ರೈಲ್ ಸೌಧದ ಅಂದ ಹೆಚ್ಚಿಸಿದ ಕಲಾ ಪ್ರಪಂಚ!

KannadaprabhaNewsNetwork |  
Published : Feb 12, 2026, 03:00 AM IST
ಹುಬ್ಬಳ್ಳಿಯ ಗದಗ ರಸ್ತೆಯಲ್ಲಿರುವ ರೈಲ್‌ ಸೌಧದ ಮುಖ್ಯ ಪ್ರವೇಶದ್ವಾರದಲ್ಲಿ ಆಕರ್ಷಕ ಭಿತ್ತಿಚಿತ್ರಗಳ ಅಳವಡಿಸಿರುವುದು. | Kannada Prabha

ಸಾರಾಂಶ

"ಕಲಾ ಸಂಗ್ರಹ " ಹೆಸರಿನಡಿ ರೈಲ್‌ ಸೌಧದ ಮುಖ್ಯ ಪ್ರವೇಶದ್ವಾರದಲ್ಲಿರುವ ಗೋಡೆ ಹಾಗೂ ಕಂಬಗಳ ಮೇಲೆ ಕರ್ನಾಟಕ ಮತ್ತು ಗೋವಾದ ನೈಋತ್ಯ ಪ್ರದೇಶದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿನಿಧಿಸುವ ಬಗೆ-ಬಗೆಯ ಕಲಾತ್ಮಕಗಳನ್ನು ಪ್ರಸ್ತುತಪಡಿಸಲಾಗಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ಗದಗ ರಸ್ತೆಯಲ್ಲಿರುವ ನೈಋತ್ಯ ರೈಲ್ವೆಯ ರೈಲ್‌ ಸೌಧಕ್ಕೆ ಹೋದರೆ ಕಲಾ ಪ್ರಪಂಚವೇ ಕಣ್ಮುಂದೆ ಬರುತ್ತದೆ. ಇಲ್ಲಿನ ಪ್ರವೇಶ ದ್ವಾರದಲ್ಲಿರುವ ಗೋಡೆ, ಕಂಬಗಳಲ್ಲಿ ಪ್ರಮುಖ ಪ್ರವಾಸಿ ತಾಣ, ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಉಬ್ಬು ಚಿತ್ರಗಳನ್ನು ಅಳವಡಿಸಲಾಗಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ರಾಜ್ಯದಲ್ಲಿ ಇರುವುದೊಂದೇ ಈ ರೈಲ್‌ ಸೌಧ. ಇಲ್ಲಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ರೈಲ್ವೆ ಅಧಿಕಾರಿಗಳು, ಸಿಬ್ಬಂದಿ ಕಚೇರಿ ಕೆಲಸಗಳಿಗೆ ಆಗಮಿಸುತ್ತಾರೆ. ಜತೆಗೆ ಸಾರ್ವಜನಿಕರು ಇಲ್ಲಿನ ಅಂದ ನೋಡಲು ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಅವರಲ್ಲಿ ನಮ್ಮ ಕಲೆ, ಸಾಹಿತ್ಯ, ಸಾಂಸ್ಕೃತಿಕ ಪರಂಪರೆ, ಇತಿಹಾಸದ ಅರಿವು ಮೂಡಿಸುವ ಉದ್ದೇಶದಿಂದ ಅಧಿಕಾರಿಗಳು ಸ್ವಆಸಕ್ತಿ ವಹಿಸಿ ಕಲಾ ಪ್ರಪಂಚ ಸೃಷ್ಟಿಸಿದ್ದಾರೆ.

"ಕಲಾ ಸಂಗ್ರಹ " ಹೆಸರಿನಡಿ ರೈಲ್‌ ಸೌಧದ ಮುಖ್ಯ ಪ್ರವೇಶದ್ವಾರದಲ್ಲಿರುವ ಗೋಡೆ ಹಾಗೂ ಕಂಬಗಳ ಮೇಲೆ ಕರ್ನಾಟಕ ಮತ್ತು ಗೋವಾದ ನೈಋತ್ಯ ಪ್ರದೇಶದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿನಿಧಿಸುವ ಬಗೆ-ಬಗೆಯ ಕಲಾತ್ಮಕಗಳನ್ನು ಪ್ರಸ್ತುತಪಡಿಸಲಾಗಿದೆ.

ಸಮಗ್ರ ಮಾಹಿತಿ:

ಇಲ್ಲಿ ಕೇವಲ ಉಬ್ಬು ಚಿತ್ರಗಳನ್ನಷ್ಟೇ ಹಾಕದೇ ಆ ಚಿತ್ರದ ಕುರಿತು ಸಮಗ್ರ ಮಾಹಿತಿ ಪ್ರಕಟಿಸಲಾಗಿದೆ. ಇದರಿಂದಾಗಿ ಇಲ್ಲಿಗೆ ಬರುವ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಯಾವ ಕಲೆ, ಯಾವ ಚಿತ್ರ? ಎಲ್ಲಿದೆ ಎಂಬುದರ ಕುರಿತು ಸಮಗ್ರ ಮಾಹಿತಿ ಪಡೆದುಕೊಳ್ಳಲು ಸಹಕಾರಿಯಾಗಿದೆ. ಈಗಾಗಲೇ ಮುಖ್ಯ ಪ್ರವೇಶದ್ವಾರದಲ್ಲಿ ಹಾಗೂ ಮೊದಲ ಮಹಡಿಯ ಕೆಲ ಭಾಗಗಳಲ್ಲಿ ಉಬ್ಬು ಚಿತ್ರಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ರೈಲ್‌ಸೌಧದ ಎಲ್ಲ ಮಹಡಿಗಳಲ್ಲಿರುವ ಗೋಡೆ ಮತ್ತು ಕಂಬಗಳಿಗೆ ಉಬ್ಬು ಚಿತ್ರಗಳನ್ನು ಅಳವಡಿಸುವ ಚಿಂತನೆಯಿದೆ. ಆದಷ್ಟು ಬೇಗನೆ ಇದೂ ಸಹ ಕಾರ್ಯರೂಪಕ್ಕೆ ಬರಲಿದೆ.

