ದೇಗುಲ, ದರ್ಗಾ, ವಸತಿ ಪ್ರದೇಶ ಸ್ವಾಧೀನ ಮಾಡಲ್ಲ

KannadaprabhaNewsNetwork |  
Published : Apr 09, 2026, 01:15 AM IST
8ಕೆಆರ್ ಎಂಎನ್ 1.ಜೆಪಿಜಿಮಂಚನಬೆಲೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳನ್ನು ವೀಕ್ಷಿಸಿ ಶಾಸಕ ಇಕ್ಬಾಲ್ ಹುಸೇನ್ ರವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. | Kannada Prabha

ಸಾರಾಂಶ

ರಾಮನಗರ: ಅರ್ಕಾವತಿ ನದಿ ದಂಡೆ ಅಭಿವೃದ್ಧಿ (ಅರ್ಕಾವತಿ ರಿವರ್ ಫ್ರಂಟ್ ಡೆವಲಪ್‌ಮೆಂಟ್) ಯೋಜನೆಗೆ ಅರ್ಕೇಶ್ವರ ದೇಗಲು, ಪಿರಾನ್ ಷಾ ವಲಿ ದರ್ಗಾ ಸೇರಿದಂತೆ ಧಾರ್ಮಿಕ ಸ್ಥಳಗಳಾಗಲಿ ಹಾಗೂ ವಸತಿ ಪ್ರದೇಶಗಳಾಗಲಿ ಯಾವುದೇ ಕಾರಣಕ್ಕೂ ಸ್ವಾಧೀನ ಪಡಿಸಿಕೊಳ್ಳುವುದಿಲ್ಲ. ಈ ಬಗ್ಗೆ ಭಕ್ತರು ಮತ್ತು ನಾಗರಿಕರು ಆತಂಕ ಪಡುವುದು ಬೇಡ ಎಂದು ಶಾಸಕ ಇಕ್ಬಾಲ್ ಹುಸೇನ್ ಭರವಸೆ ನೀಡಿದರು

ರಾಮನಗರ: ಅರ್ಕಾವತಿ ನದಿ ದಂಡೆ ಅಭಿವೃದ್ಧಿ (ಅರ್ಕಾವತಿ ರಿವರ್ ಫ್ರಂಟ್ ಡೆವಲಪ್‌ಮೆಂಟ್) ಯೋಜನೆಗೆ ಅರ್ಕೇಶ್ವರ ದೇಗಲು, ಪಿರಾನ್ ಷಾ ವಲಿ ದರ್ಗಾ ಸೇರಿದಂತೆ ಧಾರ್ಮಿಕ ಸ್ಥಳಗಳಾಗಲಿ ಹಾಗೂ ವಸತಿ ಪ್ರದೇಶಗಳಾಗಲಿ ಯಾವುದೇ ಕಾರಣಕ್ಕೂ ಸ್ವಾಧೀನ ಪಡಿಸಿಕೊಳ್ಳುವುದಿಲ್ಲ. ಈ ಬಗ್ಗೆ ಭಕ್ತರು ಮತ್ತು ನಾಗರಿಕರು ಆತಂಕ ಪಡುವುದು ಬೇಡ ಎಂದು ಶಾಸಕ ಇಕ್ಬಾಲ್ ಹುಸೇನ್ ಭರವಸೆ ನೀಡಿದರು.

ಮಂಚನಬೆಲೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರ್ಕೇಶ್ವರ ದೇವಾಲಯ ಮತ್ತು ಪೀರನ್ ಷಾ ವಲಿ ದರ್ಗಾ ರಾಮನಗರ ಇತಿಹಾಸದ ಪುಟದಲ್ಲಿರುವ ಪ್ರಮುಖ ಚಿತ್ರಣಗಳು. ಅವು ನಮಗೆಲ್ಲ ಎರಡು ಕಣ್ಣುಗಳಿದ್ದಂತೆ. ಪವಿತ್ರವಾದ ಆ ಧಾರ್ಮಿಕ ಕೇಂದ್ರಗಳಿಗಾಗಲಿ ಮತ್ತು ವಸತಿ ಬಡಾವಣೆಗಳಿಗಾಗಲಿ ಧಕ್ಕೆಯಾಗದಂತೆ ಅರ್ಕಾವತಿ ನದಿ ದಂಡೆಗೆ ಹೊಸ ಸ್ಪರ್ಶ ನೀಡುತ್ತೇವೆ ಎಂದರು.

