ಪಠ್ಯಪುಸ್ತಕಗಳು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪೂರಕ

KannadaprabhaNewsNetwork |  
Published : Sep 29, 2025, 03:02 AM IST
ಕುರುಗೋಡು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ “ರಾಜ್ಯ ಶಿಕ್ಷಣ ನೀತಿ ಅನ್ವಯ 2025-26 ನೇ ಸಾಲಿನ ಶೈಕ್ಷಣಿಕ ಮೂರನೇ ಸೆಮಿಸ್ಟರ್‌ನ ಪದವಿ ಕನ್ನಡ ಭಾಷಾ ಪಠ್ಯಪುಸ್ತಕಗಳ ಲೋಕಾರ್ಪಣೆ ಹಾಗೂ ಕಾರ್ಯಾಗಾರ” ವನ್ನು ಬಳ್ಳಾರಿ ವಿವಿ ಕುಲಸಚಿವ ಪಿ.ನಾಗರಾಜು ಉದ್ಘಾಟಿಸಿದರು. | Kannada Prabha

ಸಾರಾಂಶ

ವಿದ್ವಾಂಸರಿಂದ ವಿಷಯವಾರು ವೈವಿಧ್ಯಮಯ ವಿಷಯ ಸಂಗ್ರಹಿಸಿದ ಪಠ್ಯಪುಸ್ತಕಗಳು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪೂರಕವಾಗಿವೆ

ಕುರುಗೋಡು: ವಿದ್ವಾಂಸರಿಂದ ವಿಷಯವಾರು ವೈವಿಧ್ಯಮಯ ವಿಷಯ ಸಂಗ್ರಹಿಸಿದ ಪಠ್ಯಪುಸ್ತಕಗಳು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪೂರಕವಾಗಿವೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಆಡಳಿತ ವಿಭಾಗದ ಕುಲಸಚಿವ ಪಿ.ನಾಗರಾಜು ಹೇಳಿದರು.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಸಾರಾಂಗ ಹಾಗೂ ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕುರುಗೋಡು ಸಹಯೋಗದಲ್ಲಿ ಕುರುಗೋಡು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ “ರಾಜ್ಯ ಶಿಕ್ಷಣ ನೀತಿ ಅನ್ವಯ 2025-26ನೇ ಸಾಲಿನ ಶೈಕ್ಷಣಿಕ ಮೂರನೇ ಸೆಮಿಸ್ಟರ್‌ನ ಪದವಿ ಕನ್ನಡ ಭಾಷಾ ಪಠ್ಯಪುಸ್ತಕಗಳ ಲೋಕಾರ್ಪಣೆ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪಠ್ಯಪುಸ್ತಕಗಳು ವಿದ್ಯಾರ್ಥಿಗಳಿಗೆ ಮಾರ್ಗಸೂಚಿಗಳಾಗಿದ್ದು, ಸಾಹಿತ್ಯದ ಅಭಿರುಚಿಯನ್ನು ಮೂಡಿಸುವಲ್ಲಿ, ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಸಹಕಾರಿಯಾಗಿವೆ ಎಂದು ತಿಳಿಸಿದರು.

ಸಾಹಿತಿ ಹಾಗೂ ಸಿಂಡಿಕೇಟ್ ಸದಸ್ಯ ಡಾ.ಅಮರೇಶ್ ನುಗಡೋಣಿ ಸ್ನಾತಕ ಪದವಿಯ ಪಠ್ಯಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿ, ಕನ್ನಡ ಸಾಹಿತ್ಯದ ಚರಿತ್ರೆಯ ಅರಿವು ಮತ್ತು ಕನ್ನಡ ಭಾಷಾ ಜ್ಞಾನ ನೀಡುವ ಕಾರ್ಯವನ್ನು ಪಠ್ಯಪುಸ್ತಕಗಳು ಮಾಡುತ್ತವೆ. ವಿದ್ಯಾರ್ಥಿಗಳು ಪಠ್ಯ ಪುಸ್ತಕದ ಜ್ಞಾನಕ್ಕೆ ಸೀಮಿತವಾಗದೇ ಸ್ಪರ್ಧಾತ್ಮಕ ಪ್ರಪಂಚಕ್ಕೆ ಉಪಯುಕ್ತವಾಗುವ ಜ್ಞಾನವನ್ನು ಸಂಪಾದಿಸಬೇಕು ಎಂದು ಕರೆ ನೀಡಿದರು.

