ಚಾಮರಾಜನಗರದಲ್ಲಿ ವಿಶ್ವಪ್ರಾಣಿ ಕಲ್ಯಾಣ ಮಂಡಳಿ, ಪಶು-ಪ್ರಾಣಿ ಬಲಿ ನಿರ್ಮೂಲನ ಜಾಗೃತಿ ಮಹಾಸಂಘದ ಅಧ್ಯಕ್ಷ ದಯಾನಂದಸ್ವಾಮಿ ಪತ್ರಕಾಗೋಷ್ಠಿಯಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕೊಳ್ಳೇಗಾಲ ತಾಲೂಕು ಚಿಕ್ಕಲ್ಲೂರು ಶ್ರೀ ಸಿದ್ದಪ್ಪಾಜಿ ಜಾತ್ರೆಯಲ್ಲಿ ಕುರಿ, ಆಡು, ಕೋಳಿ ಮುಂತಾದ ಪ್ರಾಣಿಗಳ ಬಲಿ ತಡೆಯು ಸಂಪೂರ್ಣ ಯಶಸ್ವಿ ಆಗಿದ್ದು, ಭಾರತೀಯ ಧಾರ್ಮಿಕ ಕ್ಷೇತ್ರದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲಾಗಿದೆ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ, ಪಶು-ಪ್ರಾಣಿ ಬಲಿ ನಿರ್ಮೂಲನ ಜಾಗೃತಿ ಮಹಾಸಂಘದ ಅಧ್ಯಕ್ಷ ದಯಾನಂದಸ್ವಾಮಿ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಹೈ ಕೋರ್ಟ್ ಆದೇಶ ಮತ್ತು ಕರ್ನಾಟಕ ಪ್ರಾಣಿಬಲಿ ಪ್ರತಿಬಂಧಕ ಅಧಿನಿಯಮ 1959ರ ಅಡಿಯಲ್ಲಿ ಜಿಲ್ಲಾಡಳಿತ, ಡೀಸಿ ಶಿಲ್ಪಾನಾಗ್, ಎಸ್ಪಿ ಮಾರ್ಗದರ್ಶನದಲ್ಲಿ ಪೊಲೀಸ್ ಅಧಿಕಾರಿಗಳು, ಪೊಲೀಸ್ ಮತ್ತು ಹೋಮ್‌ಗಾರ್ಡ ಸಿಬ್ಬಂದಿ, ಪಶು ಸಂಗೋಪನೆ, ಕಂದಾಯ ಪಂಚಾಯಿತಿ, ಅರಣ್ಯ ಮತ್ತು ಪರಿಸರ ಹಾಗೂ ಇನ್ನಿತರ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ನಮ್ಮ ಮನವಿ ಮೇರೆಗೆ ವ್ಯಾಪಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪ್ರಾಣಿಬಲಿ ತಡೆಯುವಲ್ಲಿ ಸಂಪೂರ್ಣ ಯಶಸ್ವಿ ಆಗಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಜಾತ್ರೆಯ ಸಮಯದಲ್ಲಿ ಅಧಿಕಾರಿಗಳ ಜೊತೆ ಜಾತ್ರೆಯಲ್ಲಿಯೇ ಬೀಡುಬಿಟ್ಟು ಕೂಲಂಕುಷವಾಗಿ ಚಟುವಟಿಕೆಗಳ ಬಗ್ಗೆ ಗಮನಹರಿಸಲಾಯಿತು, ಅಹಿಂಸಾ -ಪ್ರಾಣಿದಯಾ, ಆಧ್ಯಾತ್ಮ ಸಂದೇಶ ಯಾತ್ರೆಯ ಮೂಲಕ ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು ಹಾಗೂ ಚಿಕ್ಕಲ್ಲೂರು ಜಾತ್ರಾ ಪರಿಸರ ಮತ್ತು ಸುತ್ತಮುತ್ತಲಿನ ಊರುಗಳಲ್ಲಿ ವ್ಯಾಪಕ ಪ್ರಚಾರ ಮಾಡಿ ಪ್ರಾಣಿಬಲಿ ತ್ಯಜಿಸಿ ಅಹಿಂಸಾತ್ಮಕವಾಗಿ ಸಾತ್ವಿಕ ಪೂಜೆ ಸಲ್ಲಿಸಬೇಕು ಎಂದು ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದರ ಪರಿಣಾಮ ಇದು ಯಶಸ್ವಿಯಾಗಿದೆ ಎಂದರು. ಪಂಕ್ತಿ ಸೇವೆಗೆ ನಾವೆಂದು ಅಡ್ಡಿಪಡಿಸಿಲ್ಲ, ಅಹಾರ ಅವರವರ ಇಚ್ಚೆ, ಬೇರೆಡೆ ಮಾಂಸದ ಅಡಿಗೆ ತಯಾರಿಸಿಕೊಂಡು ಬಂದು ಪಂಕ್ತಿ ಸೇವೆ ಮಾಡಿದ್ದಾರೆ, ಇದಕ್ಕೆ ನಮ್ಮದೇನು ಅಭ್ಯಂತರವಿಲ್ಲ, ಜಾತ್ರೆಯ ಅವರಣದಲ್ಲಿ ಪ್ರಾಣಿ ಬಲಿ ನಡೆದಿಲ್ಲ ಎಂದರು,
