ಕೈಕೊಟ್ಟ ಟೆಂಡರ್‌ದಾರ: ಅಧಿಕಾರಿಗಳಿಗೆ ಪುಷ್ಪಮೇಳ ನಿರ್ವಹಣೆ ಭಾರ

KannadaprabhaNewsNetwork |  
Published : Jan 25, 2026, 01:30 AM IST
೨೪ಕೆಎಂಎನ್‌ಡಿ-೨ಫಲಪುಷ್ಪ ಪ್ರದರ್ಶನದಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳೇ ನಿಂತು ನಿರ್ವಹಣೆ ಮಾಡುತ್ತಿರುವ ದೃಶ್ಯ. | Kannada Prabha

ಸಾರಾಂಶ

ಅದಕ್ಕಾಗಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಅವರು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಕೆ.ಎನ್.ರೂಪಶ್ರೀ ಸೇರಿದಂತೆ ಎಲ್ಲಾ ಇಲಾಖೆ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಯಾವ ಯಾವ ಇಲಾಖೆಯ ಯೋಜನೆಗಳ ಆಕೃತಿಗಳು ಫಲಪುಷ್ಪ ಪ್ರದರ್ಶನದಲ್ಲಿವೆಯೋ ಅಲ್ಲಿಗೆ ಆಯಾಯ ಇಲಾಖೆ ಸಿಬ್ಬಂದಿಯನ್ನು ನಿರ್ವಹಣೆಗೆ ನಿಯೋಜಿಸಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಫಲಪುಷ್ಪ ಪ್ರದರ್ಶನದಲ್ಲಿ ಮಳಿಗೆಗಳ ಹಂಚಿಕೆ ವಿಚಾರವಾಗಿ ಉಂಟಾದ ವಿವಾದದಿಂದ ಟೆಂಡರ್‌ದಾರ ಕೊನೇ ಘಳಿಗೆಯಲ್ಲಿ ಕೈಕೊಟ್ಟಿರುವುದರಿಂದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ನಿರ್ವಹಣೆಯ ಭಾರ ಹೊತ್ತಿದ್ದಾರೆ.

ಶುಕ್ರವಾರದಿಂದ ಫಲಪುಷ್ಪ ಪ್ರದರ್ಶನ ಆರಂಭಗೊಂಡಿದ್ದು ₹೧೫ ಲಕ್ಷಕ್ಕೆ ಟೆಂಡರ್ ಪಡೆದಿದ್ದ ಟೆಂಡರ್‌ದಾರ, ತೋಟಗಾರಿಕೆ ಇಲಾಖೆಯೊಳಗೆ ೧೦ ಮಳಿಗೆಗಳನ್ನು ನೀಡುವಂತೆ ಕೋರಿದ್ದಾರೆ. ಇದಕ್ಕೆ ಹಿರಿಯ ಅಧಿಕಾರಿಗಳು ಒಪ್ಪಲಿಲ್ಲ. ಆದ ಕಾರಣಕ್ಕೆ ಟೆಂಡರ್‌ದಾರ ಬೇಸರಗೊಂಡು ಫಲಪುಷ್ಪ ಪ್ರದರ್ಶನದಿಂದ ದೂರ ಉಳಿದಿದ್ದಾನೆ. ಪರಿಣಾಮ ಟಿಕೆಟ್ ಹಂಚಿಕೆ, ಸಾರ್ವಜನಿಕ ಪ್ರವೇಶ, ನಿರ್ವಹಣೆ, ಮೇಲ್ವಿಚಾರಣೆ ಜವಾಬ್ದಾರಿ ಎಲ್ಲವೂ ಅಧಿಕಾರಿಗಳ ಹೆಗಲೇರಿದೆ. ಕೆಲವೊಂದು ನೌಕರರನ್ನು ತಾತ್ಕಾಲಿಕವಾಗಿ ತೆಗೆದುಕೊಂಡು ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಫಲಪುಷ್ಪ ಪ್ರದರ್ಶನದ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆಯೊಳಗಿನ ಮಳಿಗೆಗಳಿಗೆ ತಲಾ ₹೧೦ ಸಾವಿರ ಹಾಗೂ ಹೊರಭಾಗದ ಮಳಿಗೆಗಳಿಗೆ ತಲಾ ₹೨೦ ಸಾವಿರ ನಿಗದಿಪಡಿಸಲಾಗಿದ್ದು, ಪ್ರದರ್ಶನಕ್ಕೂ ಮೊದಲೇ ಎಲ್ಲಾ ಮಳಿಗೆಗಳ ಹಂಚಿಕೆ ಪ್ರಕ್ರಿಯೆ ಮುಗಿದಿತ್ತು ಎನ್ನಲಾಗಿದೆ.

ಆನಂತರದಲ್ಲಿ ಫಲಪುಷ್ಪ ಪ್ರದರ್ಶನದ ಟೆಂಡರ್ ಪಡೆದಿದ್ದವರು ಹತ್ತು ಮಳಿಗೆಗಳಿಗೆ ಬೇಡಿಕೆ ಇಟ್ಟಿದ್ದರು. ಈ ಹಂತದಲ್ಲಿ ಟೆಂಡರ್‌ದಾರರಿಗೆ ಮಳಿಗೆಗಳನ್ನು ನೀಡುವುದಕ್ಕೆ ಸಾಧ್ಯವಾಗಲಿಲ್ಲವೆಂದು ಅಧಿಕಾರಿ ಮೂಲಗಳು ತಿಳಿಸಿವೆ. ಆ ಹಿನ್ನೆಲೆಯಲ್ಲಿ ಇಎಂಡಿ ಹಣ ಹೋದರೂ ಫಲಪುಷ್ಪ ಪ್ರದರ್ಶನದ ಜವಾಬ್ದಾರಿ ನಿರ್ವಹಿಸದೆ ದೂರ ಉಳಿದರು. ಪರಿಣಾಮ ಅಧಿಕಾರಿ ವರ್ಗದವರೇ ಮುಂದೆ ನಿಂತು ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ.