ವಿಶ್ವವಿದ್ಯಾಲಯವು ಸಂಪಾದಕರಿಗೆ ಚಿಂತನ-ಮಂಥನ ಕಾರ್ಯಾಗಾರವನ್ನು ನಡೆಸಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವ ಉತ್ತಮ ಪಠ್ಯಕ್ರಮವನ್ನು ರೂಪಿಸಬೇಕಾಗಿದೆ ಎಂದು ತಿಳಿಸಿದರು.

ಕಲಾ ವಿಭಾಗದ ಡೀನ್ ಮತ್ತು ಕನ್ನಡ ಅಧ್ಯಯನ ಮಂಡಳಿಯ ಅಧ್ಯಕ್ಷ ಡಾ.ರಾಬರ್ಟ್ ಜೋಸ್ ಅವರು ಮಾತನಾಡಿ, ಪಠ್ಯಪುಸ್ತಕಗಳು ವಿದ್ಯಾರ್ಥಿಗಳ ಸಾಹಿತ್ಯ ಲೋಕಕ್ಕೆ ಮಾರ್ಗವಾಗಿದ್ದು, ಇಂದಿನ ಡಿಜಿಟಲ್ ಯುಗದಲ್ಲಿ ಉತ್ತಮ ಪಠ್ಯಪುಸ್ತಕಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆಸಕ್ತಿ ಹುಟ್ಟಿಸಬೇಕಾದ ಅಗತ್ಯವಿದೆ ಎಂದರು.

ಪ್ರಸಾರಾಂಗದ ನಿರ್ದೇಶಕ ಡಾ.ತಿಪ್ಪೇರುದ್ರ ಪ್ರಾಸ್ತವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ.ಶಾಂತಲಾ ವಹಿಸಿದ್ದರು. ಡಾ.ಶಶಿಕಾಂತ್ ಅವರು ಸ್ವಾಗತಿಸಿದರು. ಮಂಜುನಾಥಸ್ವಾಮಿ ನಿರೂಪಿಸಿದರು.

ಈ ಸಂದರ್ಭದಲ್ಲಿ ಪ್ರಸಾರಾಂಗದ ಹಿಂದಿನ ನಿರ್ದೇಶಕ ಡಾ.ಅರುಣಕುಮಾರ ಲಗಶೆಟ್ಟಿ, ವಾಣಿಜ್ಯ ಸೌರಭ-2 ಪಠ್ಯಪುಸ್ತಕದ ಸಂಪಾದಕ ಸಿ.ದೇವಣ್ಣ, ರಘುಪ್ರಸಾದ್, ಮೌನೇಶ್ ಬಡಿಗೇರ್, ಕಾಲೇಜಿನ ಅಧ್ಯಾಪಕ ಡಾ.ಚನ್ನಬಸವಯ್ಯ ಹೆಚ್.ಎಂ., ಮುರಳಿಶಂಕರಗೌಡ, ಡಾ.ಜ್ಞಾನ ಪ್ರಸೂನಾಂಭ, ಮಧುಸೂಧನ್, ವೀರಲಿಂಗಪ್ಪ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ಕುರಿತು ಇಂದು ರಾಜ್ಯ ವಿಶೇಷ ಸಂಪುಟ ಸಭೆ
ಫೆ.13ಕ್ಕೆ ಕಾಂಗ್ರೆಸ್‌ ಸರ್ಕಾರಕ್ಕೆ 1000 ದಿನ