ಟೆನ್ನಿಸ್ ಬಾಲ್ ಕ್ರಿಕೆಟ್: ಕೊಡಗು ಜಿಲ್ಲಾ ಶಿಕ್ಷಕರ ತಂಡ ಚಾಂಪಿಯನ್‌

KannadaprabhaNewsNetwork |  
Published : Dec 19, 2023, 01:45 AM IST
ಚಿತ್ರ.2: ಬೋಧನೆ  ನೀಡಿದ ಗುರುಗಳಾದ ಮೈಸೂರು ಹೆಮ್ಮರಗಾಲ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಜಾನ್ ಪ್ರಾನ್ಸಿಸ್ ಮತ್ತು ಬೆಂಗಳೂರು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಎಂ.ಪಿ.ನಾಗಮ್ಮ  ಅವರನ್ನು ಸನ್ಮಾನಿಸಿ ಗೌರವಿಸುತ್ತಿರುವುದು. 3: ಪ್ರಥಮ ಸ್ಥಾನ ಪಡೆದ ಶಿಕ್ಷಕರ ತಂಡ ಬಹುಮಾನದೊಂದಿಗೆ. | Kannada Prabha

ಸಾರಾಂಶ

ಟೆನ್ನಿಸ್ ಬಾಲ್ ಕ್ರಿಕೆಟ್ ಲೀಗ್ ಪಂದ್ಯದಲ್ಲಿ ಚಡ್ಡಿದೋಸ್ತ್ ‘ಎ’ ಮತ್ತು ‘ಬಿ’ ತಂಡ, ಕೊಡಗು ಶಿಕ್ಷಕರ ತಂಡ, ಅರಣ್ಯ ಇಲಾಖೆ ಮತ್ತು ಕೊಡಗು ಪ್ರೆಸ್ ಕ್ಲಬ್ ತಂಡಗಳು ಭಾಗವಹಿಸಿದ್ದವು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸುಂಟಿಕೊಪ್ಪ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪಿಯು ಕಾಲೇಜಿನ ಹಳೆಯ ವಿದ್ಯಾರ್ಥಿಗಳ ‘ಚಡ್ಡಿ ದೋಸ್ತ್’ ಬಳಗದ ವತಿಯಿಂದ ಗುಡ್ಡೆಹೊಸೂರು ಐಚೆಟ್ಟೀರ ನರೇನ್ ಸೋಮಯ್ಯ ಸ್ಪೋರ್ಟ್ಸ್ ಸೆಂಟರ್ ಮೈದಾನದಲ್ಲಿ ಆಯೋಜಿಸಿದ್ದ 5ನೇ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಸೌಹಾರ್ದ ಟೂರ್ನಿಯಲ್ಲಿ ಕೊಡಗು ಜಿಲ್ಲಾ ಶಿಕ್ಷಕರ ತಂಡ ಪ್ರಥಮ ಸ್ಥಾನ ಪಡೆದುಕೊಂಡರೆ, ಚಡ್ಡಿದೋಸ್ತ್ ‘ಎ’ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ಟೆನ್ನಿಸ್ ಬಾಲ್ ಕ್ರಿಕೆಟ್ ಲೀಗ್ ಪಂದ್ಯದಲ್ಲಿ ಚಡ್ಡಿದೋಸ್ತ್ ‘ಎ’ ಮತ್ತು ‘ಬಿ’ ತಂಡ, ಕೊಡಗು ಶಿಕ್ಷಕರ ತಂಡ, ಅರಣ್ಯ ಇಲಾಖೆ ಮತ್ತು ಕೊಡಗು ಪ್ರೆಸ್ ಕ್ಲಬ್ ತಂಡಗಳು ಭಾಗವಹಿಸಿದ್ದವು.ಫೈನಲ್ ಪಂದ್ಯ ಕೊಡಗು ಶಿಕ್ಷಕರ ತಂಡ ಮತ್ತು ಚಡ್ಡಿದೋಸ್ತ್ ‘ಎ’ ತಂಡಗಳ ನಡುವೆ ನಡೆಯಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಚಡ್ಡಿದೋಸ್ತ್ ತಂಡ ನಿಗದಿತ 6 ಓವರ್‌ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 48 ರನ್ ಬಾರಿಸಿತು. 49 ರನ್‌ಗಳ ಗುರಿ ಬೆನ್ನಟ್ಟಿದ್ದ ಕೊಡಗು ಶಿಕ್ಷಕರ ತಂಡ, ಕೇವಲ 4 ಓವರ್‌ಗಳಲ್ಲಿ 50 ರನ್‌ ಹೊಡೆದು ವಿಜಯದ ನಗೆಯೊಂದಿಗೆ ಸತತ ನಾಲ್ಕನೇ ಬಾರಿ ‘ಚಡ್ಡಿದೋಸ್ತ್’ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಶಿಕ್ಷಕರ ತಂಡದ ವಿಜಯ್ ಮತ್ತು ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಶಿಕ್ಷಕ ತಂಡದ ಆಟಗಾರ ನಾಸೀರ್ ಪಡೆದುಕೊಂಡರು.* ಸಮಾರೋಪ ಸಮಾರಂಭ

ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸುಂಟಿಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಾರಾಗಿ ಸೇವೆ ಸಲ್ಲಿಸಿ ಇದೀಗ ಮೈಸೂರು ಹೆಮ್ಮರಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾಗಿರುವ ಜಾನ್ ಫ್ರಾನ್ಸಿಸ್, ಕ್ರೀಡಾಕೂಟ ಒಂದು ನೆಪಮಾತ್ರ. ತಮ್ಮ ಸಹಪಾಠಿಗಳನ್ನು ಒಂದೆಡೆ ಸೇರಿಸುವ ಬಾಂಧವ್ಯ ಕೊಂಡಿಯಾಗಿದೆ. ವಿದ್ಯಾಭ್ಯಾಸ ಮುಗಿಸಿ ಹೊರಹೋದ ನಂತರ ಮತ್ತೆ ಒಟ್ಟುಗೂಡಿಸುವುದು ಬಹಳ ಕಷ್ಟದ ಕೆಲಸ. ಆ ಕೆಲಸ ಚಡ್ಡಿದೋಸ್ತ್ ಹೆಸರಿನ ಮೂಲಕ ಆಗಿದೆ. ಶಿಷ್ಯಂದಿರು ನಮ್ಮನ್ನು ನೆನಪಿಸಿಕೊಂಡು ಕಾರ್ಯಕ್ರಮಕ್ಕೆ ಆಹ್ವಾನಿಸುವ ಮೂಲಕ ನಾವು ನೀಡಿದ ಶಿಕ್ಷಣಕ್ಕೆ ಸಾರ್ಥಕತೆ ದೊರಕಿದಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಬೆಂಗಳೂರು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಎಂ.ಪಿ.ನಾಗಮ್ಮ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಗುರುಗಳನ್ನು ಮರೆಯುವಂತಹ ಸಂದರ್ಭದಲ್ಲಿ ನಮ್ಮ ಮೇಲೆ ಗೌರವ ನೀಡಿ ಅಭಿನಂದಿಸಿರುವುದು ಸಂತೋಷ ತಂದಿದೆ. ಹಾಗೆಯೇ ನಿಮ್ಮನ್ನು ನೋಡಿದಾಗ ತರಗತಿಯಲ್ಲಿ ನೋಡಿದಷ್ಟೆ ಸಂತೋಷವಾಗುತ್ತಿದೆ. ಮತ್ತೊಮ್ನೆ ಕೊಡಗಿಗೆ ಬರುವ ಅವಕಾಶ ಸಿಕ್ಕಿದೆ. ಕೊಡಗಿನ ಭಾವನಾತ್ಮಕ ಸಂಬಂಧಕ್ಕೆ ನಾವು ಋಣಿಯಾಗಿದ್ದೇವೆ ಎಂದರು.

ಇದೇ ವೇಳೆ ಹಳೇ ವಿದ್ಯಾರ್ಥಿಗಳಾದ ಬೆಂಗಳೂರು ಮಡಿವಾಳ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಆಗಿರುವ ಬಿ.ಟಿ.ಕಿಶೋರ್ ಮತ್ತು ಆಯುಷ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕರುಣಾಕರ ಅವರನ್ನು ಸನ್ಮಾನಿಸಲಾಯಿತು. ತಮಗೆ ಬೋಧನೆ ನೀಡಿದ ಗುರುಗಳಾದ ಮೈಸೂರು ಹೆಮ್ಮರಗಾಲ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಜಾನ್ ಫ್ರಾನ್ಸಿಸ್ ಮತ್ತು ಬೆಂಗಳೂರು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಎಂ.ಪಿ.ನಾಗಮ್ಮ ಅವರನ್ನು ಗೌರವಿಸಲಾಯಿತು.ಕ್ರೀಡೆಯಲ್ಲಿ ಜಯಗಳಿಸಿದ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಡ್ಡಿದೋಸ್ತ್ ಬಳಗದ ಅಧ್ಯಕ್ಷ ಕೆ.ಕೆ.ಹರೀಶ್ ವಹಿಸಿದ್ದರು.ಸೌಹಾರ್ದ ಕ್ರಿಕೆಟ್ ಟೂರ್ನಿಗೆ ಗುಡ್ಡೆಹೊಸೂರು ಐಎನ್‌ಎಸ್ ಅಕಾಡೆಮಿಯ ಮಾಲೀಕ ಐಚೆಟ್ಟೀರ ಸೋಮಯ್ಯ ಚಾಲನೆ ನೀಡಿದರು.

ಚಡ್ಡಿದೋಸ್ತ್ ಬಳಗದ ಸ್ಥಾಪಕಾಧ್ಯಕ್ಷ ಮೋಹನ್, ಎ ತಂಡದ ನಾಯಕ ಸುರೇಶ್, ಬಿ ತಂಡದ ನಾಯಕ ಬಾಲಕೃಷ್ಣ, ಸಂಚಾಲಕ ನವೀನ್, ಬಳಗದ ಉಮ್ಮರ್, ಕೆ.ಎಂ.ವಿನೋದ್, ರಾಘವೇಂದ್ರ, ರಾಕೇಶ್, ಅರುಣ್ ರೈ ಚಂದ್ರ, ಹೇಮಂತ್ ಮಣಿ, ಹರೀಶ್, ಹೇಮಂತ್, ಸಂದೀಪ್, ರಫೀಕ್ ಸೇರಿದಂತೆ ಇತರರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