ಕನ್ನಡಪ್ರಭ ವಾರ್ತೆ ಅರಸೀಕೆರೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ಕನಿಷ್ಠ ಮಟ್ಟದ ಸೌಲಭ್ಯಗಳೂ ಇಲ್ಲದೆ ಪ್ರಯಾಣಿಕರು ನರಳುವಂತಾಗಿದೆ ಎಂದು ಕಿಡಿಕಾರಿದರು.
ಬಸ್ ನಿಲ್ದಾಣ ಸ್ಥಳಾಂತರಿಸುವಾಗ ಪರ್ಯಾಯ ವ್ಯವಸ್ಥೆ ಇರಬೇಕಿತ್ತು. ಆದರೆ ಇಲ್ಲಿ ಕುಡಿಯುವ ನೀರು ಇಲ್ಲ, ಶೌಚಾಲಯ ವ್ಯವಸ್ಥೆ ಸಮರ್ಪಕವಾಗಿಲ್ಲ, ಪ್ರಯಾಣಿಕರಿಗೆ ನೆರಳು ಇಲ್ಲ, ಕುಳಿತುಕೊಳ್ಳಲು ವ್ಯವಸ್ಥೆ ಇಲ್ಲ. ಮಹಿಳೆಯರು, ವೃದ್ಧರು, ಮಕ್ಕಳು ಹಾಗೂ ದೂರ ಪ್ರಯಾಣಿಕರು ಭಾರೀ ಸಂಕಷ್ಟ ಅನುಭವಿಸುತ್ತಿದ್ದಾರೆ, ಎಂದು ಹೇಳಿದರು.ಅದೇ ವೇಳೆ, ಆಡಳಿತಕ್ಕೆ ಪರ್ಯಾಯ ಸ್ಥಳದ ಸಲಹೆಯನ್ನೂ ನೀಡಿದ ಶಿವನ್ ರಾಜ್, ಡಿಪೋ ಪಕ್ಕದಲ್ಲಿ ಪ್ರತಿಯೊಂದು ಅಗತ್ಯತೆಗಳನ್ನು ಹೊಸದಾಗಿ ಕಲ್ಪಿಸಿ ಜನರನ್ನು ಕಷ್ಟಪಡಿಸುವ ಬದಲು, ಎಪಿಎಂಸಿ ಬಳಿ ಇರುವ ಮುಖ್ಯ ಪ್ರವೇಶ ದ್ವಾರದಲ್ಲಿ ತಾತ್ಕಾಲಿಕ ಬಸ್ ನಿಲ್ದಾಣವಾಗಿ ಮಾರ್ಪಾಡು ಮಾಡಿದ್ದರೆ ಉತ್ತಮವಾಗುತ್ತಿತ್ತು. ಅಲ್ಲಿ ಈಗಾಗಲೇ ನೆರಳಿಗೆ ಛಾವಣಿ ಇದೆ, ಬಸ್ ನಿಲ್ಲಿಸಲು ಸಾಕಷ್ಟು ಜಾಗ ಇದೆ, ಉತ್ತಮ ರಸ್ತೆ ಸಂಪರ್ಕವಿದೆ, ಆಟೋ ಚಾಲಕರಿಗೂ ಆಟೋ ನಿಲ್ದಾಣಕ್ಕೆ ಅವಕಾಶ ಸಿಗುತ್ತಿತ್ತು. ಜೊತೆಗೆ ಕುಳಿತುಕೊಳ್ಳಲು ಜಾಗ ಮತ್ತು ಶೌಚಾಲಯ ವ್ಯವಸ್ಥೆ ಕಲ್ಪಿಸಿದ್ದರೆ ಇಷ್ಟೊಂದು ತೊಂದರೆ, ಗೊಂದಲ ಮತ್ತು ಜನರಿಗೆ ಕಷ್ಟದ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ ಎಂದು ಮನವಿ ಮಾಡಿದರು.
ನಾವು ಪ್ರತಿಭಟನೆ ಮಾಡಿದಾಗ ‘ಧಿಕ್ಕಾರ ಯಾಕೆ ಕೂಗುತ್ತೀರಿ?’ ಎಂದು ಪ್ರಶ್ನಿಸಲಾಗುತ್ತಿದೆ. ಆದರೆ ಜನರ ಸಮಸ್ಯೆ ಬಗ್ಗೆ ಧ್ವನಿ ಎತ್ತುವುದು ತಪ್ಪೇನು? ನಮಗೂ 80 ಸಾವಿರಕ್ಕೂ ಹೆಚ್ಚು ಮತಗಳ ಬೆಂಬಲ ಇದೆ. ಜನರು ನಮಗೆ ಬೆಂಬಲ ಕೊಟ್ಟಿದ್ದಾರೆಂದರೆ, ಅವರ ಪರವಾಗಿ ನಾವು ಪ್ರಶ್ನಿಸಲೇಬೇಕು. ಇದು ರಾಜಕೀಯ ಪ್ರದರ್ಶನವಲ್ಲ, ಜನರ ಪರ ಹೋರಾಟ ಎಂದು ಸ್ಪಷ್ಟಪಡಿಸಿದರು.
ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ತಕ್ಷಣವೇ ಮೂಲಭೂತ ಸೌಲಭ್ಯಗಳನ್ನು ಒದಗಿಸಿ, ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆ ಸುಧಾರಿಸಬೇಕು ಎಂದು ಆಗ್ರಹಿಸಿದರು.
ಶಾಸಕರಾದ ಕೆ.ಎಂ. ಶಿವಲಿಂಗೇಗೌಡರು ಕ್ಷೇತ್ರಕ್ಕೆ ₹35 ಕೋಟಿ ಅನುದಾನ ತಂದಿದ್ದೇವೆ ಎಂದು ಹೇಳುತ್ತಾರೆ. ಅಷ್ಟು ದೊಡ್ಡ ಮೊತ್ತದ ಯೋಜನೆ ಇದ್ದಾಗ, ಜನರು ಕಷ್ಟಪಡುವಂತಹ ತಾತ್ಕಾಲಿಕ ಬಸ್ ನಿಲ್ದಾಣ ಏಕೆ ನಿರ್ಮಿಸಲಾಗಿದೆ? ಮನೆ ಕಟ್ಟುವಾಗಲೂ ಯೋಜನೆ ಮಾಡಿ ಕಟ್ಟುತ್ತಾರೆ, ಆದರೆ ಸಾವಿರಾರು ಜನರು ಬಳಕೆ ಮಾಡುವ ಬಸ್ ನಿಲ್ದಾಣದ ವಿಷಯದಲ್ಲಿ ಏಕೆ ಇಷ್ಟು ನಿರ್ಲಕ್ಷ್ಯ ಎಂದು ಪ್ರಶ್ನಿಸಿದರು.