ದೇಶದ ಸಂಸ್ಕೃತಿಯಲ್ಲಿ ಸಂವಿಧಾನದ ಮೂಲ ತತ್ವಗಳ ಬೇರಿದೆ: ಡಾ. ಪಿ. ಪುನೀತ್‌

KannadaprabhaNewsNetwork |  
Published : Nov 27, 2024, 01:00 AM IST
11 | Kannada Prabha

ಸಾರಾಂಶ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ನಮ್ಮ ಆಲೋಚನಾ ಕ್ರಮ ಬದಲಾಗಬೇಕಾಗಿದೆ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗವನ್ನು ಸಮಾನಂತರವಾಗಿ ಕಾಣಬೇಕು. ಪ್ರಸ್ತುತ ಸಮಾಜದಲ್ಲಿ ಔದ್ಯೋಗಿಕ ಕೊರತೆಗಿಂತ ಹೆಚ್ಚಾಗಿ, ಬೇಡಿಕೆ ಅನುಗುಣವಾಗಿ ವಿಷಯ ಆಯ್ಕೆಯ ಸಮತೋಲನ ಆಗುತ್ತಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ನಮ್ಮ ಸಂವಿಧಾನದ ಮೂಲತತ್ವಗಳ ಬೇರು ದೇಶದ ಇತಿಹಾಸ, ನಾಗರಿಕತೆ, ಸಂಸ್ಕೃತಿಯಲ್ಲಿದೆ. ನಮ್ಮದು ಅಪ್ಪಟ ದೇಶೀಯ, ಅಸಮಾನತೆ ನಿರ್ಮೂಲನೆಯ ಪರಿವರ್ತನಾಶೀಲ ಸಂವಿಧಾನ ಎಂದು ದೆಹಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಕಾನೂನು ಪೀಠದ ಪ್ರಾಧ್ಯಾಪಕ ಡಾ.ಪಿ. ಪುನೀತ್ ಹೇಳಿದರು.

ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಮಂಗಳವಾರ ಮಾನವಿಕ ವಿಭಾಗಗಳು ಹಮ್ಮಿಕೊಂಡ ‘ರಾಷ್ಟ್ರೀಯ ಸಂವಿಧಾನ ದಿನ’ ಆಚರಣೆಯಲ್ಲಿ ಅವರು ಮಾತನಾಡಿದರು. ಸಂವಿಧಾನ ಕುರಿತು ಅದರ ರಚನೆ ಸಂದರ್ಭದಲ್ಲಿಯೇ ಆರೋಪಗಳು ಬಂದಿದ್ದವು. ಆದರೆ, ಅದಕ್ಕೆ ರಚನಾ ಸಮಿತಿ ವಿಸ್ತೃತವಾಗಿ ಉತ್ತರಿಸಿತ್ತು ಎಂದರು.

ಸಂವಿಧಾನಗಳ ಸರಾಸರಿ ಜೀವಿತಾವಧಿ 17 ವರ್ಷವಾಗಿದೆ. ಆದರೆ, 76ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಭಾರತದ ಸಂವಿಧಾನ ಜಗತ್ತಿನ ಅತಿದೊಡ್ಡ ಮಾತ್ರವಲ್ಲ ಅತ್ಯುತ್ತಮ ಸಂವಿಧಾನ. 106 ತಿದ್ದುಪಡಿ ಆಗಿದ್ದರೂ ಸ್ಥಿರವಾಗಿದೆ ಎಂದರು.

ಥಾಮಸ್ ಗಿನ್ಸ್ ಬರ್ಗ್ ನಡೆಸಿದ ಅಧ್ಯಯನದ ಪ್ರಕಾರ ಸಂವಿಧಾನದ ಸರಾಸರಿ ಜೀವಿತಾವಧಿ 17 ವರ್ಷ. ವಿಶ್ವದ 798 ಸಂವಿಧಾನ ವ್ಯವಸ್ಥೆಯನ್ನು ಅವರು ಅಧ್ಯಯನ ನಡೆಸಿದ್ದು, ಈ ಪೈಕಿ 192 ಮಾತ್ರ ಇನ್ನೂ ಅನುಷ್ಠಾನದಲ್ಲಿವೆ ಎಂದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ನಮ್ಮ ಆಲೋಚನಾ ಕ್ರಮ ಬದಲಾಗಬೇಕಾಗಿದೆ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗವನ್ನು ಸಮಾನಂತರವಾಗಿ ಕಾಣಬೇಕು. ಪ್ರಸ್ತುತ ಸಮಾಜದಲ್ಲಿ ಔದ್ಯೋಗಿಕ ಕೊರತೆಗಿಂತ ಹೆಚ್ಚಾಗಿ, ಬೇಡಿಕೆ ಅನುಗುಣವಾಗಿ ವಿಷಯ ಆಯ್ಕೆಯ ಸಮತೋಲನ ಆಗುತ್ತಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಮಾನವೀಯತೆಯ ಅತ್ಯುತ್ತಮ ಮೌಲ್ಯಗಳನ್ನು ಹೊಂದಿದ ಸಂವಿಧಾನ ನಮ್ಮದು. ದಾಸ್ಯ, ಶೋಷಣೆ ಮುಕ್ತ ಸಮಾಜ ನೀಡಿದೆ ಎಂದರು. ಅಂದು, ಸತಿ ಪದ್ಧತಿ ಪರವಾಗಿಯೂ ಹೋರಾಡಿದ ಜನ ನಮ್ಮ ದೇಶದಲ್ಲಿ ಇದ್ದರು. ಆದರೆ, ಜನರ ಇಚ್ಛೆಯೇ ಜನರನ್ನು ಆಳಬೇಕು ಎಂದರು. ಗಿಡ ನೆಟ್ಟು ಬೆಳೆಸಿದವರಿಗೆ ಫಲ ದೊರೆಯಬೇಕು. ವೈಚಾರಿಕತೆ ಇದ್ದ ಸಮಾಜ ಮಾತ್ರ ಜನರನ್ನು ಬದುಕಲು ಬಿಡುತ್ತದೆ. ಇಲ್ಲದಿದ್ದರೆ ಅವಸಾನ ಸಹಜ ಎಂದರು.

ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಡಿ, ಕುಲಸಚಿವ (ಶೈಕ್ಷಣಿಕ) ಡಾ.ಟಿ.ಕೆ. ರವೀಂದ್ರನ್ ಇದ್ದರು. ವಿದ್ಯಾರ್ಥಿನಿ ಅನುಷಾ ಮತ್ತು ಶ್ರೀವಲ್ಲಿ ಕಾರ್ಯಕ್ರಮ ನಿರೂಪಿಸಿದರು. ದಿಶಾ ಸ್ವಾಗತಿಸಿದರು. ರಕ್ಷಾ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ತೇಜಸ್ವಿನಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತೋಟಗಾರಿಕೆ ವಿವಿಯಲ್ಲಿ ರೈತ ಸಂಪರ್ಕ ಕೇಂದ್ರ ಸ್ಥಾಪಿಸಿ
ದೈವಾರಾಧನೆ ಬಗ್ಗೆ ಮಾತಿನಲ್ಲಿ ಎಚ್ಚರ ಇರಲಿ: ಸುರೇಶ್‌ ನಾವೂರು