ಕನ್ನಡಪ್ರಭ ವಾರ್ತೆ ಗುಬ್ಬಿ
ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಕಾಲಕ್ಕೆ ಮಳೆಯಾಗದೆ ತೀವ್ರ ಬರಗಾಲ ಎದುರಾಗಿ ಎಲ್ಲಾ ಡ್ಯಾಂ ಗಳು ಬರಿದಾಗಿದ್ದು ಎಲ್ಲಾ ನಗರ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವ ಕಾವೇರಿ ನೀರು ಬರಿದಾಗಿದೆ. ಇಂತಹ ದುಸ್ಥಿತಿಯಲ್ಲಿ ನೆರೆ ರಾಜ್ಯ ತಮಿಳುನಾಡಿಗೆ 3.5 ಸಾವಿರ ಕ್ಯೂಸೆಕ್ಸ್ ನೀರು 15 ದಿನಗಳ ಕಾಲ ಸುಮಾರು 4 ಟಿಎಂಸಿ ನೀರು ಬಿಡಲು ಆದೇಶ ನೀಡಿರುವುದು ಅವೈಜ್ಞಾನಿಕ. ವಾಸ್ತವದಲ್ಲಿ ಕುಡಿಯಲು ನೀರಿಲ್ಲ. ಮುಂಗಾರು ಮಳೆ ಕೈಕೊಟ್ಟಿದೆ. ಸತ್ಯ ತಿಳಿದೂ ಸಹ ಸಮಿತಿ ಈ ರೀತಿಯ ಆದೇಶ ಹೊರಡಿಸಿದೆ. ಮಾನವೀಯತೆ ಮರೆತು ನೀರು ಹರಿಸಲು ಹೇಗೆ ಸಾಧ್ಯ ಎಂಬುದು ಸರ್ಕಾರ ಮನವರಿಕೆ ಮಾಡಬೇಕಿದೆ ಎಂದು ಕಿಡಿಕಾರಿದರು.ರೈತ ಸಂಘ ತಾಲೂಕು ಅಧ್ಯಕ್ಷ ವೆಂಕಟೇಗೌಡ ಮಾತನಾಡಿ ನೀರಿನ ಲಭ್ಯತೆಯನ್ನು ಅರಿತು ತಮಿಳುನಾಡಿಗೆ ವಸ್ತು ಸ್ಥಿತಿಯನ್ನು ಮನವರಿಕೆ ಮಾಡಿಕೊಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇನ್ನೂ ಬರಗಾಲ ಎದುರಿಸುವಾಗ ಕಾವೇರಿ ನಿಯಂತ್ರಣ ಸಮಿತಿ ದಿನಕ್ಕೆ 3500 ಕ್ಯೂಸೆಕ್ಸ್ ನೀರು ಹರಿಸುವಂತೆ ನಿರ್ದೇಶನ ನೀಡಿರುವುದು ಸರಿಯಲ್ಲ. ಜೊತೆಗೆ ಒಂದು ವೇಳೆ ಸರ್ಕಾರ ಒತ್ತಾಯಕ್ಕೆ ಮಣಿದು ಕೆಆರ್ ಎಸ್ ಡ್ಯಾಂ ನಲ್ಲಿ ನೀರು ಇಲ್ಲದಿರುವಾಗ ಬೇರೆ ಡ್ಯಾಂಗಳಿಂದ ನೀರು ಹರಿಬಿಡುವ ದುಸ್ಸಾಹಾಸಕ್ಕೆ ಮುಂದಾದಲ್ಲಿ ರಾಜ್ಯದ್ಯಂತ ರೈತ ಸಂಘ ಬೃಹತ್ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.ರೈತರ ಅಹವಾಲು ಸ್ವೀಕರಿಸಲು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಗುಬ್ಬಿ ತಹಸೀಲ್ದಾರ್ ಅವರಿಗೆ ಪ್ರತಿಭಟನಾಕಾರರು ಮನವಿ ಪತ್ರ ಸಲ್ಲಿಸಿದರು. ನಂತರ ಮಾತನಾಡಿದ ತಹಶೀಲ್ದಾರ್ ಆರತಿ.ಬಿ ಈಗಾಗಲೇ ರಾಜ್ಯದಲ್ಲಿ ಬರಗಾಲ ತೀವ್ರಗೊಂಡ ಹಿನ್ನೆಲೆ ಸರ್ಕಾರ ಸೂಕ್ತ ನಿರ್ದೇಶನ ನೀಡಿದ್ದು ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಯಾವುದೇ ಸಮಸ್ಯೆಗಳು ಎದುರಾಗದಂತೆ ತಾಲೂಕು ಆಡಳಿತ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಸಿ.ಟಿ.ಕುಮಾರ್, ಮಂಜುನಾಥ್, ಗುರು ಚನ್ನಬಸಪ್ಪ, ದೇವೇಗೌಡ, ಬಸವರಾಜು, ಮಹಾದೇವಯ್ಯ, ವರ್ತಕರ ಸಂಘದ ದಯಾನಂದ್, ಮಾಜಿ ಸೈನಿಕರ ಸಂಘದ ವಿವೇಕಾನಂದ, ಜೈದೇವ್ ಸೇರಿದಂತೆ ನೂರಾರು ಮಂದಿ ರೈತ ಮುಖಂಡರು ಭಾಗವಹಿಸಿದ್ದರು.