ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಗುರುವಾರ ತೆನೆಹಬ್ಬ (ಹೊಸ್ತಾರೋಗಣೆ) ಮತ್ತು ಕದಿರು ಕಟ್ಟುವ ಕಾರ್ಯವು ವಿವಿಧ ವೈಧಿಕ ವಿದಿ ವಿಧಾನಗಳೊಂದಿಗೆ ನೆರವೇರಿತು. ಮುಂಜಾನೆ ಪಂಚಾಮೃಮಹಾಭಿಷೇಕವನ್ನು ಶ್ರೀ ದೇವರ ಮೂಲ ವಿಗ್ರಹಕ್ಕೆ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಯಡಪಡಿತ್ತಾಯರು ನೆರವೇರಿಸಿದರು. ವರ್ಷದಲ್ಲಿ ಹೊಸ್ತಾರೋಗಣೆಯ ಒಂದು ದಿನ ಮಾತ್ರ ಮೂಲ ವಿಗ್ರಹಕ್ಕೆ ಮಹಾಭಿಷೇಕ ನಡೆಯುವುದು ಕುಕ್ಕೆಯ ವಿಶೇಷ. ಉಳಿದ ದಿನಗಳಲ್ಲಿ ಉತ್ಸವ ಮೂರ್ತಿಗೆ ಅಭಿಷೇಕ ನೆರವೇರುತ್ತದೆ. ಕದಿರು ಪೂಜೆ: ಅಭಿಷೇಕದ ಬಳಿಕ ತೆನೆ ತರಲು ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಯಡಪಡಿತ್ತಾಯರು ದರ್ಪಣತೀರ್ಥ ನದಿ ತೀರಕ್ಕೆ ತೆರಳಿದರು. ನಂತರ ಬತ್ತದ ತೆನೆಗೆ ದರ್ಪಣತೀರ್ಥ ನದಿಯ ತಟದಲ್ಲಿ ಪೂಜೆ ನೆರವೇರಿಸಲಾಯಿತು. ಕ್ಷೇತ್ರ ಪುರೋಹಿತ ಮಧುಸೂದನ ಕಲ್ಲೂರಾಯ, ಪುರೋಹಿತರಾದ ಸರ್ವೇಶ್ವರ ಭಟ್, ಕುಮಾರ ಭಟ್, ಪ್ರಸಾದ್ ಕಲ್ಲೂರಾಯ ಮಂತ್ರಘೋಷ ಮಾಡಿದರು. ಬಳಿಕ ಬತ್ತದ ತೆನೆಯನ್ನು ದೀವಟಿಗೆ, ಬ್ಯಾಂಡ್, ವಾದ್ಯದ ನಿನಾದದೊಂದಿಗೆ ಮಂತ್ರಘೋಷದೊಂದಿಗೆ ಮೆರವಣಿಗೆಯಲ್ಲಿ ದೇವಳಕ್ಕೆ ತರಲಾಯಿತು. ಶ್ರೀ ದೇವಳಕ್ಕೆ ಒಂದು ಪ್ರದಕ್ಷಿಣೆ ಬಂದು ಅರ್ಚಕರು ತೆನೆಯನ್ನು ಗರ್ಭಗುಡಿಗೆ ಕೊಂಡೊಯ್ದರು. ನಂತರ ಶ್ರೀ ದೇವರ ಸನ್ನಿಧಿಯಲ್ಲಿ ಪ್ರಧಾನ ಅರ್ಚಕರು ಕದಿರು ಪೂಜೆ ನೆರವೇರಿಸಿದರು. ಬಳಿಕ ಶ್ರೀ ದೇವಳದ ಗರ್ಭಗುಡಿಗೆ ಕದಿರು ಕಟ್ಟಿದರು.ಬಳಿಕ ಹೊಸ್ತಾರೋಗಣೆಯ ಪ್ರಯುಕ್ತ ಶ್ರೀ ದೇವರಿಗೆ ಗರ್ಭಗುಡಿಯ ಎದುರಿನ ಮಂಟಪದಲ್ಲಿ ಪಂಚಾಮೃತ ಮಹಾಭಿಷೇಕ, ವಿಶೇಷ ಪೂಜೆ ಹಾಗೂ ನವಾನ್ನ ನೈವೇಧ್ಯ ಸಮರ್ಪಿತವಾಯಿತು. ಶುಭದಿನದ ನಿಮಿತ್ತ ಶ್ರೀ ದೇವಳ ಹಾಗೂ ಷಣ್ಮುಖ ಭೋಜನ ಶಾಲೆಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಈ ದಿನ ದೇವಳದ ವತಿಯಿಂದ ವಿಶೇಷವಾದ ಅಕ್ಕಿ ಪಾಯಸದೊಂದಿಗೆ ಪ್ರಸಾದ ಭೋಜನ ವಿತರಿಸಲಾಯಿತು. ಸಹಸ್ರಾರು ಭಕ್ತಾದಿಗಳು ಶ್ರೀ ದೇವರ ನವಾನ್ನ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.