ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಅಧಿಕಾರಿಗಳು

KannadaprabhaNewsNetwork | Published : Oct 17, 2024 12:54 AM

ಸಾರಾಂಶ

ಚಳ್ಳಕೆರೆ: ತಾಲೂಕಿನ ತಳಕು ಹೋಬಳಿ ಗೌರಸಮುದ್ರ ಗ್ರಾಮದಲ್ಲಿ ಮದ್ಯದಂಗಡಿಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಹಾಗೂ ಪಂಚಾಯಿತಿ ಸದಸ್ಯರು ಹಮ್ಮಿಕೊಂಡಿದ್ದ ಧರಣಿಗೆ ಮಣಿದ ಅಬಕಾರಿ ಇಲಾಖೆ ಅಧಿಕಾರಿಗಳು ಬಾರ್‌ ತೆರವು ಗೊಳಿಸಿದ್ದಾರೆ.

ಚಳ್ಳಕೆರೆ: ತಾಲೂಕಿನ ತಳಕು ಹೋಬಳಿ ಗೌರಸಮುದ್ರ ಗ್ರಾಮದಲ್ಲಿ ಮದ್ಯದಂಗಡಿಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಹಾಗೂ ಪಂಚಾಯಿತಿ ಸದಸ್ಯರು ಹಮ್ಮಿಕೊಂಡಿದ್ದ ಧರಣಿಗೆ ಮಣಿದ ಅಬಕಾರಿ ಇಲಾಖೆ ಅಧಿಕಾರಿಗಳು ಬಾರ್‌ ತೆರವು ಗೊಳಿಸಿದ್ದಾರೆ.

ಗೌರಸಮುದ್ರ ಗ್ರಾಮದಲ್ಲಿ ಖಾಸಗಿ ಬಾರೊಂದು ಕಳೆದ ಕೆಲವು ತಿಂಗಳಿನಿಂದ ವಹಿವಾಟು ನಡೆಸುತ್ತಿದ್ದ ಬಗ್ಗೆ ಆಕ್ರೋಶಗೊಂಡ ಗ್ರಾಮಸ್ಥರು ಹಾಗೂ ಪಂಚಾಯಿತಿ ಸದಸ್ಯರು ಬಾರನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಕಳೆದ ಕಳೆದ ಭಾನುವಾರದಿಂದ ಪ್ರತಿಭಟನೆ ನಡೆಸುತ್ತಿದ್ದರು.

ಪ್ರತಿಭಟನಾ ಸಂದರ್ಭದಲ್ಲಿ ಅಬಕಾರಿ ಇಲಾಖೆ, ತಾಲ್ಲೂಕು ಆಡಳಿತದ ಬಗ್ಗೆ ಬೇಸರಗೊಂಡಿದ್ದ ಪ್ರತಿಭಟನಕಾರರು ಬಾರ್ ಸ್ಥಳಾಂತರ ಮಾಡುವ ತನಕ ಪ್ರತಿಭಟನೆಯನ್ನು ಮುಂದುವರೆಸುವುದಾಗಿ ತಿಳಿಸಿ ಅಹೋರಾತ್ರಿ ಪಟ್ಟುಬಿಡದೆ ಧರಣಿ ನಡೆಸಿದ್ದರು. ಗ್ರಾಮದ ಮಹಿಳೆಯರೂ ಸ್ವಯಂ ಪ್ರೇರಣೆಯಿಂದ ನೂರಾರು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿ ಬಾರ್‌ ತೆರವಿಗೆ ಆಗ್ರಹಿಸಿದ್ದರು.

ಮಂಗಳವಾರ ತಹಶೀಲ್ದಾರ್ ರೇಹಾನ್‌ಪಾಷ ಗ್ರಾಮಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರನ್ನು ಕುರಿತು ಮಾತನಾಡಿ, ಅಬಕಾರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಬಾರ್ ಸ್ಥಳಾಂತರದ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಇದೇ ವೇಳೆ ಮಹಿಳೆಯರು ತಹಶೀಲ್ದಾರ್ ವಾಹನವನ್ನು ಸುತ್ತುವರೆದು ತಮ್ಮ ಮನವಿಯನ್ನು ಪುರಸ್ಕರಿಸುವಂತೆ ಒತ್ತಾಯಿಸಿದ್ದರು. ತಹಶೀಲ್ದಾರ್ ಸಹ ಅಬಕಾರಿ ಅಧಿಕಾರಿಗಳನ್ನು ಕರೆತಂದು ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದ್ದರು.

ಆದರೆ, ಬುಧವಾರ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಲು ವಿಳಂಬವಾದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಗ್ರಾಮಸ್ಥರು ಬಾರ್‌ ಎದುರು ಟಯರ್‌ಗೆ ಬೆಂಕಿಹಚ್ಚಿ ಪ್ರತಿಭಟನೆಯನ್ನು ತೀರ್ವಗೊಳಿಸಿದ್ದರು. ಇದೇ ಸಂದರ್ಭದಲ್ಲಿ ತಹಶೀಲ್ದಾರ್ ರೇಹಾನ್‌ ಪಾಷ, ಡಿವೈಎಸ್ಪಿ ಟಿ.ಬಿ.ರಾಜಣ್ಣ, ವೃತ್ತ ನಿರೀಕ್ಷಕ ಹನುಮಂತಪ್ಪ ಸಿರಿಹಳ್ಳಿ, ಪಿಎಸ್‌ಐ ಲೋಕೇಶ್, ಕಂದಾಯಾಧಿಕಾರಿ ಲಿಂಗೇಗೌಡ, ಅಬಕಾರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಬಾರ್‌ನ್ನು ತೆರವುಗೊಳಿಸಿದರು. ಬಾರ್‌ ತೆರವುಗೊಳಿಸಿದ ನಂತರ ಪ್ರತಿಭಟನೆಯನ್ನು ವಾಪಾಸ್ ಪಡೆಯಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಓಒಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಶಶಿಕುಮಾರ್, ಈರಣ್ಣ, ನಾಗರಾಜು, ಗ್ರಾಮಸ್ಥರಾದ ಭಾಗ್ಯಮ್ಮ, ಮಾರಕ್ಕ, ನಾಗರಾಜ, ರಾಜಶೇಖರ, ಚಂದ್ರಶೇಖರ, ಪಾಲಕ್ಕ, ಉಷಾ, ಸುಧಾ, ಗಂಗಮ್ಮ, ಗೌರಮ್ಮ, ಮುರುಳಿ, ನಾಗರಾಜು ಮುಂತಾದವರು ಸ್ಥಳದಲ್ಲಿದ್ದು ಬಾರನ್ನು ಸ್ಥಳಾಂತರಿಸಿದ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.

Share this article