ಹೊಸ ಸಂಸದನ ಮುಂದಿವೆ ಅಖಂಡ ಬಳ್ಳಾರಿ ಅಭಿವೃದ್ಧಿಯ ಹತ್ತಾರು ನಿರೀಕ್ಷೆ

KannadaprabhaNewsNetwork |  
Published : Jun 08, 2024, 12:30 AM IST
( ಈ ವರದಿಗೆ ಈ.ತುಕಾರಾಂ ಅವರ ಫೋಟೋ ಬಳಸಿಕೊಳ್ಳುವುದು )  | Kannada Prabha

ಸಾರಾಂಶ

ಅಭಿವೃದ್ಧಿ ನೆಲೆಯ ನಿರಾಸಕ್ತಿ, ಪ್ರಮುಖ ಯೋಜನೆಗಳ ಜಾರಿ ವಿಚಾರದಲ್ಲಿ ಬಳ್ಳಾರಿ ಜಿಲ್ಲೆಯ ಶಾಪಗ್ರಸ್ತ ಜಿಲ್ಲೆ ಎಂದೇ ಗುರುತಿಸಿಕೊಂಡಿದೆ.

ಮಂಜುನಾಥ ಕೆ.ಎಂ

ಬಳ್ಳಾರಿ: ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಅವರನ್ನು ಮಣಿಸಿ ಭರ್ಜರಿ ಜಯ ಗಳಿಸುವ ಮೂಲಕ ಸಂಸತ್ ಪ್ರವೇಶ ಪಡೆದ ಕಾಂಗ್ರೆಸ್‌ನ ಈ.ತುಕಾರಾಂ ಅವರ ಮೇಲೆ ಅಖಂಡ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಯ ನಿರೀಕ್ಷೆಗಳಿವೆ.

ಹಾಗೆ ನೋಡಿದರೆ, ಈ ಹಿಂದಿನಿಂದಲೂ ಕೇಂದ್ರ ಸರ್ಕಾರದ ಅನುದಾನ ಬಳಕೆ, ಅಭಿವೃದ್ಧಿ ನೆಲೆಯ ನಿರಾಸಕ್ತಿ, ಪ್ರಮುಖ ಯೋಜನೆಗಳ ಜಾರಿ ವಿಚಾರದಲ್ಲಿ ಬಳ್ಳಾರಿ ಜಿಲ್ಲೆಯ ಶಾಪಗ್ರಸ್ತ ಜಿಲ್ಲೆ ಎಂದೇ ಗುರುತಿಸಿಕೊಂಡಿದೆ.

1999ರಲ್ಲಿ ಬಳ್ಳಾರಿಯಿಂದ ಸ್ಪರ್ಧಿಸಿ ಗೆಲುವು ದಾಖಲಿಸಿದ ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಜಿಲ್ಲೆಯ ಕೊಡುಗೆಯಾಗಿ ಸೋನಿಯಾ ಪ್ಯಾಕೇಜ್ ಘೋಷಿಸಿ, ಅನುದಾನ ನೀಡಿದ್ದು ಬಿಟ್ಟರೆ ನಂತರದಲ್ಲಿ ಬಂದ ಸಂಸದರು ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚು ಮುತುವರ್ಜಿ ವಹಿಸಿ ಕೆಲಸ ಮಾಡಲಿಲ್ಲ. ಪ್ರಮುಖವಾಗಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ಪ್ರಮುಖ ರೈಲ್ವೆ ಯೋಜನೆಗಳು ಹಾಗೂ ಹೊಸ ರೈಲುಗಳ ಓಡಾಟಕ್ಕೆ ಸಂಬಂಧಿಸಿದಂತೆ ಸಂಸದರು ಕಾಳಜಿ ತೆಗೆದುಕೊಳ್ಳಲಿಲ್ಲ.

ಹೀಗಾಗಿ ಬಳ್ಳಾರಿಯಿಂದ ದೊಡ್ಡ ಪ್ರಮಾಣದಲ್ಲಿ ರೈಲ್ವೆ ಇಲಾಖೆಗೆ ತೆರಿಗೆ ಹಣ ಪಾವತಿಯಾಗುತ್ತಿದ್ದರೂ ಸೌಲಭ್ಯ ಅಷ್ಟಕ್ಕಷ್ಟೇ ಎಂಬಂತಾಗಿದೆ.

