಾರೆ.- ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿಬಾಕ್ಸ್.............
ನೋಡೋಣ ಇನ್ನೂ ಏನೇನ್ ದಾಳಿ ಮಾಡ್ತಾರೋರಾಮನಗರ: ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಕೆಲಸದ ಮುಂದೆ ಗಾಳಿಯಲ್ಲಿ ತೂರಿ ಹೋಗುತ್ತೇವೆ ಎಂಬ ಭಯ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಸಿಎಂ ಕುಮಾರಸ್ವಾಮಿಗೆ ಕಾಡಿದ್ದರಿಂದಲೇ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಜನ ಮೂರ್ಖರಲ್ಲ, ಅವರೇ ತೀರ್ಮಾನ ಮಾಡುತ್ತಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಮತ್ತು ಮೈಸೂರಿನಲ್ಲಿ ದೇವೇಗೌಡ, ಕುಮಾರಸ್ವಾಮಿ ಅವರೇ ಭಾಷಣ ಮಾಡಿ ಬರಗಾಲಕ್ಕೆ ಪರಿಹಾರ ಕೊಡಲಿಲ್ಲ ಎಂದು ಹೇಳಿದ್ದಾರೆ. ಈಗ ಬಿಜೆಪಿ ಜೊತೆ ಸೇರಿಕೊಂಡಿದ್ದು, ಅವರದು ಸ್ವಾರ್ಥದ ರಾಜಕಾರಣ ಅಲ್ಲವೇ ಎಂದು ಪ್ರಶ್ನಿಸಿದರು.ಪ್ರಧಾನಮಂತ್ರಿಗೆ ಚೊಂಬು ತೋರಿಸಿ ಶೂನ್ಯ ಕೊಡುಗೆ ಅಂತ ಹೇಳಿದ್ದೇವೆ. ಈಗ ಬೇರೆ ಏನೋ ತಿರುಗಿಸಿ ಹೇಳುತ್ತಿದ್ದಾರೆ. ಜಿಲ್ಲೆಗೆ ಏನಾದರು ಅಭಿವೃದ್ಧಿ ಮಾಡಿದ್ದರೆ ತೋರಿಸಲಿ. ಈ ಹಿಂದೆ ಇದೇ ರೀತಿ ಡಿ.ಕೆ.ಸುರೇಶ್ ವಿರುದ್ಧ ಅನಿತಾ ಕುಮಾರಸ್ವಾಮಿ ಅವರನ್ನು ನಿಲ್ಲಿಸಿದ್ದರು. ಈಗ ಬೇರೆ ಏನು ನಡೆಯುತ್ತಿಲ್ಲ. ಚಿಹ್ನೆ ಬದಲಾಗಿದೆ ಅಷ್ಟೇ. ಚನ್ನಪಟ್ಟಣದಲ್ಲಿ ಹೆಚ್ಚು ಕಾರ್ಯಕರ್ತರು ಬರುತ್ತಿದ್ದಾರೆ. ಜೆಡಿಎಸ್ - ಬಿಜೆಪಿ ನಡುವೆ ಹೊಂದಾಣಿಕೆ ಸಮರ್ಪಕವಾಗಿ ಆಗಿಲ್ಲ ಅಂತ ಯೋಗೇಶ್ವರ್‌ಗೂ ಗೊತ್ತಾಗಿದೆ ಎಂದು ವ್ಯಂಗ್ಯವಾಡಿದರು.
ಚುನಾವಣೆ ಸಂದರ್ಭದಲ್ಲಿ ಐಟಿ ದಾಳಿ ವಿಚಾರದ ಪ್ರಶ್ನೆಗೆ ದಾಳಿ ಮಾಡುತ್ತಲೇ ಇದ್ದಾರೆ. ಮಾಡಿಸುತ್ತಲೇ ಇದ್ದಾರೆ. ನಿನ್ನೆ ದುಡ್ಡು ಸಿಕ್ಕಿತ್ತು ಅದನ್ನು ಬಿಜೆಪಿಯವರು 3 ವರ್ಷಗಳ ಹಿಂದೆ ಡ್ರಾ ಮಾಡಿದ್ದರಂತ ಲೆಟರ್ ಕೊಟ್ಟಿದ್ದಾರೆ. ನೋಡೋಣ ಇನ್ನೂ ಐಟಿಯವರು ಏನೇನ್ ಮಾಡುತ್ತಾರೆ. ಅದೊಂದು ಕಾಗದ ತೋರಿಸಿ 100 ಕಡೆ ಹಣ ಹಂಚಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಆರೋಪಿಸಿದರು.21ಕೆಆರ್ ಎಂಎನ್ 5,6.ಜೆಪಿಜಿ
5.ಬಿಡದಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚುನಾವಣಾ ಪ್ರಚಾರ ನಡೆಸಿದರು.6.ಬಿಡದಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚುನಾವಣಾ ಪ್ರಚಾರದಲ್ಲಿ ಸೇರಿರುವ ಜನಸ್ತೋಮ.