ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ನಗರಸಭೆ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 9 ಸದಸ್ಯರು, 3 ಮಂದಿ ಪಕ್ಷೇತರರು, 6 ಜನ ಕಾಂಗ್ರೆಸ್‌ನವರು ಬಿಜೆಪಿ ಬಂದಿದ್ದು, ಸಂಸದ ಒಬ್ಬರು, ಬಿಜೆಪಿಗೆ ಒಟ್ಟು 19 ಮತಗಳು ಬಂದಿವೆ. ಕಾಂಗ್ರೆಸ್ 10 ಸದಸ್ಯರು, ಶಾಸಕ ಎಂಎಲ್ಸಿ ಸೇರಿದಂತೆ 3, ಓರ್ವ ಪಕ್ಷೇತರ, ಇಬ್ಬರು ಜೆಡಿಎಸ್‌ನವರು ಒಟ್ಟು ಕಾಂಗ್ರೆಸ್‌ಗೆ 16 ಬಂದಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ ಎನ್ನಲಾಗುತ್ತಿದೆ.
ಶಾಸಕ ಪ್ರದೀಪ್ ಈಶ್ವರ್, ವಿಧಾನ ಪರಿಷತ್ ಸದಸ್ಯರಾದ ಅನಿಲ್ ಕುಮಾರ್ ಹಾಗೂ ಎಂ.ಆರ್.ಸೀತಾರಾಂ ಮತದಾನ ಮಾಡಿದರು. ವಿಧಾನ ಪರಿಷತ್ ಸದಸ್ಯರಾದ ಅನಿಲ್ ಕುಮಾರ್ ಹಾಗೂ ಎಂ.ಆರ್.ಸೀತಾರಾಂ ಮತದಾನ ಮಾಡಲು ಅರ್ಹರಲ್ಲ ಎಂದು ಡಾ.ಕೆ.ಸುಧಾಕರ್ ಬೆಂಬಲಿಗ ಹಾಗೂ ಮಾಜಿ ನಗರಸಭಾ ಸದಸ್ಯ ಆನಂದಬಾಬುರೆಡ್ಡಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ ಕಾರಣ ಮತದಾನಕ್ಕೆ ಅವಕಾಶ ನೀಡಿ, ಚುನಾವಣೆ ನಡೆಸಲು ಕೋರ್ಟ್ ಸೂಚನೆ ನೀಡಿದ್ದರೂ ಫಲಿತಾಂಶ ರಿಟ್ ಅರ್ಜಿಯ ಫಲಿತಾಂಶಕ್ಕೆ ಒಳಪಟ್ಟಿರುವುದಾಗಿ ಆದೇಶಿಸಿತ್ತು. ಹಾಗಾಗಿ ಚುನಾವಣೆ ನಡೆದರೂ ಅಧಿಕೃತವಾಗಿ ಚುನಾವಣಾಧಿಕಾರಿ ಫಲಿತಾಂಶ ಪ್ರಕಟ ಮಾಡಲಿಲ್ಲ.ಅನಧಿಕೃತ ಮಾಹಿತಿ ಮೇರೆಗೆ ಸುಧಾಕರ್ ಬೆಂಬಲಿತ ಗಜೇಂದ್ರ ಅಧ್ಯಕ್ಷರಾಗಿ ಹಾಗೂ ಗ್ಯಾಸ್ ನಾಗರಾಜು ಉಪಾಧ್ಯಕ್ಷರಾಗಿ ಜಯಗಳಿಸಿದ್ದಾರೆ ಎಂದು ಬೆಂಬಲಿಗರ ಹೇಳಿಕೊಳ್ಳುತ್ತಿದ್ದಾರೆ. ಸಂಸದ ಡಾ.ಕೆ.ಸುಧಾಕರ್ ಬೆಂಬಲಿತ ಬಿಜೆಪಿಯಿಂದ ನಗರಸಭೆ ಸದಸ್ಯರಾದ ಗಜೇಂದ್ರ ಅಧ್ಯಕ್ಷ ಹಾಗೂ ಗ್ಯಾಸ್ ನಾಗರಾಜು ಉಪಾಧ್ಯಕ್ಷ ಸ್ಥಾನಗಳಿಗೆ ಮತ್ತು ಕಾಂಗ್ರೆಸ್‌ನಿಂದ ಅಂಬರೀಶ್ ಅಧ್ಯಕ್ಷ ,ನರಸಿಂಹಮೂರ್ತಿ ಉಪಾಧ್ಯಕ್ಷ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದ್ದರು.
ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ನಗರಸಭೆ ಚುನಾವಣೆಗೆ ಸಂಸದ ಕೆ.ಸುಧಾಕರ್ 7 ರಿಂದ 8 ಕೋಟಿ ರು. ಖರ್ಚು ಮಾಡಿ ಕಾಂಗ್ರೆಸ್ ಸದಸ್ಯರನ್ನು ಖರೀದಿ ಮಾಡಿದ್ದಾರೆ. ಅಷ್ಟೇ ಅಲ್ಲ, ಅವರು ಹೆಣಗಳ ಮೇಲೆ ದುಡ್ಡು ಮಾಡಿ ನಗರಸಭೆ ಚುನಾವಣೆಗೆ ಹಾಕಿದ್ದಾರೆ. ನಮ್ಮ ಬಳಿ ಹಣ ಇಲ್ಲ, ಮುಂದಿನ ನಗರಸಭೆ ಚುನಾವಣೆಯಲ್ಲಿ ‘ಕೈ’ ಬಾವುಟ ಹಾರಿಸುತ್ತೇನೆ. ನಿನ್ನೆ ನಗರಸಭೆ ಚುನಾವಣೆ ಬೆನ್ನಲ್ಲೇ ಜೆಡಿಎಸ್ನ ಇಬ್ಬರು ನಗರಸಭೆ ಸದಸ್ಯರಾದ ಆರ್.ಮಟಮಪ್ಪ ಹಾಗೂ ವೀಣಾ ರಾಮು ಎನ್ನುವವರು ನಾಪತ್ತೆಯಾಗಿದ್ದರು. ಆ ಮೂಲಕ ತೀವ್ರ ಹಣಾಹಣಿಗೆ ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆ ಕಾರಣವಾಗಿತ್ತು. ಇದೀಗ ಶಥಾಯಗತಾಯವಾಗಿ ಬಿಜೆಪಿಗೆ ನಗರಸಭೆ ಚುಕ್ಕಾಣಿ ಒಲಿದಿದೆ ಎನ್ನಲಾಗುತ್ತಿದೆ.
ಸುಧಾಕರ್‌ನ್ನು ಜೈಲಿಗೆ ಹಾಕುವವರೆಗೂ ಬಿಡಲ್ಲ: ಸಂಸದ ಡಾ.ಕೆ.ಸುಧಾಕರ್ ಅಲ್ಲ, ಅವರ ಅಪ್ಪನ ಕೈಯಲ್ಲೂ ನನ್ನ ಏನೂ ಮಾಡೋಕೆ ಆಗಲ್ಲ. ಆತ ಒಬ್ಬ ಕೋವಿಡ್ ಕಳ್ಳ. ಅವನನ್ನು ಜೈಲಿಗೆ ಹಾಕುವವರೆಗೂ ಬಿಡಲ್ಲ. ತಾಕತ್ತು, ದಮ್ಮು ಇದ್ರೆ ಬಚಾವ್ ಆಗಲಿ ನೊಡೋಣ ಎಂದು ಶಾಸಕ ಪ್ರದೀಪ್ ಈಶ್ವರ್ ಸವಾಲ್ ಹಾಕಿದರು.