ಯಳಂದೂರು ತಾಲೂಕಿನ ಬಿಳಿಗಿರಿರಂಗನಾಥಸ್ವಾಮಿ ಜಾತ್ರೆಯಲ್ಲೂ ಪ್ರಾಣಿಬಲಿ ತಡೆಯುವಲ್ಲಿ ಜಿಲ್ಲಾಡಳಿತ ಸಂಪೂರ್ಣ ಯಶಸ್ವಿಯಾಗಿದೆ. ಪ್ರಾಣಿಬಲಿ ತಡೆ ಯಶಸ್ವಿಗೆ ಕಾರಣರಾದ ಕರ್ನಾಟಕ ಸರ್ಕಾರ, ಚಾಮರಾಜನಗರ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ದೇವಾಲಯ ಮತ್ತು ಆಡಳಿತ ಮಂಡಳಿ ಮತ್ತು ಸಹಕರಿಸಿದ ಇನ್ನಿತರರಿಗೆ ಹಾಗೂ ಭಕ್ತಕೋಟಿಗೆ ಹೃತ್ಪೂರ್ವಕ ಧನ್ಯಾದಗಳು ಎಂದರು,ಇದೇ ರೀತಿ ಜಿಲ್ಲೆಯ ಎಲ್ಲ ಧಾರ್ಮಿಕ ಸ್ಥಳಗಳಲ್ಲಿ, ದೇವಾಲಯ, ಮಂದಿರ, ದರ್ಗಾ ಮುಂತಾದ ಧಾರ್ಮಿಕ ಸ್ಥಳಗಳಲ್ಲಿ ಯಾವುದೇ ರೀತಿಯ ಪ್ರಾಣಿಗಳ ಬಲಿ ನೀಡದೆ ಅಹಿಂಸಾತ್ಮಕ ರೀತಿ ಸಾತ್ವಿಕ ಪೂಜೆ ಸಲ್ಲಿಸಬೇಕೆಂದು ಮನವಿ ಮಾಡಿದರು. ಜಿಲ್ಲಾಡಳಿತ, ಪೊಲೀಸ್ ಇಲಾಖೆಯು ಶಿಂಷಾ ಮಾರಮ್ಮ, ಬೂದುಬಾಳು ವೆಂಕಟರಮಣಸ್ವಾಮಿ, ಕುರುಬನಕಟ್ಟೆ ಮಂಟೇಸ್ವಾಮಿ ಮುಂತಾದ ಧಾರ್ಮಿಕ ಸ್ಥಳಗಳಲ್ಲಿ ಮತ್ತು ಜಿಲ್ಲೆಯಲ್ಲಿ ಎಲ್ಲಿಯೂ ಯಾವುದೇ ರೀತಿಯ ಪ್ರಾಣಿಗಳ ಬಲಿ ನಡೆಯದಂತೆ ಹಾಗೂ ಗೋವಂಶಾದಿ ಜಾನುವಾರುಗಳ ಹತ್ಯೆ ಆಗದಂತೆ ಮತ್ತು ರಾಜ್ಯದ ಒಳಗೆ ಹಾಗೂ ಹೊರರಾಜ್ಯಗಳಿಗೆ ಗೋವಂಶಾದಿ ಜಾನುವಾರುಗಳ ಅಕ್ರಮ ಸಾಗಣಿಕೆ, ಖರೀದಿ ಮತ್ತು ಮಾರಾಟ ನಡೆಯದಂತೆ ಕಾನೂನು ಮತ್ತು ಕರ್ನಾಟಕ ರಾಜ್ಯ ಹೈ ಕೋರ್ಟ್, ಭಾರತ ಸುಪ್ರೀಂ ಕೋರ್ಟ್ ಆದೇಶಗಳ ಚೌಕಟ್ಟಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಮಾಂಸ ರಪ್ತು ನಿ಼ಷೇಧ ಹಾಗೂ ಗೋವಂಶ ಜಾನುವಾರು ಹತ್ಯೆ ನಿಷೇದ ಕಾಯ್ದೆಯ ಜಾರಿಗೆ ಭಾರತ ಸರ್ಕಾರ ಮುಂದಾಗಬೇಕು, ಅಹಿಂಸೆ ಮತ್ತು ಆಧ್ಯಾತ್ಮ ಹಾಗೂ ಕೃಷಿ ಮತ್ತು ಋಷಿ ಪ್ರಧಾನವಾದ ಭಾರತದಲ್ಲಿ ಸಂಪೂರ್ಣ ಮಾಂಸ ರಫ್ತು ನಿಷೇಧ ಕಾನೂನು ಹಾಗೂ ಸಂಪೂರ್ಣ ಗೋವಂಶ ಜಾನುವಾರು ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದು ಭಾರತವನ್ನು ಸಂಪೂರ್ಣ ಗೋವಂಶ-ಜಾನುವಾರು ಹತ್ಯೆ ಮುಕ್ತ ಮತ್ತು ಮಾಂಸ ರಫ್ತು ಮುಕ್ತ ರಾಷ್ಟ್ರ ಎಂದು ಘೋಷಿಸಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಕೆಚ್ಚಲು ಕೊಯ್ದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು:ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಗೋಮಾತೆಯ ಕೆಚ್ಚಲು ಕೊಯ್ದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಪ್ರಾಣಿಗಳಿಗೆ ಚಿತ್ರ ಹಿಂಸೆ ನೀಡುವವರಿಗೆ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.