ಯಾವೆಲ್ಲ ಕಲಾಚಿತ್ರಗಳಿವೆ?

ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟ, ಬನವಾಸಿಯ ಮಧುಕೇಶ್ವರ ದೇವಾಲಯದ ಪ್ರವೇಶದ್ವಾರ ಕಾಯುತ್ತಿರುವ ಆನೆ, ಬಸವಣ್ಣನವರು, ಅಕ್ಕಮಹಾದೇವಿ, ಹಳೆಯ ಗೋವಾದಲ್ಲಿರುವ ಬೊಮ್ ಜೀಸಸ್‌ ಬೆಸಿಲಿಕಾ, ಬೇಲೂರು ಚೆನ್ನಕೇಶವ ದೇವಾಲಯದ ಬೇಲೂರು ಶಿಲಾಬಾಲಿಕೆ, ಬಾದಾಮಿಯ 7ನೇ ಶತಮಾನದ ಭೂತನಾಥ ದೇವಾಲಯ, 15ನೇ ಶತಮಾನದಲ್ಲಿ ನಿರ್ಮಿಸಿರುವ ಬೀದರ್‌ ಕೋಟೆ, 11-12ನೇ ಶತಮಾನದಲ್ಲಿ ನಿರ್ಮಿಸಿರುವ ಉಣಕಲ್ಲಿನ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನ, 12ನೇ ಶತಮಾನದಲ್ಲಿ ನಿರ್ಮಿಸಿರುವ ಗದಗ ಜಿಲ್ಲೆಯ ಡಂಬಳದ ದೊಡ್ಡಬಸಪ್ಪ ದೇವಸ್ಥಾನ, ಗೋವಾದ ಮಾಂಡೋವಿ ನದಿಯ ದೂದಸಾಗರ್‌ ಜಲಪಾತ, ಜೋಗಫಾಲ್ಸ್, ಕಾಗಿನೆಲೆ ಕನಕದಾಸ, ಮುಂಡಗೋಡ, ಮುರುಡೇಶ್ವರ ದೇವಸ್ಥಾನ, ಗೋಕರ್ಣದ ಓಂ ಬೀಚ್, ಕಿತ್ತೂರ ರಾಣಿ ಚೆನ್ನಮ್ಮ, ಸಂಡೂರಿನ ಅರಮನೆ, ಕಲಬುರಗಿ ಶರಣಬಸವೇಶ್ವರ ದೇವಸ್ಥಾನ, ಕ್ರಾಂತವೀರ ಸಂಗೊಳ್ಳಿ ರಾಯಣ್ಣ, ಹಂಪಿಯ ಲೋಟಸ್(ಕಮಲ್) ಮಹಲ್‌, ವಿಜಯಪುರದ ಗಗನ್‌ ಮಹಲ್, ಹಂಪಿಯ ಶ್ರೀವಿರೂಪಾಕ್ಷ ದೇವಸ್ಥಾನ, ಉತ್ತರ ಕನ್ನಡದಲ್ಲಿರುವ ಯಾಣ ಗುಹೆಗಳು, ಯಕ್ಷಗಾನ, ಡೊಳ್ಳು ಕುಣಿತ ಹೀಗೆ 40ಕ್ಕೂ ಅಧಿಕ ಉಬ್ಬು ಕಲಾಕೃತಿಗಳು ಜನರ ಮನಸ್ಸನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ.

ರೈಲ್‌ ಸೌಧಕ್ಕೆ ತೆರಳಿದರೆ ಸಾಕು ಇಡೀ ಕಲಾ ಪ್ರಪಂಚವೇ ನಮ್ಮ ಕಣ್ಣಮುಂದೆ ಕಾಣಸಿಗುತ್ತದೆ. ಇಲ್ಲಿಗೆ ಆಗಮಿಸುವ ಸಿಬ್ಬಂದಿ, ಸಾರ್ವಜನಿಕರಿಗೆ ಈ ಮೂಲಕ ನಾಡಿನ ಸಂಸ್ಕೃತಿ ತಿಳಿಸುವ ಕಾರ್ಯ ಮಾಡುತ್ತಿರುವುದು ಅಭಿನಂದನಾರ್ಹ.

- ಮಿಲಿಂದರ್‌ ಕೆ, ಪ್ರಾನ್ಸಿಸ್‌ ಯಾಕೋಬ್, ರೈಲ್ವೆ ಸಿಬ್ಬಂದಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದೂ ಧರ್ಮ ಮನಸ್ಸು ಜೋಡಿಸುವ ಸೇತುವೆ
ಸರ್ಕಾರಿ ಕನ್ನಡ ಶಾಲೆಗಳ ಬಾಗಿಲು ಮುಚ್ಚುತ್ತಿರುವುದು ವಿಷಾದನೀಯ: ಬಣ್ಣದಮಠದ ಶ್ರೀ ಶಿವಲಿಂಗ ಸ್ವಾಮೀಜಿ