ದೇವಾಲಯದ ಆದಾಯ ಅದೇ ದೇಗುಲಕ್ಕೆ: ಸರ್ಕಾರದ ಫಲಕ

KannadaprabhaNewsNetwork |  
Published : Nov 14, 2024, 12:52 AM IST

ಸಾರಾಂಶ

ದೇವಾಲಯಗಳ ಆದಾಯವನ್ನು ಅದೇ ದೇವಾಲಯಕ್ಕೆ ಬಳಸುವ ಬಗ್ಗೆ ನಾಮಫಲಕ ಅಳವಡಿಕೆ ಸೇರಿ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯದ ಆಸ್ತಿಯನ್ನು ಸರ್ವೆ ಮಾಡಿ, ಒತ್ತುವರಿ ತೆರವು ಮಾಡಿ ಆಸ್ತಿಗಳನ್ನು ರಕ್ಷಿಸಲು ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್‌ ಮಹತ್ವದ ನಿರ್ಣಯ ಕೈಗೊಂಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ದೇವಾಲಯಗಳ ಆದಾಯವನ್ನು ಅದೇ ದೇವಾಲಯಕ್ಕೆ ಬಳಸುವ ಬಗ್ಗೆ ನಾಮಫಲಕ ಅಳವಡಿಕೆ ಸೇರಿ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯದ ಆಸ್ತಿಯನ್ನು ಸರ್ವೆ ಮಾಡಿ, ಒತ್ತುವರಿ ತೆರವು ಮಾಡಿ ಆಸ್ತಿಗಳನ್ನು ರಕ್ಷಿಸಲು ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್‌ ಮಹತ್ವದ ನಿರ್ಣಯ ಕೈಗೊಂಡಿದೆ.

ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಯಿತು.

ದೇವಸ್ಥಾನದಲ್ಲಿ ಫಲಕ:

ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ತಡೆಯಲು ದೇವಾಲಯಗಳ ಆದಾಯವನ್ನು ಖರ್ಚು-ವೆಚ್ಚ ಸೇರಿದಂತೆ ಅಭಿವೃದ್ಧಿಗೆ ಬಳಸುತ್ತಿರುವ ಬಗ್ಗೆ ಜನತೆಗೆ ತಿಳಿಸಲು ಪರಿಷತ್‌ನಲ್ಲಿ ಚರ್ಚೆಯಾಯಿತು. ಈ ಸಂಬಂಧ ಫಲಕ ಅಳವಡಿಸಲು ಎಲ್ಲ ದೇವಸ್ಥಾನಗಳ ವ್ಯವಸ್ಥಾಪನಾ ಮಂಡಳಿಗೆ ಸೂಚಿಸಲು ಮುಂದಾಗುವ ಬಗ್ಗೆ ಸಚಿವರು ಸೂಚಿಸಿದರು. ಅದರ ಜೊತೆಗೆ ಸರ್ಕಾರದಿಂದ ಮುಜರಾಯಿ ಇಲಾಖೆಯಡಿ ಭಕ್ತರಿಗೆ ಕಲ್ಪಿಸಲಾಗುವ ವಿವಿಧ ಯಾತ್ರೆಗಳ ಸಹಾಯಧನ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಕುರಿತು ಮಾಹಿತಿ ಹಾಗೂ ಸಿಬ್ಬಂದಿಗೆ ನೀಡಲಾಗುತ್ತಿರುವ ಸೌಲಭ್ಯದ ಬಗ್ಗೆ ಫಲಕದಲ್ಲಿ ವಿವರಿಸುವಂತೆ ತಿಳಿಸಿದರು.

ಇದರ ಜೊತೆಗೆ ಮುಖ್ಯವಾಗಿ ದೇವಸ್ಥಾನಗಳ ಆಸ್ತಿ ಸರ್ವೆ ಮಾಡಿ ಒತ್ತುವರಿ ತೆರವಿಗೆ ಕ್ರಮ ವಹಿಸಬೇಕು. ಈ ಸಂಬಂಧ ಸಮರ್ಪಕ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಬೆಂಗಳೂರಿನ ಬಹುಮಹಡಿ ಕಟ್ಟಡದ ಎದುರು ಇರುವ ಮುಜರಾಯಿ ಇಲಾಖೆಗೆ ಸೇರಿದ ಜಾಗದಲ್ಲಿ ₹ 10 ಕೋಟಿ ವೆಚ್ಚದಲ್ಲಿ ಧಾರ್ಮಿಕ ಸೌಧ ನಿರ್ಮಿಸಲು ತೀರ್ಮಾನ ಕೈಗೊಳ್ಳಲಾಯಿತು.

