ಧಾರವಾಡ: ಶ್ರೀ ಮದಥಣಿ ಮುರುಘೇಂದ್ರ ಮಹಾಶಿವಯೋಗಿಗಳ 94ನೇ ಜಾತ್ರಾ ಮಹೋತ್ಸವ ಬುಧವಾರ ಸಂಭ್ರಮ, ಸಡಗರ ಹಾಗೂ ಅದ್ಧೂರಿಯಿಂದ ನೆರವೇರಿತು.
ಮಠದ ಸದ್ಭಕ್ತರು ಶ್ರದ್ಧಾಭಕ್ತಿಯಿಂದ ರಥೋತ್ಸವದಲ್ಲಿ ಭಾಗವಹಿಸಿ ಜೈ ಮುರಘೇಶ, ಜೈ ಮೃತ್ಯುಂಜಯ, ಜೈ ಬಸವವೇಶ, ಜೈ ಮಹಾಂತೇಶ ಜಯಘೋಷಣೆ ಕೂಗಿದರು.
ಮುರಘಾಮಠದಿಂದ ಹೊರಟ ರಥ ಹಾವೇರಪೇಠ ವೃತ್ತಕ್ಕೆ ತೆರಳಿ ಮರಳಿ ಶ್ರೀ ಮಠಕ್ಕೆ ಆಗಮಿಸಿತು. ಭಕ್ತರು ಮಾರ್ಗದುದ್ದಕ್ಕೂ ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಸಮರ್ಪಿಸಿ ಭಕ್ತಿಯಲ್ಲಿ ಮಿಂದೆದ್ದರು. ಈ ಸಂದರ್ಭದಲ್ಲಿ ಚಂದ್ರಶೇಖರ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಮಹಾಂತ ಸ್ವಾಮಿಜಿ ಮತ್ತಿತರರು ಇದ್ದರು. ಶ್ರೀ ಬಸವಲಿಂಗ ಸ್ವಾಮೀಜಿ, ಶ್ರೀ ವಿರುಪಾಕ್ಷ ಸ್ವಾಮೀಜಿ, ಶ್ರೀ ಬಸವಶಾಂತಲಿಂಗ ಸ್ವಾಮೀಜಿ, ಶ್ರೀ ಸ್ವಾಮಿನಾಥ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಇದ್ದರು.ಪ್ರಶಸ್ತಿ ಪ್ರದಾನ
ಪ್ರಶಸ್ತಿ ಸ್ವೀಕರಿಸಿದ ಡಾ.ಚನ್ನವೀರ ಸ್ವಾಮೀಜಿ, ಅಥಣಿ ಶಿವಯೋಗಿಗಳು ಇಷ್ಟಲಿಂಗದ ಪರಿಕಲ್ಪನೆ ಹಾಗೂ ಮಾನವೀಯ ಸಿದ್ದಾಂತವನ್ನು ಜನಮನಕ್ಕೆ ತಲುಪಿಸಿದರು. ಇಲ್ಲಿ ಯಾವುದೇ ಒಂದು ಜಾತಿ, ಒಬ್ಬ ವ್ಯಕ್ತಿಗೆ ಮೀಸಲಾಗಿಸದೆ ಸಕಲರಿಗೆ ಲೇಸಬಯಸಿದರು. ಮುರಘಾಮಠದಲ್ಲಿ ಧರ್ಮ, ಜಾತಿ ವರ್ಗ, ವರ್ಣ ಭೇದವಿಲ್ಲದೆ ಸಂಸ್ಕಾರದಿಂದ ಎಲ್ಲರನ್ನೂ ಒಂದುಗೂಡಿಸಿ ಸಮಾನತೆಯನ್ನು ತರುವ ಕೆಲಸ ಮಾಡುತ್ತದೆ. ಮೃತ್ಯುಂಜಯಪ್ಪಗಳು, ಮಹಾಂತಪ್ಪಗಳು ನಾಡಿಗೆ ಮಾದರಿಯಾಗಿದ್ದಾರೆ. ಅವರ ಹೆಸರಿನ ಪ್ರಶಸ್ತಿ ಮನಸ್ಸಿಗೆ ಸಮಾಧಾನ ತಂದಿದೆ ಎಂದರು. ತೋಂಟದಾರ್ಯದ ನಿಜಗುಣ ಪ್ರಭು ಸಮ್ಮುಖ ವಹಿಸಿದ್ದರು.