ಧಾರ್ಮಿಕ ಕೇಂದ್ರಗಳು ಮತ್ತಷ್ಟು ಸೌಂದರ್ಯೀಕರಣ:

ನಾನು ಈ ಮಣ್ಣಿನ ಮಗ. ಇಲ್ಲಿನ ಜನರೊಂದಿಗೆ ಸಹೋದರನಂತೆ ಬಾಳ್ವೆ ನಡೆಸುತ್ತಿದ್ದೇನೆ. ಇನ್ನು ಅರ್ಕೇಶ್ವರ ದೇವಾಲಯ ಮತ್ತು ಪೀರನ್ ಷಾ ವಲಿ ದರ್ಗಾಗಳು ಈ ನೆಲದ ಅಸ್ಮಿತೆಯ ಪ್ರತೀಕ. ಇವುಗಳ ಕಾರಣದಿಂದಾಗಿಯೇ ರಾಮನಗರದ ಜನರು ಸೌಹಾರ್ದತೆಯಿಂದ ಸಹೋದರರಂತೆ ಜೀವನ ನಡೆಸುತ್ತಿದ್ದಾರೆ. ಈ ಯೋಜನೆ ಜೊತೆಯಲ್ಲಿಯೇ ಆ ಎರಡೂ ಧಾರ್ಮಿಕ ಕೇಂದ್ರಗಳನ್ನು ಮತ್ತಷ್ಟು ಸೌಂದರ್ಯೀಕರಣಗೊಳಿಸಿ ಅದರ ಸೊಬಗನ್ನು ಹೆಚ್ಚಿಸುತ್ತೇವೆಯೇ ಹೊರತು ಅವುಗಳಿಗೆ ಧಕ್ಕೆ ತರುವ ಕೆಲಸವನ್ನು ಯಾವುದೇ ಕಾರಣಕ್ಕೂ ಮಾಡುವುದಿಲ್ಲ ಎಂದು ಹೇಳಿದರು.

ಈಗಾಗಲೇ ಮುಜರಾಯಿ ಇಲಾಖೆಯಿಂದ ಅರ್ಕೇಶ್ವರ ದೇವಾಲಯಕ್ಕೆ 50 ಲಕ್ಷ ಹಾಗೂ ವಕ್ಫ್ ಮಂಡಳಿಯಿಂದ ಪೀರನ್ ಷಾ ವಲಿ ದರ್ಗಾಕ್ಕೆ 25 ಲಕ್ಷ ರುಪಾಯಿ ಅನುದಾನ ಮಂಜೂರು ಮಾಡಿಸಿದ್ದೇನೆ. ಹಾಗೊಂದು ವೇಳೆ

ಅರ್ಕಾವತಿ ರಿವರ್ ಫ್ರಂಟ್ ಡೆವಲಪ್‌ಮೆಂಟ್ ಗೆ ಈ ಧಾರ್ಮಿಕ ಕೇಂದ್ರಗಳನ್ನು ಸ್ವಾಧೀನ ಪಡಿಸಿಕೊಳ್ಳುವುದಾಗಿದ್ದರೆ ಅನುದಾನ ಏಕೆ ಬಿಡುಗಡೆ ಮಾಡಿಸುತ್ತಿದ್ದೆ ಎಂದು ಇಕ್ಬಾಲ್ ಹುಸೇನ್ ಪ್ರಶ್ನಿಸಿದರು.