ಇನ್ನು 120 ವರ್ಷ ಹಳೆಯ ಮೈಸೂರಿನ ಸಂಸ್ಕೃತ ಮಹಾರಾಜ ಕಾಲೇಜಿನ ಸಂಸ್ಥೆಯ ಸಂಪೂರ್ಣ ಜೀರ್ಣೋದ್ಧಾರ ಮಾಡಲು ಅಗತ್ಯವಿರುವ ಅನುದಾನ ಬಿಡುಗಡೆ ಮಾಡಬೇಕಿದೆ. ದೇವಾಲಯಗಳ ವ್ಯವಸ್ಥಾಪನಾ ಸಮಿತಿಗಳ ಅಧಿಕಾರಾವಧಿ ಮುಗಿದ ಬಳಿಕ ಆಡಳಿತಾಧಿಕಾರಿ ನೇಮಕ ಮಾಡಲು, ಅರ್ಜಿ ಸ್ವೀಕಾರವಾಗಿರುವ 28 ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ರಚಿಸಲು, ಅರ್ಜಿ ಸ್ವೀಕಾರವಾಗದೇ ಇರುವ 13 ದೇವಾಲಯಗಳಿಗೆ ಪುನಃ ಅರ್ಜಿ ಕರೆಯಲು ಹಾಗೂ ಬೇಲೂರು ಶ್ರೀ ಚನ್ನಕೇಶವ ದೇವಾಲಯದ ಖಾಲಿ ಇರುವ ವ್ಯವಸ್ಥಾಪನಾ ಸಮಿತಿಗೆ ಸದಸ್ಯರನ್ನು ನೇಮಕ ಮಾಡಲು ಸಚಿವರು ತಿಳಿಸಿದರು.

ಮಕ್ಕಳಿಗೆ ನೀಡುತ್ತಿರುವ ವಿದ್ಯಾ ಸಹಾಯ ಧನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಈಗಾಗಲೇ ಮುಕ್ತಾಯವಾಗಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿಗೆ ಅನುಕೂಲವಾಗುವಂತೆ ಡಿಸೆಂಬರ್ 31ರವರೆಗೂ ಕಾಲಾವಕಾಶ ನೀಡಿ, ಇದರ ಸದುಪಯೋಗ ಪಡೆದುಕೊಳ್ಳಲು ಪ್ರಚಾರ ನೀಡುವಂತೆ ತೀರ್ಮಾನಿಸಲಾಯಿತು. ವೈಷ್ಣೋದೇವಿ ಯಾತ್ರಿಕರಿಗೆ ₹5000 ಸಹಾಯಧನ:

ವೈಷ್ಣೋದೇವಿಗೆ ಭೇಟಿ ನೀಡುವ ಕರ್ನಾಟಕ ರಾಜ್ಯದ ಯಾತ್ರಾರ್ಥಿಗಳಿಗೆ ತಲಾ ₹5000 ಸಹಾಯ ಧನ ನೀಡಲು ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್‌ ತೀರ್ಮಾನಿಸಿತು. ಈಗಾಗಲೇ ಭಾರತ್‌ ಗೌರವ್‌ ಯಾತ್ರೆಯಡಿ ಕಾಶಿ, ಗಯಾ, ಅಯೋಧ್ಯೆ, ಪ್ರಯಾಗ್‌ರಾಜ್‌ ಸೇರಿ ಇತರೆಡೆ ಯಾತ್ರೆ ಕೈಗೊಂಡವರಿಗೆ ಸಹಾಯಧನ ನೀಡಲಾಗುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಗೆಹರಿಸಿಕೊಳ್ಳಲು ನಮ್ಮಲ್ಲಿ ಸಮಸ್ಯೆಗಳೇ ಇಲ್ಲ : ಡಿಕೆಶಿ!
ರಾಜಣ್ಣ ನೇಮಿಸಿದ್ದು ನಾನೇ ಎಂದ ಡಿಕೆಗೆ ಸಿದ್ದು ಟಾಂಗ್‌