ಟೆಂಡರ್ ಪಡೆದಿದ್ದ ವ್ಯಕ್ತಿ ಬಾರದಿದ್ದರಿಂದ ಬೇರೊಬ್ಬ ಟೆಂಡರ್‌ದಾರರಿಗೆ ಜವಾಬ್ದಾರಿ ವಹಿಸುವುದಕ್ಕೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮುಂದಾಗಿದ್ದರು. ಆದರೆ, ನಿಗದಿತ ದಿನಗಳಿಗಿಂತ ಹೆಚ್ಚುವರಿ ಮೂರು ದಿನ ಮುಂದುವರಿಸಿದರೆ ಟೆಂಡರ್‌ಗೆ ಒಪ್ಪಿಕೊಳ್ಳುವ ಬೇಡಿಕೆಯನ್ನು ಮುಂದಿಟ್ಟರು ಎನ್ನಲಾಗಿದೆ. ಇದಕ್ಕೆ ಅಧಿಕಾರಿವರ್ಗ ಒಪ್ಪಲಿಲ್ಲ. ಆರ್ಥಿಕ ಹೊರೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಐದು ದಿನಗಳಿಗೆ ಫಲಪುಷ್ಪ ಪ್ರದರ್ಶನವನ್ನು ಸೀಮಿತಗೊಳಿಸಿ ಮುಗಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಕೊನೇ ಘಳಿಗೆಯಲ್ಲಿ ಟೆಂಡರ್‌ದಾರ ಕೈಕೊಟ್ಟಿರುವುದರಿಂದ ಅಧಿಕಾರಿಗಳು ಬೆಳಗ್ಗೆ ೯ ಗಂಟೆಗೆ ಆಗಮಿಸಿ ರಾತ್ರಿ ೧೦.೩೦ ಗಂಟೆಗೆ ಹೋಗುವ ಅನಿವಾರ್ಯ ಸ್ಥಿತಿ ಎದುರಾಗಿದೆ. ಇದರ ಜೊತೆಗೆ ಕಚೇರಿ ಕೆಲಸಗಳನ್ನು ನಿಭಾಯಿಸುವುದು ಕಷ್ಟಕರವೆನಿಸಿದೆ. ಪರಿಸ್ಥಿತಿಯನ್ನು ನಿಭಾಯಿಸುವುದಕ್ಕೆ ತೋಟಗಾರಿಕೆ ಇಲಾಖೆ ಸಂಘದವರು ಕೈಜೋಡಿಸಿದ್ದರೂ ಎಲ್ಲಾ ಕಡೆಯೂ ನಿಭಾಯಿಸುವುದಕ್ಕೆ ಕಷ್ಟಸಾಧ್ಯವಾಗಿದೆ.

ಅದಕ್ಕಾಗಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಅವರು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಕೆ.ಎನ್.ರೂಪಶ್ರೀ ಸೇರಿದಂತೆ ಎಲ್ಲಾ ಇಲಾಖೆ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಯಾವ ಯಾವ ಇಲಾಖೆಯ ಯೋಜನೆಗಳ ಆಕೃತಿಗಳು ಫಲಪುಷ್ಪ ಪ್ರದರ್ಶನದಲ್ಲಿವೆಯೋ ಅಲ್ಲಿಗೆ ಆಯಾಯ ಇಲಾಖೆ ಸಿಬ್ಬಂದಿಯನ್ನು ನಿರ್ವಹಣೆಗೆ ನಿಯೋಜಿಸಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಇದುವರೆಗೆ ನಡೆದಿದ್ದ ಫಲ- ಪುಷ್ಪ ಪ್ರದರ್ಶನದಲ್ಲಿ ಯಾವ ವರ್ಷವೂ ಟೆಂಡರ್‌ದಾರ ಕೈಕೊಟ್ಟ ನಿದರ್ಶನವಿರಲಿಲ್ಲ. ತೋಟಗಾರಿಕೆ ಅಧಿಕಾರಿಗಳಿಗೆ ನಿರ್ವಹಣೆಯೂ ಹೊಸದಾಗಿರುವುದರಿಂದ ಹರಸಾಹಸ ನಡೆಸುತ್ತಿದ್ದಾರೆ. ಪೊಲೀಸ್ ಇಲಾಖೆಯವರ ಸಹಕಾರವನ್ನು ಪಡೆದು ಫಲಪುಷ್ಪ ಪ್ರದರ್ಶನಕ್ಕೆ ಬರುತ್ತಿರುವ ಸಾವಿರಾರು ಜನರನ್ನು ನಿಯಂತ್ರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸ್ಟೆಲ್ ಮಕ್ಕಳಿಗೆ ಹೊಸ ಜಾತಿ ಪ್ರಮಾಣಪತ್ರ ಶಾಕ್‌
₹400 ಕೋಟಿ ಇದ್ದ 2 ಕಂಟೇನರ್‌ ಲಾರಿಗಳೇ ಬೆಳಗಾವೀಲಿ ನಾಪತ್ತೆ!