ನವಲಗುಂದ: ಸಂಘದ ಬೆಳವಣಿಗೆಗೆ ಎಲ್ಲ ಸದಸ್ಯರ ಸಹಕಾರ ಅಗತ್ಯವಾಗಿದೆ. ಸಂಘ ಹಲವಾರು ರಚನಾತ್ಮಕ ಚಟುವಟಿಕೆ ಹಮ್ಮಿಕೊಂಡು ಕ್ರಿಯಾಶೀಲವಾಗಿದೆ. ಎಲ್ಲ ಸದಸ್ಯರು ಸಂಘದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಂಭು ಪಾಟೀಲ್ ನಲವಡಿ ಹೇಳಿದರು.
ಸಮಾಜಕ್ಕೆ ಹಾಗೂ ಯುವಜನತೆಗೆ ಸೂಕ್ತ ಮಾರ್ಗದರ್ಶನ ನೀಡುವುದರ ಜತೆಗೆ ತಮ್ಮ ಅನುಭವಗಳನ್ನು ಸಮಾಜದ ಅಭಿವೃದ್ಧಿಗಾಗಿ ಬಳಸುತ್ತಿರುವುದರಿಂದ ಜನರ ಮೆಚ್ಚುಗೆಗೂ ಪಾತ್ರವಾಗಿದೆ.
ನಿವೃತ್ತ ಸರ್ಕಾರಿ ನೌಕರರ ಸಂಘಕ್ಕೆ ಕಚೇರಿ ಅವಶ್ಯಕತೆ ಇದ್ದು, ಇದಕ್ಕಾಗಿ ಜಾಗ ಮಂಜೂರಾತಿಗಾಗಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುತ್ತದೆ. ನಿವೃತ್ತ ನೌಕರರ ಹಿತರಕ್ಷಣೆಗಾಗಿ ಸಂಘ ಸದಾ ಸಿದ್ಧ ಎಂದರು.ಇದೆ ವೇಳೆ ಅವರನ್ನು ಸನ್ಮಾನಿಸಲಾಯಿತು.ತಾಲೂಕಾಧ್ಯಕ್ಷ ಕಲ್ಲಯ್ಯ ಹೊಸಮನಿ ಮಾತನಾಡಿ, ಸಂಘದ ಎಲ್ಲ ಚಟುವಟಿಕೆಗಳು ಪಾರದರ್ಶಕವಾಗಿದ್ದು, ಪದಾಧಿಕಾರಿಗಳು ಪ್ರಾಮಾಣಿಕವಾಗಿ ಹಾಗೂ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿ ಸಂಘದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ ಎಂದರು.
ಆರಂಭದಲ್ಲಿ ಮೃತಪಟ್ಟಿರುವ ನಿವೃತ್ತ ನೌಕರರಿಗೆ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು.ಸಂಘದ ಗೌರವ ಅಧ್ಯಕ್ಷ ಎ.ಎಂ. ನದಾಫ್, ಪಿ.ಎಸ್. ಹಿರೇಮಠ, ಉಪಾಧ್ಯಕ್ಷ ಆರ್.ಬಿ. ಬಾಳನಗೌಡ, ಕಾರ್ಯದರ್ಶಿ ಎಸ್.ವಿ. ಕುಲಕರ್ಣಿ, ಖಜಾಂಚಿ ಎಸ್.ಆರ್. ಬಡೇಕಾನ ಸೇರಿ ಸಂಘದ ಮಹಿಳಾ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.