
ಕನ್ನಡಪ್ರಭ ವಾರ್ತೆ ಕಾರವಾರ
ವಿವಿಧ ಬೇಡಿಕೆಗಳನ್ನು ಮುಂದಿಟ್ಟು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಂಗಳವಾರ ಕಾರವಾರದಲ್ಲಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದರು.
ಸಂವಿಧಾನದ ಆಶಯದಂತೆ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ ಅಭಿವೃದ್ಧಿಗೆ ಮೀಸಲಾದ ಹಣವನ್ನು ಅವರ ಏಳಿಗೆಗಾಗಿಯೇ ಬಳಸಬೇಕು. ಆದರೆ ಕಾಂಗ್ರೆಸ್ ಸರ್ಕಾರ ಸುಮಾರು ₹25 ಸಾವಿರ ಕೋಟಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿದ್ದು ಇದು ದಲಿತರ ಮೇಲಿನ ಸ್ಪಷ್ಟ ವಂಚನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೀಸಲಿಟ್ಟ ಹಣ ದುರ್ಬಳಕೆಯಾಗದಂತೆ ಕಾಯ್ದೆಗೆ ತಿದ್ದುಪಡಿ ತರಲೇಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಒಟ್ಟು 19 ಬೇಡಿಕೆ ಮುಂದಿಟ್ಟಿದ್ದು, ಭೂಮಿ ಮತ್ತು ವಸತಿ ವಿಷಯದಲ್ಲಿ ಪ್ರಮುಖ ಒತ್ತಾಯ ಮಾಡಲಾಗಿದೆ. ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸಬೇಕು. ನಿವೇಶನ ರಹಿತರಿಗೆ ಜಮೀನು ಖರೀದಿಗೆ ನೀಡುವ ಮೊತ್ತವನ್ನು ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಮೂರರಿಂದ ನಾಲ್ಕು ಪಟ್ಟು ಹೆಚ್ಚಿಸಬೇಕು. ಪಿಟಿಸಿಎಲ್ ಕಾಯ್ದೆಯಲ್ಲಿ ಗ್ರ್ಯಾಂಟೆಡ್ ಲ್ಯಾಂಡ್ ಎಂಬ ಪದದ ಬದಲು ಸರ್ಟೇನ್ ಲ್ಯಾಂಡ್ ಎಂದು ತಿದ್ದುಪಡಿ ತರಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಭೂ ರಹಿತ ಎಸ್‌ಸಿ ಮತ್ತು ಎಸ್‌ಟಿ ಕುಟುಂಬಗಳಿಗೆ ಅರಣ್ಯ ನಿಯಮಗಳ ಅಡಿಯಲ್ಲಿ ಗಿಡಮರಗಳಿಲ್ಲದ 1 ಹೆಕ್ಟೇರ್ ಭೂಮಿಯನ್ನು ಹಣ್ಣಿನ ಗಿಡಗಳ ಬೆಳೆಸಲು ಲೀಸ್ ಆಧಾರದಲ್ಲಿ ನೀಡಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ. ಜೊತೆಗೆ ಮರ್ಯಾದಾ ಹತ್ಯೆ ತಡೆಯಲು ವಿಶೇಷ ಕಾಯ್ದೆ ಜಾರಿಗೊಳಿಸಬೇಕು ಹಾಗೂ 2020ರ ಗೋಹತ್ಯೆ ನಿಷೇಧ ಕಾಯ್ದೆ ರದ್ದುಪಡಿಸಬೇಕು. ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಲ್ಲಿ ಐದು ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಗುತ್ತಿಗೆ ನೌಕರರನ್ನು ಖಾಯಂಗೊಳಿಸಬೇಕು ಎಂಬ ಬೇಡಿಕೆಯೂ ಮನವಿಯಲ್ಲಿದೆ.