ಬಂಜರು ಭೂಮಿ ಬಂಗಾರದ ಭೂಮಿಯಾಗಿದೆ

KannadaprabhaNewsNetwork | Published : Apr 17, 2025 12:05 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ರೈತರ ಬಾಳನ್ನು ಹಸನಾಗಿಸಲು ರೂಪಿಸಿರುವ ನೀರಾವರಿ ಯೋಜನೆಗಳಿಂದಾಗಿ ಅನ್ನದಾತರ ಬಂಜರು ಭೂಮಿ ಇದೀಗ ಬಂಗಾರದ ಭೂಮಿಯಾಗಿ ಪರಿವರ್ತನೆಯಾಗಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ರೈತರ ಬಾಳನ್ನು ಹಸನಾಗಿಸಲು ರೂಪಿಸಿರುವ ನೀರಾವರಿ ಯೋಜನೆಗಳಿಂದಾಗಿ ಅನ್ನದಾತರ ಬಂಜರು ಭೂಮಿ ಇದೀಗ ಬಂಗಾರದ ಭೂಮಿಯಾಗಿ ಪರಿವರ್ತನೆಯಾಗಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ತಿಕೋಟಾ ತಾಲೂಕಿನ ಮಲಕನದೇವರಹಟ್ಟಿಯ ಸಾಳುಂಕೆ ವಸ್ತಿಯ ಬಳಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ಸುಮಾರು 2.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಹಿನ್ನಲೆಯಲ್ಲಿ ಜಿನುಗು ಕೆರೆ ನಿರ್ಮಾಣ(ಸೈಟ್-2)ಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಈ ಜಿನುಗು ಕೆರೆ 4.73 ಚ.ಕಿ.ಮೀ. ವ್ಯಾಪ್ತಿಯನ್ನು ಒಳಗೊಂಡಿದ್ದು, 9 ಎಕರೆ ಪ್ರದೇಶದಲ್ಲಿ 240 ಮೀಟರ್ ಅಂದರೆ 787 ಅಡಿ ಬಂಡ್ ಹೊಂದಿದೆ. 29 ಅಡಿ ಆಳದ ವರೆಗೆ ಒಟ್ಟು 2.33 ಟಿ.ಎಂ.ಸಿ.ಎಫ್.ಟಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಇದರಿಂದ 136 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ದೊರೆಯಲಿದ್ದು, ತೆರೆದ ಬಾವಿ ಮತ್ತು ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಕೂಡ ವೃದ್ಧಿಯಾಗಲಿದೆ. ಈ ಜಿನುಗು ಕೆರೆಗೆ ವರ್ಷದಲ್ಲಿ ಎರಡು ಬಾರಿ ನೀರು ಹರಿಸಲಾಗುವುದು ಎಂದು ಸಚಿವರು ತಿಳಿಸಿದರು.

ನೀರಾವರಿಯಿಂದಾಗಿ ರೈತರ ಭೂಮಿಗೆ ಭಾರೀ ಬೆಲೆ ಬಂದಿದ್ದು, ಯಾವುದೇ ರೈತರು ಭೂಮಿ ಮಾರಿಕೊಳ್ಳಬೇಡಿ. ಎಲ್ಲರು ಕಾಮಗಾರಿಗೆ ಸಹಕರಿಸಿಬೇಕು. ಮೂರು ತಿಂಗಳಲ್ಲಿ ಈ ಕಾಮಗಾರಿ ಪೂರ್ಣವಾಗಲಿದ್ದು, ಈ ಕೆರೆ ಮತ್ತು ಈ ಮುಂಚೆ ನಿರ್ಮಿಸಲಾಗಿರುವ ಕೆರೆ ಎರಡನ್ನು ಒಂದೇ ಸಮಯಕ್ಕೆ ಉದ್ಘಾಟನೆ ಮಾಡಲಾಗುವುದು ಎಂದು ತಿಳಿಸಿದ ಅವರು, ಗುಣಮಟ್ಡದ ಕಾಮಗಾರಿ ಮಾಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಣ್ಣ ನೀರಾವರಿ ಇಲಾಖೆ ವಿಭಾಗದ ಅಧಿಕಾರಿ ವಿಶ್ವನಾಥ ಪೀರಶೆಟ್ಟಿ ಮಾತನಾಡಿ, ಕೆರೆ ನಿರ್ಮಾಣದ ಮಾಹಿತಿಯನ್ನು ನೀಡಿದರು.

ಜಿಲ್ಲಾ ಪಂಚಾಯತಿಯ ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ ಮಾತನಾಡಿ, ಈ ಯೋಜನೆಯಿಂದ ಸುತ್ತಮುತ್ತಲಿನ ಪ್ರದೇಶಕ್ಕೆ ಅನುಕೂಲವಾಗಲಿದೆ. ಮಳೆಗಾಲದಲ್ಲಿ ಮಾತ್ರವಲ್ಲ ಬೇಸಿಗೆಯಲ್ಲೂ ನೀರು ಪೂರೈಸಲು ಕ್ರಮ ಕೈಗೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಮುಖಂಡರಾದ ದಯಾನಂದ ಮಠಪತಿ, ಜಲಸಂಪನ್ಮೂಲ ಇಲಾಖೆ ಎಇಇ ಅಂಬಣ್ಣ ಹರಳಯ್ಯ, ತಹಸೀಲ್ದಾರ್‌ ಸುರೇಶ ಚವಲರ, ತಾಲೂಕು ಪಂಚಾಯತಿ ಇಒ ಬಸವಂತರಾಯ, ಬಿರಾದಾರ, ಬಿಇಒ ಪ್ರಮೋದಿನಿ -ಬಳೂಲಮಟ್ಟಿ, ಸಣ್ಣ ನೀರಾವರಿ ಇಲಾಖೆ ಎಇಇ ವಿನೋದ ವಸ್ತ್ರದ, ಹೆಸ್ಕಾಂ ಎಇಇ ಗೋವಿಂದ ದೇಶಮುಖ ಸೇರಿದಂತೆ ಹಲವರು ಉಪಸ್ಥಿತರಿದ್ದರು.

-------

ಕೋಟ್‌

ಯಾವುದೇ ರೈತರು ಭೂಮಿಯನ್ನು ಮಾರಾಟ ಮಾಡಬೇಡಿ. ನೀರಾವರಿಯಿಂದಾಗ ಭೂಮಿಗೆ ಬಂಗಾರದ ಬೆಲೆ ಬಂದಿದೆ. ತಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆಯಡಿ ನಮಗೆ ಹಂಚಿಕೆಯಾಗಿರುವ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಎರಡು ಕಡೆ ಸರ್ಕಾರಿ ಜಮೀನಿನಲ್ಲಿ ಹೊಂಡಗಳನ್ನು ನಿರ್ಮಿಸಿ ಅಲ್ಲಿ ಒಂದು ಟಿಎಂಸಿ ನೀರು ಸಂಗ್ರಹಿಸಲು ಯೋಜನೆ ರೂಪಿಸಲಾಗುತ್ತಿದೆ. ಇದಕ್ಕೆ ಎಷ್ಟೇ ಹಣ ಖರ್ಚಾದರೂ ಅದನ್ನು ಜಾರಿ ಮಾಡಲಾಗುವುದು.

- ಎಂ.ಬಿ.ಪಾಟೀಲ, ಉಸ್ತುವಾರಿ ಸಚಿವ--------

Share this article