ನಾನೂ ದೈವ ಭಕ್ತ. ದಿನಕ್ಕೆ ಮಸೀದಿಯಲ್ಲಿ 5 ಬಾರಿ ನಮಾಜ್ ಮಾಡಿ ಪ್ರಾರ್ಥನೆ ಸಲ್ಲಿಸಿದರೆ, ಕನಿಷ್ಠವೆಂದರು 20 ಹಿಂದೂ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತೇನೆ. ಹಾಗಾಗಿ ಪವಿತ್ರವಾದ ಅರ್ಕೇಶ್ವರ ದೇವಾಲಯ ಮತ್ತು ಪೀರನ್ ಷಾ ವಲಿ ದರ್ಗಾಗಳಿಗೆ ಧಕ್ಕೆ ತಂದು ಭಕ್ತರ ಭಾವನೆಗಳಿಗೆ ನೋವುಂಟು ಮಾಡುವ ಕೆಲಸವನ್ನು ನಾನೆಂದಿಗೂ ಮಾಡುವುದಿಲ್ಲ ಎಂದು ಹೇಳಿದರು.

ಅಪಪ್ರಚಾರಕ್ಕೆ ಕಿಡಿಗೊಡಬೇಡಿ:

ಯಾವುದನ್ನು ಯಾವ ರೀತಿ ಉಳಿಸಿಕೊಂಡು ಅಭಿವೃದ್ಧಿ ಕೆಲಸ ಮಾಡಬೇಕೆಂಬ ವಿವೇಚನೆ ಮತ್ತು ಪರಿಜ್ಞಾನ ನನಗೂ ಇದೆ. ನಾನು ಎರಡೂ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಅದು ಎಲ್ಲ ಜವಾಬ್ದಾರಿಯೂ ಹೌದು. ಆದರೆ, ಯಾರೊ ಕೆಲವರು ವಿನಾ ಕಾರಣ ತಮ್ಮ ಸ್ವಾರ್ಥಕ್ಕಾಗಿ ಗಾಳಿಯಲ್ಲಿ ಗುಂಡು ಹೊಡೆದು ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಯಾರೂ ಕಿವಿಗೊಡಬಾರದು ಎಂದು ನಾಗರೀಕರಲ್ಲಿ ಮನವಿ ಮಾಡಿದರು.

ಅರ್ಕಾವತಿ ರಿವರ್ ಫ್ರಂಟ್ ಡೆವಲಪ್‌ಮೆಂಟ್ ಯೋಜನೆಯನ್ನು 157 ಕೋಟಿ ರುಪಾಯಿ ವೆಚ್ಚದಲ್ಲಿ ಅನುಷ್ಠಾನಕ್ಕೆ ತರುತ್ತಿದ್ದೇವೆ. ಇದರಲ್ಲಿ ಹೈಟೆಕ್ ಪಾರ್ಕ್ ನಿರ್ಮಾಣಗೊಳ್ಳಲಿದೆ. ಈ ಯೋಜನೆ ಭಾಗವಾಗಿ 28 ಎಕರೆ ಭೂ ಸ್ವಾಧೀನಕ್ಕಾಗಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಎಡ ಮತ್ತು ಬಲ ಭಾಗದಲ್ಲಿ ಮೊದಲು 75 ಮೀಟರ್ ವರೆಗೆ ಇದ್ದ ಬಫರ್ ಜೋನ್ ಪರಿಮಿತಿಯನ್ನು ಕಾಂಗ್ರೆಸ್ ಸರ್ಕಾರ ಬಂದ ಮೇಲೆ ನಾನೇ ಹೋರಾಟ ನಡೆಸಿ 30 ಮೀಟರ್ ಗೆ ಸೀಮಿತಗೊಳಿಸಿದ್ದೇನೆ.

ಯೋಜನೆ ಅಚ್ಚುಕಟ್ಟಾಗಿ ಅನುಷ್ಠಾನ :