ಬಳ್ಳಾರಿ ಜೀನ್ಸ್ ಉದ್ಯಮ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ದೇಶದ ನಾನಾ ರಾಜ್ಯಗಳಿಗೆ ಬಳ್ಳಾರಿಯಿಂದ ಜೀನ್ಸ್‌ ಉತ್ಪನ್ನಗಳು ರಫ್ತಾಗುತ್ತವೆ. ಆದರೆ, ಇಲ್ಲಿನ ಜೀನ್ಸ್ ಉದ್ಯಮಿಗಳು ಕನಿಷ್ಠ ಸೌಕರ್ಯಗಳಿಂದಲೂ ತತ್ತರಿಸುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಮುನ್ನ ಪ್ರಚಾರಕ್ಕೆಂದು ಆಗಮಿಸಿದ್ದ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಬಳ್ಳಾರಿಯನ್ನು ಜೀನ್ಸ್‌ ರಾಜಧಾನಿಯನ್ನಾಗಿಸುತ್ತೇವೆ. ಇದಕ್ಕಾಗಿ ಬಜೆಟ್‌ನಲ್ಲಿ ಹಣ ಮೀಸಲಿಡುತ್ತೇವೆ. ಇದರಿಂದ ಬಳ್ಳಾರಿ ಜೀನ್ಸ್‌ ಉದ್ಯಮ ಮತ್ತಷ್ಟು ಪ್ರಗತಿ ಕಾಣಲಿದೆ. ಇಲ್ಲಿನ ಸಾವಿರಾರು ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಿದ್ದರು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಗೊಂಡು ಒಂದು ವರ್ಷ ಕಳೆದಿದ್ದರೂ ಈ ಬಗ್ಗೆ ಚಕಾರ ಎತ್ತಿಲ್ಲ.

ಬಳ್ಳಾರಿಯ ಸುಧಾಕ್ರಾಸ್, ರೇಡಿಯೋ ಪಾರ್ಕ್ ಮೇಲ್ಸೇತುವೆಗಳು ನಿರ್ಮಾಣದ ಕನಸು ನನಸಾಗಿಲ್ಲ. ಹೀಗಾಗಿ ನಗರದ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಹರಸಾಹಸ ಪಡುವಂತಾಗಿದೆ.

ಅಖಂಡ ಬಳ್ಳಾರಿ ಜಿಲ್ಲೆಯ ಜೀವನದಿ ಎನಿಸಿದ ತುಂಗಭದ್ರಾ ಜಲಾಶಯದ ಹೂಳಿನ ಸಮಸ್ಯೆ ದೊಡ್ಡ ಗೋಳಾಗಿ ಪರಿಣಮಿಸಿದೆ. ಹೂಳಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆಯೇ ಜಲಾಶಯದಲ್ಲಿ ನೀರಿನ ಸಂಗ್ರಹ ಕುಸಿಯುತ್ತಿದ್ದು, ಈ ಬೆಳವಣಿಗೆ ಉಭಯ ಜಿಲ್ಲೆಗಳ ರೈತರಿಗೆ ನುಂಗದ ತುತ್ತಾಗಿ ಪರಿಣಮಿಸಿದೆ. ಜಲಾಶಯದ ಹೂಳು ತೆಗೆಯುವ ಬದಲು ಸಮನಾಂತರ ಜಲಾಶಯ ನಿರ್ಮಿಸುವ ಭರವಸೆಗಳು, ಕಾರ್ಯರೂಪ ಪಡೆದುಕೊಂಡಿಲ್ಲ. ಇನ್ನು ವಿಶ್ವ ಪಾರಂಪರಿಕ ಹಂಪಿಯನ್ನು ಅಂತರಾಷ್ಟ್ರೀಯ ಪ್ರವಾಸಿ ತಾಣವಾಗಿದೆ ಗುರುತಿಸಿಕೊಂಡಿದೆಯಾದರೂ ಇಲ್ಲಿನ ಸೌಕರ್ಯಗಳು ಅಷ್ಟಕ್ಕಷ್ಟೇ ಎಂಬಂತಾಗಿದೆ. ಇವು ಪ್ರಮುಖ ಸಮಸ್ಯೆಗಳಷ್ಟೇ. ಇನ್ನು ಅಖಂಡ ಬಳ್ಳಾರಿ ಜಿಲ್ಲೆಯ ನಾನಾ ಸಮಸ್ಯೆಗಳಿಗೆ ಮುಕ್ತಿ ನೀಡಲು ನೂತನ ಸಂಸದರು ಶ್ರಮಿಸಬೇಕಾಗಿದೆ. ಕೇಂದ್ರ ಸರ್ಕಾರದ ಅನುದಾನವನ್ನು ಸಮರ್ಪಕ ಬಳಕೆಯ ಕಡೆ ನಿಗಾ ಇಡುವುದರ ಜೊತೆಗೆ ಜನಪರ ಯೋಜನೆಗಳು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳ್ಳಲು ಕ್ರಮ ವಹಿಸಬೇಕಾಗಿದೆ.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