ಈಗ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದ್ದು, ಆಕ್ಷೇಪಣೆ ಸಲ್ಲಿಸಲು ಏಪ್ರಿಲ್ 20ರವರೆಗೆ ಕಾಲಾವಕಾಶ ನೀಡಿದ್ದೇವೆ. ಈಗಾಗಲೇ 150 ಆಕ್ಷೇಪಣೆಗಳು ಬಂದಿದ್ದು, ಎಲ್ಲ ಆಕ್ಷೇಪಣೆಗಳನ್ನು ಪರಿಶೀಲನೆ ಮಾಡುತ್ತೇವೆ. ಆನಂತರ ಅಧಿಕಾರಿಗಳೊಂದಿಗೆ ಚರ್ಚಿಸಿ ಧಾರ್ಮಿಕ ಕೇಂದ್ರಗಳು ಹಾಗೂ ವಸತಿ ಬಡಾವಣೆಗಳಿಗೆ ತೊಂದರೆ ಆಗದಂತೆ ಯೋಜನೆ ಅಚ್ಚುಕಟ್ಟಾಗಿ ಅನುಷ್ಠಾನಗೊಳಿಸುತ್ತೇವೆ ಎಂದು ಹೇಳಿದರು.

ಪ್ರಾಥಮಿಕ ಅಧಿಸೂಚನೆ ತರುವಾಯ ಅಂತಿಮ ಅಧಿಸೂಚನೆ ಹೊರ ಬೀಳಲಿದೆ. ಅದಕ್ಕೂ ಮೊದಲೇ ಜನರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇನೆ. ಆ ಕೆಲಸಗಳನ್ನು ಮಾಡುವುದು ಶಾಸಕರ ಜವಾಬ್ದಾರಿಯೇ ಹೊರತು ಬೇರೆಯವರದಲ್ಲ. ಕೆಲವರು ಉದ್ದೇಶಪೂರ್ವಕವಾಗಿಯೇ ಜನರಿಗೆ ತಪ್ಪು ಮಾಹಿತಿ ನೀಡಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಇಕ್ಬಾಲ್ ಹುಸೇನ್ ಕಿಡಿಕಾರಿದರು.

ಈ ಸಂದರ್ಭದಲ್ಲಿ ಮುಖಂಡರಾದ ವಾಸು, ಚಿಕ್ಕಸ್ವಾಮಿ, ಗೋವಿಂದರಾಜು, ಶಿವಣ್ಣ ಇದ್ದರು.

ಕೋಟ್ .................

ಅರ್ಕಾವತಿ ರಿವರ್ ಫ್ರಂಟ್ ಡೆವಲಪ್‌ಮೆಂಟ್ ಯೋಜನೆಯ ಭೂ ಸ್ವಾಧೀನ ವಿಚಾರವಾಗಿ ನಾಗರಿಕರಿಗೆ ಏನೇ ಅನುಮಾನ, ಸಮಸ್ಯೆಗಳಿದ್ದರೆ ಶಾಸಕರ ಬಳಿ ಚರ್ಚಿಸಬೇಕೇ ಹೊರತು ಇನ್ಯಾರದೊ ಬಳಿ ಅಲ್ಲ. ನಾನು ಆ ವಿಚಾರವನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೇನೆ. ವಿನಾಃ ಕಾರಣ ಯಾರ್ಯಾರೊ ಮಾತನಾಡಿದರೆ ಏನು ಪ್ರಯೋಜನ ಆಗುವುದಿಲ್ಲ. ಎಲ್ಲರು ತಮ್ಮ ಇತಿಮಿತಿಯೊಳಗೆ ಕೆಲಸ ಮಾಡುವುದನ್ನು ಕಲಿಯಬೇಕು.

-ಇಕ್ಬಾಲ್ ಹುಸೇನ್, ಶಾಸಕರು, ರಾಮನಗರ ಕ್ಷೇತ್ರ

8ಕೆಆರ್ ಎಂಎನ್ 1.ಜೆಪಿಜಿ

ಮಂಚನಬೆಲೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳನ್ನು ವೀಕ್ಷಿಸಿ ಶಾಸಕ ಇಕ್ಬಾಲ್ ಹುಸೇನ್ ರವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

700 ಅಹವಾಲು ಸ್ವೀಕರಿಸಿದ ಸಚಿವ ಡಾ: ಜಿ. ಪರಮೇಶ್ವರ
ಜನಪದ ಪೂರ್ವಜನರು ನೀಡಿರುವ ದೊಡ್ಡ ಕೊಡುಗೆ